Advertisement

ವಿಧಾನ ಕದನ 2023: ಮೂಡುಬಿದರೆಯಲ್ಲಿ ಕಾಂಗ್ರೆಸ್‌ನಿಂದ ಮಿಥುನ್‌ ರೈ ಮುಂಚೂಣಿಯಲ್ಲಿ

09:30 PM Mar 16, 2023 | Team Udayavani |

ಮಂಗಳೂರು: ಅದು ಯಾವುದೇ ಕ್ಷೇತ್ರ ಇರಲಿ, ಕಾಂಗ್ರೆಸ್‌ ಅಭ್ಯರ್ಥಿ ಯಾರು? ಎಂದು ಊಹಿಸುವುದು ತುಸು ಕಷ್ಟಸಾಧ್ಯವೇ. ಕಾರಣ ಪಕ್ಷದ ಟಿಕೆಟ್‌ಗಾಗಿ ಈ ಬಾರಿ ಕನಿಷ್ಠ 2-3 ಅಭ್ಯರ್ಥಿಗಳಾದರೂ ಬಿರುಸಿನ ಪೈಪೋಟಿ ನಡೆಸುತ್ತಿದ್ದಾರೆ.

Advertisement

ಪಕ್ಷದ ಹೈಕಮಾಂಡ್‌ ತನ್ನ ಅಭ್ಯರ್ಥಿಗಳನ್ನು ಅಖೈರುಗೊಳಿಸಿ ಯಾದಿಯನ್ನು ಬಿಡುಗಡೆಗೊಳಿಸಿದಾಗಲೇ ಕುತೂಹಲಕ್ಕೆ ತೆರೆ ಬೀಳುತ್ತದೆ. ಆದರೆ ಈ ಬಾರಿ ಮೂಡುಬಿದರೆ ಕ್ಷೇತ್ರದಲ್ಲಿ ಮಿಥುನ್‌ ರೈ ಹೆಸರು ಬಹುತೇಕ ಪಕ್ಕಾ ಆದಂತಿದೆ. ಅಧಿಕೃತವಾಗಿ ಘೋಷಣೆ ಆಗಬೇಕಿದೆ. 2018ರಲ್ಲೇ ಮಿಥುನ್‌ ಈ ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿ ತೀವ್ರ ಪ್ರಯತ್ನ ನಡೆಸಿದ್ದರು. ಆದರೆ ಅಭಯಚಂದ್ರರಿಗೆ ಟಿಕೆಟ್‌ ಕೊಟ್ಟಿದ್ದರ ಹಿನ್ನೆಲೆಯಲ್ಲಿ ಮಿಥುನ್‌ ರೈ ಅವರಿಗೆ ಅವಕಾಶ ಕೈ ತಪ್ಪಿತ್ತು. ಅಭಯಚಂದ್ರ ಜೈನ್‌ ಈಗಾಗಲೇ ತಾವು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ 2018ರ ಚುನಾವಣೆ ಸಂದರ್ಭದಲ್ಲೂ ಇದೇ ಮಾತು ಹೇಳಿದ್ದರೂ ಕೊನೆಯಲ್ಲಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಸ್ಪರ್ಧಿಸಿದ್ದರು.

2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದ ಮಿಥುನ್‌ ರೈ, ಬಿಜೆಪಿಯ ನಳಿನ್‌ ಕುಮಾರ್‌ ಕಟೀಲು ಅವರ ವಿರುದ್ಧ ಸೋಲನುಭವಿಸಿದ್ದರು.

ಬಿಜೆಪಿಯಲ್ಲಿ ಕುತೂಹಲ

ಬಿಜೆಪಿಯಲ್ಲಿ ಅದರಲ್ಲೂ ಕರಾವಳಿಯಲ್ಲಿ ಪಕ್ಷದ ಟಿಕೆಟ್‌ ತಿಂಗಳುಗಳ ಮುನ್ನವೇ ಅಧಿಕೃತ ಗೊಂಡಿರುತ್ತದೆ. ಆ ಬಳಿಕ ಯಾವುದೇ ಗೊಂದಲ ಇರದು. ಆದರೆ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯಲ್ಲಿ ಹೊಸ ಪ್ರಯೋಗಗಳು ನಡೆಯತೊಡಗಿವೆ. ಹೀಗಾಗಿ ಈ ಕ್ಷೇತ್ರದಿಂದ ಕಣಕ್ಕಿಳಿಯುವ ಅಭ್ಯರ್ಥಿ ಕುರಿತು ಕುತೂಹಲ ಇದೆ. ಕೆಲವು ಹಾಲಿ ಶಾಸಕರು ಸೀಟು ಬಿಟ್ಟುಕೊಡ ಬೇಕಾಗಬಹುದು ಎನ್ನುವ ಮುನ್ಸೂಚನೆಯನ್ನು ಪಕ್ಷದ ಹಿರಿಯರು ಈಗಾಗಲೇ ನೀಡಿದ್ದಾರೆ ಎನ್ನಲಾಗಿದೆ. ಈಗ ಪಕ್ಷದ ವರಿಷ್ಠರ ಸಭೆಯಲ್ಲೂ ಇದೇ ಸಂಗತಿ ಮುನ್ನೆಲೆಗೆ ಬಂದಿದ್ದು ಡಜನ್‌ನಷ್ಟು ಶಾಸಕರು ಈ ಬಾರಿ ಟಿಕೆಟ್‌ ವಂಚಿತರಾಗಲಿದ್ದಾರೆ ಎನ್ನಲಾಗುತ್ತಿದೆ. ಈ ಚರ್ಚೆಯ ವ್ಯಾಪ್ತಿಯಲ್ಲಿ ಮೂಡುಬಿದಿರೆ ಕ್ಷೇತ್ರವೂ ಹೊರತಾಗಿಲ್ಲ.

