Advertisement

ವಿಧಾನ ಪರಿಷತ್‌ ಟಿಕೆಟ್‌ ಪಡೆಯಲು ಜೋರಾಗಿದೆ ಕಸರತ್ತು

01:08 PM Nov 10, 2021 | Team Udayavani |

ಮಸ್ಕಿ: ರಾಜ್ಯ ವಿಧಾನ ಪರಿಷತ್‌ ಸದಸ್ಯ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಹಾಲಿ ಎಂಎಲ್‌ಸಿ ಬಸವರಾಜ ಪಾಟೀಲ್‌ ಇಟಗಿ ಪ್ರತಿನಿಧಿಸಿದ್ದ ರಾಯಚೂರು-ಕೊಪ್ಪಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಟಿಕೆಟ್‌ ಪೈಪೋಟಿ ಪ್ರಬಲವಾಗಿ ನಡೆದಿದೆ.

Advertisement

2015ರಲ್ಲಿ ಈ ಕ್ಷೇತ್ರಕ್ಕೆ ಚುನಾಯಿತರಾಗಿ ಆಯ್ಕೆಯಾಗಿದ್ದ ಬಸವರಾಜ ಪಾಟೀಲ್‌ ಇಟಗಿ ಪುನಃ ಸ್ಪರ್ಧೆಗೆ ನಿರಾಸಕ್ತಿ ತೋರಿದ್ದರಿಂದ ಹೊಸ ಮುಖಗಳಿಂದ ಕಳೆದೊಂದು ತಿಂಗಳಿಂದಲೂ ಟಿಕೆಟ್‌ಗೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಈಗ ಚುನಾವಣೆಗೆ ಅಧಿಸೂಚನೆ ಹೊರ ಬಿದ್ದಿದ್ದು ಸ್ಥಳೀಯ ಸಂಸ್ಥೆ ಚುನಾಯಿತರು ವೋಟ್‌ ಮಾಡುವ ಈ ಸ್ಥಾನದ ಚುನಾವಣೆಗೆ ಈಗ ಮತ್ತಷ್ಟು ಮಹತ್ವ ಬಂದಿದೆ.

ಮೂರು ಹೆಸರು ಪ್ರಸ್ತಾಪ

2015ರಲ್ಲಿ ರಾಯಚೂರು-ಕೊಪ್ಪಳ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಕ್ಷೇತ್ರಕ್ಕೆ ಚುನಾವಣೆ ನಡೆದಾಗ ಆಗ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಬಸವರಾಜ ಪಾಟೀಲ್‌ ಇಟಗಿ (3441 ಪಡೆದ ಮತ) 328 ಮತಗಳ ಅಂತರದಿಂದ ವಿಜೇತರಾಗಿದ್ದರು. ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಸಿ.ವಿ.ಚಂದ್ರಶೇಖರ (3113) ಪರಾಭವಗೊಂಡಿದ್ದರು. ಈಗ ಇದೇ ಸ್ಥಾನಕ್ಕೆ ಡಿ.10ರಂದು ಮತದಾನ ದಿನಾಂಕ ಘೋಷಣೆ ಮಾಡಲಾಗಿದೆ. ಈಗ ನಡೆಯುವ ಈ ಸ್ಥಾನಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡು ಪಕ್ಷದಲ್ಲೂ ಟಿಕೆಟ್‌ಗೆ ಪೈಪೋಟಿ ಆರಂಭವಾಗಿದೆ. ಅದರಲ್ಲೂ ಈ ಬಾರಿ ಕಾಂಗ್ರೆಸ್‌ನಲ್ಲಿ ಆಂತರಿಕ ಪೈಪೋಟಿ ಹೆಚ್ಚಾಗಿದೆ. ರಾಯಚೂರು ಜಿಲ್ಲಾ ಕಾಂಗ್ರೆಸ್‌ ಮುಖಂಡರ ಬಳಿ ಮೂವರ ಹೆಸರು ಇದುವರೆಗೆ ಪ್ರಸ್ತಾಪವಾಗಿವೆ.

ಶರಣಗೌಡ ಪಾಟೀಲ್‌ ದೇವದುರ್ಗ, ರಾಮಣ್ಣ ಇರಬಗೇರಾ, ಮಲ್ಲಿಕಾರ್ಜುನ ಪಾಟೀಲ್‌ ಯದ್ದಲದಿನ್ನಿ ಮೂವರು ಆಕಾಂಕ್ಷಿಗಳಿರುವ ಪಟ್ಟಿಯನ್ನು ಜಿಲ್ಲಾ ಕಾಂಗ್ರೆಸ್‌ ಕೆಪಿಸಿಸಿ ಕಚೇರಿಗೆ ಕಳುಹಿಸಿದೆ. ಆದರೆ ಇದರಲ್ಲಿ ಮಸ್ಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಯದ್ದಲದಿನ್ನಿ ಹೆಸರು ಮುಂಚೂಣಿಯಲ್ಲಿದೆ. ರಾಯಚೂರು, ಕೊಪ್ಪಳ ಎರಡು ಜಿಲ್ಲೆಯ ಕಾಂಗ್ರೆಸ್‌ನ ಹಿರಿಯ ಮುಖಂಡರು, ರಾಜ್ಯಮಟ್ಟದ ನಾಯಕರು ಕೂಡ ಮಲ್ಲಿಕಾರ್ಜುನ ಪಾಟೀಲ್‌ ಯದ್ದಲದಿನ್ನಿ ಅವರಿಗೆ ಟಿಕೆಟ್‌ ನೀಡಲು ಹೆಚ್ಚು ಒಲವು ತೋರುತ್ತಿರುವುದರಿಂದ ಮಸ್ಕಿ ರಾಜಕೀಯ ವಲಯದಲ್ಲೂ ಸಂಚಲನ ಉಂಟು ಮಾಡಿದೆ. ಇದಕ್ಕಾಗಿ ಪ್ರಚಾರದ ಪೂರ್ವ ತಯಾರಿ ಕೂಡ ಬಲವಾಗಿ ನಡೆದಿವೆ.

