Advertisement

ವಿದ್ಯಾನಿಧಿಗೆ ಸರ್ಕಾರದ ಷರತ್ತುಗಳ ವಿಘ್ನ

11:45 AM Nov 12, 2021 | Team Udayavani |

ಉಡುಪಿ: ರೈತರ ಮಕ್ಕಳಿಗೆ ಸರ್ಕಾರದ ವಿದ್ಯಾನಿಧಿ ವಿದ್ಯಾರ್ಥಿ ವೇತನ ಒದಗಿಸಲು ಮಾಹಿತಿ ಸಂಗ್ರಹ ಪ್ರಕ್ರಿಯೆ ಆರಂಭವಾಗಿದ್ದು, ವಿದ್ಯಾನಿಧಿ ಪಡೆಯಲು ಸರ್ಕಾರ ವಿಧಿಸಿರುವ ಷರತ್ತು ಪೂರೈಸುವುದೇ ಕಷ್ಟಸಾಧ್ಯವಾಗಿದೆ. ತಂದೆ ಅಥವಾ ತಾಯಿ ನಿರ್ದಿಷ್ಟ ಕೃಷಿ ಜಮೀನು ಹೊಂದಿದ್ದರೆ ಮಾತ್ರ ಅವರ ಮಕ್ಕಳು ವಿದ್ಯಾನಿಧಿ ಪಡೆಯಲು ಅರ್ಹರು.

Advertisement

ಸ್ವಂತ ಜಮೀನು ಇಲ್ಲದೆ ಬೇರೆಯವರ ಜಮೀನಿನಲ್ಲಿ ಕೃಷಿ ಮಾಡುತ್ತಿರುವವರ ಮಕ್ಕಳು, ಕೇಂದ್ರ ಅಥವಾ ರಾಜ್ಯ ಸರ್ಕಾರದ ಇತರ ವಿವಿಧ ಇಲಾಖೆಗಳಿಂದ ವಿದ್ಯಾರ್ಥಿ ವೇತನ ಪಡೆ ಯುವ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಸಿಗುವುದಿಲ್ಲ. ಈ ಎರಡು ಷರತ್ತುಗಳೇ ವಿದ್ಯಾರ್ಥಿಗಳಿಗೆ ಸಂಕಷ್ಟ ತಂದೊಡ್ಡಿದೆ. ರೈತ ವಿದ್ಯಾನಿಧಿ ಪಡೆಯಲು ವಿದ್ಯಾರ್ಥಿಗಳಿಗೆ ಜಾತಿ ಅಥವಾ ಆದಾಯದ ಮಿತಿ ಇಲ್ಲ. ಎಲ್ಲ ವರ್ಗದವರಿಗೂ ಅನ್ವಯಿಸುತ್ತದೆ.

ಆದರೆ ವಿದ್ಯಾರ್ಥಿಯ ತಂದೆ ಅಥವಾ ತಾಯಿಯ ಹೆಸರಿನಲ್ಲಿ ಕೃಷಿ ಭೂಮಿ ಇರಬೇಕು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಹಿತ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯಾವುದೇ ವಿದ್ಯಾರ್ಥಿ ವೇತನ, ಮೆರಿಟ್‌ ಶಿಷ್ಯವೇತನ ಪಡೆಯುವ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಅನ್ವಯಿಸುವುದಿಲ್ಲ ಎಂದು ಉಡುಪಿ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿ ಮಾಹಿತಿ ಸಂಗ್ರಹ: ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಬಂದಿರುವ ಸೂಚನೆಯಂತೆ ವಿದ್ಯಾರ್ಥಿಗಳ ಮಾಹಿತಿಯನ್ನು ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್‌ ವ್ಯವಸ್ಥೆ (ಎಸ್‌ಎಟಿಎಸ್‌)ಯಲ್ಲಿ ಅಪ್‌ ಡೇಟ್‌ ಮಾಡುತ್ತಿದ್ದೇವೆ. ಅಪ್‌ಡೇಟ್‌ ಮಾಡಿದ ಮಾಹಿತಿಯನ್ನು ಕೃಷಿ ಇಲಾಖೆಯವರು ಪಡೆದು, ಅಲ್ಲಿಂದ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ವಿದ್ಯಾನಿಧಿ ಹಣ ಜಮಾ ಮಾಡುವುದಾಗಿ ತಿಳಿಸಿದ್ದಾರೆ. ಶಿಕ್ಷಣ ಇಲಾಖೆಯಿಂದ ಕೃಷಿಕ ಕುಟುಂಬದ ವಿದ್ಯಾರ್ಥಿಗಳ ಮಾಹಿತಿಯನ್ನು ಮಾತ್ರ ಅಪ್‌ಲೋಡ್‌ ಮಾಡುತ್ತಿಲ್ಲ.

