Advertisement

ವಿಧಾನ ಮಂಡಲ ಅಧಿವೇಶನ: ಕಲಾಪಗಳಲ್ಲಿ ಜನಹಿತಕ್ಕೆ ಆದ್ಯತೆ ಸಿಗಲಿ

11:41 PM Jul 02, 2023 | Team Udayavani |

ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯ ವಿಧಾನ ಮಂಡಲದ ಬಜೆಟ್‌ ಅಧಿವೇಶನ ಸೋಮವಾರ ಆರಂಭ­ಗೊಳ್ಳಲಿದೆ. ಈ ಅಧಿವೇಶನ ರಾಜ್ಯ ಸರಕಾರ ಮತ್ತು ವಿಪಕ್ಷಗಳ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.

Advertisement

ಅಧಿವೇಶನದ ಮೊದಲ ದಿನ ರಾಜ್ಯಪಾಲರು ಜಂಟಿ ಸದನಗಳನ್ನು­ದ್ದೇಶಿಸಿ ಭಾಷಣ ಮಾಡಲಿದ್ದು ಹೊಸ ಸರಕಾರದ ಚಿಂತನೆಗಳು, ಭವಿಷ್ಯದ ಕಾರ್ಯಯೋಜನೆಗಳತ್ತ ಅವರು ತಮ್ಮ ಭಾಷಣದಲ್ಲಿ ಬೆಳಕು ಚೆಲ್ಲುವ ಸಾಧ್ಯತೆ ಇದೆ. ಜು.7ರಂದು ಸಿಎಂ ಸಿದ್ದರಾಮಯ್ಯ ಅವರು ಈ ಸರಕಾ ರದ ಮೊದಲ ಬಜೆಟ್‌ನ್ನು ಮಂಡಿಸಲಿದ್ದಾರೆ. ಕಾಂಗ್ರೆಸ್‌ ಚುನಾವಣೆಗೂ ಮುನ್ನ ನೀಡಿದ್ದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳ ಜಾರಿಗೆ ಹಣ ಕ್ರೋಡೀಕರಣದ ಜತೆಯಲ್ಲಿ ಈಗಾಗಲೇ ಪ್ರಗತಿಯಲ್ಲಿರುವ ಅಭಿವೃದ್ಧಿ ಯೋಜನೆಗಳು ಮತ್ತು ಹೊಸದಾಗಿ ಘೋಷಿಸಲಾಗುವ ಯೋಜನೆಗಳಿಗೆ ಹಣವನ್ನು ಹೇಗೆ ಹೊಂದಿಸಲಿ­ದ್ದಾರೆ ಎಂಬುದೇ ಸದ್ಯದ ಯಕ್ಷಪ್ರಶ್ನೆ.

ಈ ಅಧಿವೇಶನ ಆಡಳಿತ ಮತ್ತು ವಿಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ಸಾಕ್ಷಿಯಾಗಲಿರುವುದಂತೂ ನಿಶ್ಚಿತ. ಅಧಿಕಾರಕ್ಕೆ ಬಂದ ದಿನದಿಂದಲೇ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸುವ ಭರವಸೆ ನೀಡಿದ್ದ ಸರಕಾರ, ಅಧಿಕಾರಕ್ಕೆ ಬಂದ ಬಳಿಕ ಈ ಯೋಜನೆಗಳನ್ನು ಹಂತಹಂತವಾಗಿ ಮತ್ತು ಷರತ್ತುಗಳೊಂದಿಗೆ ಜಾರಿಗೆ ಮುಂದಾಗಿರುವುದು, ಇವುಗಳ ಅನುಷ್ಠಾನದಲ್ಲಿನ ಗೊಂದಲ, ಅಧಿಕಾರಿಗಳ ವರ್ಗಾವಣೆ, ಈ ಹಿಂದಿನ ಸರಕಾರ ಜಾರಿಗೊಳಿಸಿದ್ದ ಕೆಲವೊಂದು ಪ್ರಮುಖ ಕಾನೂನುಗಳ ರದ್ದು ಅಥವಾ ತಿದ್ದುಪಡಿ ತರುವ ನಿರ್ಧಾರವನ್ನು ಮುಂದಿಟ್ಟು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ ಸಾಕಷ್ಟು ಪೂರ್ವ ತಯಾರಿ ನಡೆಸಿವೆ. ಆಡಳಿತಾರೂಢ ಕಾಂಗ್ರೆಸ್‌ ಕೂಡ ಈಗಾಗಲೇ ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಹಗರಣಗಳು, ಅಕ್ರಮಗಳು, ಭ್ರಷ್ಟಾಚಾರ ಪ್ರಕರಣಗಳನ್ನು ತನಿಖೆ ನಡೆಸುವುದಾಗಿ ಹೇಳುವ ಮೂಲಕ ಪ್ರಮುಖ ವಿಪಕ್ಷವಾದ ಬಿಜೆಪಿಯನ್ನು ಹಣಿಯಲು ಕಾರ್ಯತಂತ್ರ ರೂಪಿಸಿದೆ.