Advertisement

ಶಾಸಕ ಉಮಾನಾಥ ಕೋಟ್ಯಾನ್‌ ತಾವೇ ಅಭ್ಯರ್ಥಿ ಎಂದು ಹಲವು ಕಡೆ ಹೇಳಿದ್ದು, ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ. ತಮ್ಮ ಅವಧಿಯ ಕೆಲಸ ನೋಡಿ ಮತದಾರರು ಬೆಂಬಲಿಸುತ್ತಾರೆ ಎಂಬ ನಂಬಿಕೆಯಲ್ಲಿದ್ದಾರೆ. ಆದರೆ ಇತ್ತೀಚೆಗಷ್ಟೇ ಯಾವುದೋ ಒಂದು ಕಾರ್ಯಕ್ರಮದಲ್ಲಿ ನೀಡಿದ್ದರೆನ್ನಲಾದ ವಿವಾದಿತ ಹೇಳಿಕೆ ಏನಾದರೂ ಸಮಸ್ಯೆ ತಂದೊಡ್ಡಿದರೂ ಅಚ್ಚರಿ ಇಲ್ಲ ಎಂಬ ಮಾತು ಕೇಳಿಬರುತ್ತಿದೆ. ಈ ಕ್ಷೇತ್ರದಿಂದ ಪಕ್ಷದ ಜಿಲ್ಲಾಧ್ಯಕ್ಷ ಸುದರ್ಶನ್‌ ಎಂ. ಇವರೂ ಅವಕಾಶ ಆಕಾಂಕ್ಷಿಯಾಗಿದ್ದು, ಬಿಲ್ಲವ ಸಮುದಾಯದವರೇ ಎಂಬುದು ಗಮನಾರ್ಹ ಅಂಶ. ಇವರು ಮುಖ್ಯವಾಗಿ ಪಕ್ಷದ ರಾಜ್ಯಾಧ್ಯಕ್ಷರಿಗೆ ಆಪ್ತರಾಗಿದ್ದು, ಬಿಜೆಪಿಯಲ್ಲೇ ಇದ್ದವರು. ಅವಕಾಶ ಸಿಕ್ಕಿದರೆ ಸ್ಪರ್ಧಿಸುವ ಲೆಕ್ಕಾಚಾರದಲ್ಲಿದ್ದಾರೆ.

ಅಮರನಾಥ ಶೆಟ್ಟಿ ಪುತ್ರಿ ಕಣಕ್ಕೆ?
ಮಾಜಿ ಸಚಿವ ಅಮರನಾಥ ಶೆಟ್ಟಿಯವರು ಮೂರು ಬಾರಿ ಶಾಸಕರಾಗಿದ್ದ ಕ್ಷೇತ್ರವಿದು, ಅವರಿದ್ದಾಗ ಜನತಾ ದಳಕ್ಕೆ ಇಲ್ಲಿ ಬಲವಿತ್ತು. ಕ್ರಮೇಣ ಬಿಜೆಪಿ ಹಾಗೂ ಕಾಂಗ್ರೆಸ್‌ ಬಲವಾಗುತ್ತಾ ಬಂದಿದ್ದರೂ ತಮ್ಮದೇ ಚರಿಷ್ಮಾದಲ್ಲಿ ಗೌರವಾರ್ಹ ಪ್ರಮಾಣದ ಮತಗಳನ್ನು ಪಡೆಯುತ್ತಿದ್ದವರು. ಈಗ ಅವರಿಲ್ಲ, ಅವರ ಪುತ್ರಿ, ದಂತ ವೈದ್ಯೆ ಡಾ| ಅಮರಶ್ರೀ ಈ ಬಾರಿ ಜೆಡಿಎಸ್‌ನಿಂದಲೇ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದಾರೆ. ಜೆಡಿಎಸ್‌ ನಾಯಕರು ಈ ಬಗ್ಗೆ ಒಲವು ತೋರುವ ಸಾಧ್ಯತೆ ಹೆಚ್ಚಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next