ಇದನ್ನೂ ಓದಿ:– ಸೆಮಿ ಫೈನಲ್ ನಲ್ಲಿ ಸೋಲುಂಡ ಪಾಕ್: ಮತ್ತೆ ಟ್ರೆಂಡ್ ಆಗುತ್ತಿದೆ ‘ಮೌಕಾ ಮೌಕಾ’

Advertisement

ಎಲ್ಲ ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್‌ಲೋಡ್‌ ಮಾಡುತ್ತಿದ್ದೇವೆ. ಕೃಷಿಕ ಕುಟುಂಬದ ವಿದ್ಯಾರ್ಥಿಗಳು ಯಾರು ಎಂಬುದನ್ನು ಕೃಷಿ ಇಲಾಖೆಯಿಂದ ದೃಢೀಕರಿಸಿ ವಿದ್ಯಾನಿಧಿ ನೀಡುತ್ತಾರೆ. ವಿದ್ಯಾರ್ಥಿಗಳ ಕುಟುಂಬದ ಜಮೀನಿನ ಮಾಹಿತಿ ಕೃಷಿ ಇಲಾಖೆಯಲ್ಲೇ ಇರುವುದರಿಂದ ಅಲ್ಲಿಂದಲೇ ಮುಂದಿನ ಪ್ರಕ್ರಿಯೆ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಡಿಡಿಪಿಯು ಮಾರುತಿ ವಿವರ ನೀಡಿದ್ದಾರೆ.

ಆಧಾರ್‌ ಲಿಂಕ್‌: ರಾಜ್ಯದ ಪದವಿಪೂರ್ವ ಮಟ್ಟದ ಸುಮಾರು 3,500 ವಿದ್ಯಾರ್ಥಿಗಳ ಆಧಾರ್‌ ಸಂಖ್ಯೆ ಯೂ ಬ್ಯಾಂಕ್‌ ಖಾತೆಗಳಿಗೆ ಲಿಂಕ್‌ ಆಗಿಲ್ಲ. ಬ್ಯಾಂಕ್‌ ಖಾತೆಗೆ ಲಿಂಕ್‌ ಆಗಿರುವ ಅರ್ಹ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾನಿಧಿ ಸಿಗಲಿದೆ. ಉಡುಪಿ ಜಿಲ್ಲೆಯಲ್ಲಿ ಶೇ. 90ರಷ್ಟು ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಮಾಡಲಾಗಿದೆ. ಉಳಿದ ಶೇ. 10ರಷ್ಟು ವಿದ್ಯಾ ರ್ಥಿಗಳ ಆಧಾರ್‌ ಲಿಂಕ್‌ ಕೂಡ ಶೀಘ್ರವೇ ಆಗಲಿದೆ. ಇದರ ಜತೆಗೆ ಕೃಷಿ ಇಲಾಖೆಯ ಅಧಿಕಾರಿಗಳು ಕಾಲೇಜುಗಳಿಗೆ ಭೇಟಿ ನೀಡಿ, ವಿದ್ಯಾನಿಧಿಯ ಕುರಿತು ಮಾಹಿತಿ ನೀಡುವ ಕಾರ್ಯ ಆರಂಭವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ

“ವಿದ್ಯಾನಿಧಿ ವಿದ್ಯಾರ್ಥಿ ವೇತನ ಪಡೆಯಲು ವಿದ್ಯಾರ್ಥಿಗಳ ಆಧಾರ್‌ ಬ್ಯಾಂಕ್‌ ಖಾತೆಗೆ ಲಿಂಕ್‌ ಆಗಿರಬೇಕು. ಹಾಗೆಯೇ ಯಾರ ಹೆಸರಿನಲ್ಲಿ ಜಮೀನು ಇದೆಯೊ ಅವರ ಆಧಾರ್‌ ಕಡ್ಡಾಯವಾಗಿ ಬೇಕಾಗುತ್ತದೆ. ಇಲ್ಲಿ ಆದಾಯದ ಮಿತಿ ಇಲ್ಲ. ಜಮೀನು ಹೊಂದಿರುವ ಎಲ್ಲ ರೈತರ ಮಕ್ಕಳಿಗೂ ಇದರ ಸೌಲಭ್ಯ ಸಿಗಲಿದೆ.– ನಬ್ರಿಜೇಶ್‌ ಕುಮಾರ್‌, ಆಯುಕ್ತ, ಕೃಷಿ ಇಲಾಖೆ.

  • – ರಾಜು ಖಾರ್ವಿ ಕೊಡೇರಿ
Advertisement

Udayavani is now on Telegram. Click here to join our channel and stay updated with the latest news.

Next