Advertisement

ಇಲ್ಲೂ ಪೈಪೋಟಿ

ಬಿಜೆಪಿಯಲ್ಲೂ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ. ಕಳೆದ ಬಾರಿ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದ ಸಿ.ವಿ.ಚಂದ್ರಶೇಖರ ಪುನರ್‌ ಸ್ಪರ್ಧೆಗೆ ಆಸಕ್ತಿ ತೋರಿದ್ದರೆ, ಇವರ ಜತೆಗೆ ಜಿಲ್ಲೆಯ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ವಿಶ್ವನಾಥ ಲಿಂಗಸುಗೂರು, ಶರಣು ತಳ್ಳಿಕೇರಿ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಲ್ಲೂ ಎಂಎಲ್ಸಿ ಟಿಕೆಟ್‌ ಗಿಟ್ಟಿಸಲು ಬಲವಾದ ಪೈಪೋಟಿ ನಡೆದಿದ್ದು ಯಾರಿಗೆ ಫೈನಲ್‌ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಮಡಿಕೇರಿ: ಬಿಜೆಪಿ ಪ್ರಮುಖರು, ನಗರಸಭಾ ಸದಸ್ಯರನ್ನು ವಶಕ್ಕೆ ಪಡೆದ ಪೊಲೀಸರು

ಆರ್ಥಿಕ ಬಲ ಮಾನದಂಡ ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ “ಲಕ್ಷ್ಮೀ’ ಪುತ್ರರನ್ನೇ ಕಣಕ್ಕೆ ಇಳಿಸಬೇಕು ಎಂಬುದು ಕಾಂಗ್ರೆಸ್‌, ಬಿಜೆಪಿ ಮುಖಂಡರ ಇರಾದೆ. ಹೀಗಾಗಿ ಎರಡು ಪಕ್ಷದಿಂದ ಎಂಎಲ್ಸಿ ಸ್ಥಾನದ ಟಿಕೆಟ್‌ಗೆ ಬೇಡಿಕೆ ಇಟ್ಟ ವ್ಯಕ್ತಿಗಳನ್ನು ಅಳೆದೂ ತೂಗಿ ಲೆಕ್ಕ ಹಾಕಲಾಗುತ್ತಿದೆ. ಎರಡು ಜಿಲ್ಲೆಯಲ್ಲೂ ಉತ್ತಮ ಹೆಸರು, ಮುಖಂಡರ ಜತೆಗಿನ ಒಡನಾಟ ಜತೆಗೆ ಸ್ಥಳೀಯ ಸಂಸ್ಥೆಗಳ(ಜಿಪಂ, ತಾಪಂ, ಗ್ರಾಪಂ) ಸದಸ್ಯರನ್ನು ಸೆಳೆಯುವ ಬಲ ಇರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಚಿಂತನೆ ನಡೆದಿದೆ.

ಎಂಎಲ್ಸಿ ಸ್ಥಾನಕ್ಕೆ ಸ್ಪರ್ಧೆ ಮಾಡಲು ಜಿಲ್ಲೆಯಲ್ಲಿ ಹಲವು ಮುಖಂಡರು ಬೇಡಿಕೆ ಇಟ್ಟಿದ್ದಾರೆ. ಮೂವರಿಂದ ನಾಲ್ಕು ಜನರ ಹೆಸರು ಪಟ್ಟಿ ಮಾಡಿಕೊಂಡಿದ್ದೇವೆ. ಇವರ ಹೆಸರನ್ನು ಹೈಕಮಾಂಡ್‌ಗೆ ಸಲ್ಲಿಸುತ್ತೇವೆ. -ರಮಾನಂದ ಯಾದವ್‌, ಬಿಜೆಪಿ ಜಿಲ್ಲಾಧ್ಯಕ್ಷ, ರಾಯಚೂರು

ಈ ಬಾರಿ ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ಸ್ಪರ್ಧೆ ಮಾಡಲು ಕೊಪ್ಪಳ-ರಾಯಚೂರು ಎರಡು ಜಿಲ್ಲೆಯ ಹಿರಿಯ ಮುಖಂಡರು ಸಲಹೆ ನೀಡಿದ್ದಾರೆ. ಹೀಗಾಗಿ ನಾನು ಸ್ಪರ್ಧೆ ಮಾಡಲು ಇಚ್ಛಿಸಿದ್ದೇನೆ. ವರಿಷ್ಠರು ಕೂಡ ಟಿಕೆಟ್‌ ನೀಡುವ ಭರವಸೆ ನೀಡಿದ್ದಾರೆ. -ಮಲ್ಲಿಕಾರ್ಜುನ ಯದ್ದಲದಿನ್ನಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಸ್ಕಿ

-ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next