ಮಳೆಗಾಲ ಆರಂಭವಾಗಿ ತಿಂಗಳು ಕಳೆದರೂ ಇನ್ನೂ ನದಿಗಳಲ್ಲಿ ಪೂರ್ಣ ಪ್ರಮಾಣದ ಹರಿವು ಕಂಡು ಬಂದಿಲ್ಲವಾಗಿದ್ದು ಜಲಾಶ ಯಗಳಿಗೆ ತೀರಾ ಕನಿಷ್ಠ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಂತೂ ಜಲಾಶಯಗಳು ಬರಿದಾಗಿಯೇ ಇವೆ. ಇದರಿಂದಾಗಿ ಕೃಷಿ ಚಟುವಟಿಕೆಗಳು ಇನ್ನೂ ಚಿಗಿತುಕೊಳ್ಳದೇ ಇರುವುದರಿಂದ ರೈತಾಪಿ ವರ್ಗ ಚಿಂತೆಗೀಡಾಗಿದೆ. ಇದೇ ವೇಳೆ ರಾಜ್ಯದೆಲ್ಲೆಡೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿದ್ದು ಜನಸಾ ಮಾನ್ಯರನ್ನು ಕಂಗಾಲಾಗಿಸಿದೆ. ಈ ಎಲ್ಲ ವಿಷಯಗಳ ಕುರಿತಂತೆ ಅಧಿವೇಶನದಲ್ಲಿ ಚರ್ಚೆಯಾಗಬೇಕಿದೆ.

ಹಾಲಿ ಅಧಿವೇಶನ ಮತ್ತು ಹೊಸ ಸರಕಾರದ ಮೊದಲ ಬಜೆಟ್‌ನ ಬಗೆಗೆ ರಾಜ್ಯದ ಜನರಲ್ಲಿರುವ ನಿರೀಕ್ಷೆ, ಆಶಾವಾದಗಳಿಗೆ ತಕ್ಕಂತೆ ಕಲಾಪ­ಗಳು ನಡೆಯಬೇಕು. ಸದನದ ಕಲಾಪಗಳಲ್ಲಿ ಜನಹಿತದ ವಿಷಯಗಳಿಗೆ ಸಂಬಂಧಿಸಿದಂತೆ ವಿಸ್ತೃತ ಚರ್ಚೆಯಾಗಬೇಕು. ಪರಸ್ಪರ ದೂಷಣೆ, ಆರೋಪ-ಪ್ರತ್ಯಾರೋಪಗಳ ಬದಲಾಗಿ ಜನತೆಯ ಬೇಡಿಕೆ, ಬವಣೆ­ಗಳನ್ನು ಸದನದಲ್ಲಿ ಪ್ರಸ್ತಾವಿಸುವ ಮೂಲಕ ಶಾಸಕರು, ಸರಕಾರದಿಂದ ಅವುಗಳಿಗೆ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next