ಬೆಂಗಳೂರು:ರೈತರು ಸಮಸ್ಯೆಗಳನ್ನು ಹೇಳಿಕೊಳ್ಳಲು ವಿಧಾನಸೌಧ ಬಾಗಿಲು ಸದಾ ತೆರೆದಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ರೈತರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಸೇರಿ ರೈತರು ಪ್ರತಿಭಟನೆ ಮಾಡುತ್ತಿರುವುದು ಗಮನದಲ್ಲಿದೆ. ಅಲ್ಲಿನ ಜಿಲ್ಲಾಧಿಕಾರಿಗಳು ಈಗಾಗಲೇ ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಮಾತನಾಡಿ ಅರ್ಧ ಸಮಸ್ಯೆ ಬಗೆಹರಿಸಿದ್ದಾರೆ.
ಮಾಲೀಕರು ಬಾಕಿಹಣ ಪಾವತಿಗೂ ಒಪ್ಪಿದ್ದಾರೆ. ಮಾತುಕತೆ ನಂತರ ಚಪ್ಪಾಳೆ ತಟ್ಟಿ ಸಿಹಿ ಹಂಚಿಕೊಂಡು ಸಂತಸ ಪಟ್ಟು ಹೋದವರು ಸಂಜೆ ಮತ್ತೂಂದು ವಿಷಯ ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.
ರೈತರ ಸಮಸ್ಯೆ ಏನೇ ಇದ್ದರೂ ಸರ್ಕಾರದ ಮುಂದಿಡಿ. ಆದರೆ, ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಹೇಳುತ್ತಿರುವವರು ರೈತರಲ್ಲ. ಗಡುವು ಕೊಡುವುದು ಬೇಡ. ರಾಜಕೀಯ ಬೆರೆಸುವುದು ಬೇಡ. ಸೋಮವಾರ ಬೆಳಗಾವಿ ರೈತ ಮುಖಂಡರನ್ನು ವಿಧಾನಸೌಧಕ್ಕೆ ಮಾತುಕತೆಗೆ ಬರಲು ಹೇಳಿದ್ದೇನೆ ಎಂದು ತಿಳಿಸಿದರು.
ಪ್ರತಿಭಟನೆ ಹಿಂದಕ್ಕೆ: ಈ ಮಧ್ಯೆ, ಬೆಳಗಾವಿಯಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ, ಮುಖ್ಯಮಂತ್ರಿಗಳು ನೀಡಿದ ಭರವಸೆ ಮೇರೆಗೆ ರೈತರು ಎರಡು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿದ್ದಾರೆ. ಧರಣಿ ವಾಪಸ್ ಪಡೆದಿರುವ ಬಗ್ಗೆ ಮುಖ್ಯಮಂತ್ರಿಗಳ ಕಾರ್ಯಾಲಯಕ್ಕೆ ಮಾಹಿತಿ ನೀಡಲಾಗುವುದು.
ಆದರೆ, ಸೋಮವಾರದ ಸಭೆಯ ಕುರಿತು ಇದುವರೆಗೆ ತಮಗೆ ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ಅಧಿಕೃತ ಮಾಹಿತಿ ಬಂದಿಲ್ಲ
ಎಂದರು. ಇದೇ ವೇಳೆ, ಕಬ್ಬಿನ ಬೆಲೆ ನಿಗದಿಪಡಿಸುವಲ್ಲಿ ಕಾರ್ಖಾನೆಗಳು ತೋರುತ್ತಿರುವ ಹಠಮಾರಿ ಧೋರಣೆ ಖಂಡಿಸಿ ಶುಕ್ರವಾರ ಕರೆ ನೀಡಿದ್ದ ಮುಧೋಳ (ಬಾಗಲಕೋಟೆ ಜಿಲ್ಲೆ) ಬಂದ್ ಯಶಸ್ವಿಯಾಗಿದೆ.