ಬೆಂಗಳೂರು: ವಿಧಾನಸೌಧ ಮುಂಭಾಗವೇ ಕುಟುಂಬವೊಂದು ಪೆಟ್ರೋಲ್ ಸುರಿದು ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ವಿಧಾನಸೌಧ ಮುಂಭಾಗದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಶುಕ್ರವಾರ ಬೆಳಿಗ್ಗೆ 9.45ರ ಸುಮಾರಿಗೆ ಅಶ್ವತ್ಥ ರೆಡ್ಡಿ ಕುಟುಂಬ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆಂಬ ಮಾಹಿತಿ ಆಧರಿಸಿ ಕೂಡಲೇ ಹೊಯ್ಸಳ ಸಿಬ್ಬಂದಿ ತೆರಳಿ ಬಂಧಿಸಿದೆ.
ವಿಧಾನಸೌಧ ಠಾಣೆ ಪೊಲೀಸರು ಗುತ್ತಿಗೆದಾರ ಅಶ್ವತ್ಥರೆಡ್ಡಿ, ಅವರ ಪತ್ನಿ ನಾಗರತ್ನ, ಪುತ್ರ ಸಂಜಯ್‌ನನ್ನು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಬನ್ನೇರುಘಟ್ಟ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತ್ಯನಾರಾಯಣ್ ವಿರುದ್ಧ ಯಾವುದೇ ಕ್ರಮ ಜರುಗಿಸದಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಕುಟುಂಬ ಹೇಳಿಕೆ ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2008ರಲ್ಲಿ ಬನ್ನೇರುಘಟ್ಟ ಅರಣ್ಯಪ್ರದೇಶದಲ್ಲಿ ನೀಲಗಿರಿ ಮರಗಳನ್ನು ತೆರವುಗೊಳಿಸಲು ತಮ್ಮ ಟ್ರ್ಯಾಕ್ಟರನ್ನು ಸತ್ಯನಾರಾಯಣ ಬಾಡಿಗೆ ಪಡೆದುಕೊಂಡಿದ್ದರು. ಈ ವೇಳೆ ಟ್ರ್ಯಾಕ್ಟರ್ ಉರುಳಿಬಿದ್ದು ಕಾರ್ಮಿಕ ಹರಿಪ್ರಸಾದ್ ಎಂಬುವರು ಗಂಭೀರ ಗಾಯಗೊಂಡು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿದಂತೆ “ಪೊಲೀಸ್ ಠಾಣೆಗೆ ದೂರು ನೀಡಬೇಡಿ, ನಾನು ಪರಿಹರಿಸುತ್ತೇನೆ ಎಂದು 50 ಸಾವಿರ ರೂ. ನೀಡಿ ಬಳಿಕ 10 ಲಕ್ಷ ರೂ. ನೀಡುವುದಾಗಿ’ ಸತ್ಯನಾರಾಯಣ ಭರವಸೆ ನೀಡಿದ್ದರು.
ಆದರೆ ಹರಿಪ್ರಸಾದ್ ಚಿಕಿತ್ಸೆಗೆ 15 ಲಕ್ಷ ರೂ. ಖರ್ಚಾಗಿದೆ. ಫೈನಾನ್ಸಿಯರ್‌ಗಳಿಂದ ಹಣ ತಂದಿದ್ದರಿಂದ ಅದು ಬಡ್ಡಿ ಸೇರಿ 70 ಲಕ್ಷ ರೂ.ಗಳಾಯಿತು. ಅದನ್ನು ತೀರಿಸಲು ಜಮೀನು ಮಾರಿದ್ದೇನೆ. ಆದರೆ, ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದ ಅಧಿಕಾರಿ ಸತ್ಯನಾರಾಯಣ್ ಮಾತು ಮರೆತರು. ಜತೆಗೆ, ಕೇಸ್ ಸಂಬಂಧ ಕಚೇರಿಗೆ ಬರಬೇಡಿ ಎಂದು ಧಮಕಿ ಹಾಕಿದರು ಎಂದು ಅಶ್ವತ್ಥ ರೆಡ್ಡಿ ಆರೋಪಿಸಿದ್ದಾರೆ.
ಸತ್ಯನಾರಾಯಣ್ ವಿರುದ್ಧ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗೆ ದೂರು ನೀಡಿದರೂ ಸಹಾಯ ದೊರೆತಿಲ್ಲ. ಹೀಗಾಗಿ ಮನನೊಂದು ಆತ್ಮಹತ್ಯೆಗೆ ನಿರ್ಧರಿಸಿದ್ದಾಗಿ ಹೇಳಿಕೆ ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಘಟನೆ ಬಳಿಕ ಅರಣ್ಯಾಧಿಕಾರಿ ಸತ್ಯನಾರಾಯಣ ಅವರಿಗೆ ವಿಧಾನಸೌಧ ಠಾಣೆ ಪೊಲೀಸರು ಕರೆ ಮಾಡಿದರೂ ಸ್ವೀಕರಿಸಿಲ್ಲ. ಅಶ್ವತ್ಥರೆಡ್ಡಿ ಕುಟುಂಬ ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ತನಿಖೆ ಮುಂದುವರಿಸಿರುವುದಾಗಿ ಅಧಿಕಾರಿ ಹೇಳಿದರು.