ಮುಂಬೈ: ಇತ್ತೀಚೆಗೆ ನಕಲಿ ವಿಡಿಯೋಗಳ ಸುಳ್ಳು ವದಂತಿಗೆ ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ಮಕ್ಕಳ ಕಳ್ಳರು ಎಂದು ಐದು ಮಂದಿ ಮಂದಿಯನ್ನು ಅಮಾನುಷವಾಗಿ ಥಳಿಸಿ ಹೊಡೆದು ಕೊಂದಿದ್ದರು. ಈ ವಿಡಿಯೋ ನಿಜಕ್ಕೂ ಭಾರತಕ್ಕೆ ಸಂಬಂಧಿಸಿದ್ದಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಸಾಲು, ಸಾಲು ಮಕ್ಕಳ ಶವಗಳು ಹರಿದಾಡುತ್ತಿದ್ದ ವಿಡಿಯೋದಲ್ಲಿ ಇತ್ತು. ಮಕ್ಕಳ ಕಳ್ಳರ ಗುಂಪು ಹೀಗೆ ಮಕ್ಕಳನ್ನು ಅಪಹರಿಸಿ ಅಂಗಾಂಗಳನ್ನು ಕದಿಯುತ್ತಾರೆಂಬ ಅಂಶವನ್ನು ಹಿಂದಿ ಭಾಷೆಯಲ್ಲಿ ಹೇಳುತ್ತಿರುವುದು ವಿಡಿಯೋದಲ್ಲಿತ್ತು. ಆದರೆ ಆ ವಿಡಿಯೋ ಸಿರಿಯಾ ದೇಶಕ್ಕೆ ಸಂಬಂಧಿಸಿದ್ದು ಎಂಬುದು ವರದಿ ವಿವರಿಸಿದೆ.
ಸುಮಾರು ಐದು ವರ್ಷಗಳ ಹಿಂದೆ ಸಿರಿಯಾದಲ್ಲಿ ಸಂಭವಿಸಿದ್ದ ರಾಸಾನಿಕ ಅನಿಲ ದಾಳಿಗೆ ಸಿಲುಕಿ ಮಕ್ಕಳು ಸಾವನ್ನಪ್ಪಿರುವ ವಿಡಿಯೋ ಅದಾಗಿತ್ತು.
ಬೂಮ್ ಲೈವ್ ಡಾಟ್ ಇನ್ ನ ಜಾಲತಾಣದ ಕಾರ್ಯನಿರ್ವಾಹಕ ಸಂಪಾದಕ ಜೆನ್ಸಿ ಜಾಕೋಬ್ ಈ ಬಗ್ಗೆ ಮಾಹಿತಿ ನೀಡಿದ್ದು, ಇದು 2013ರಲ್ಲಿ ಸಿರಿಯಾದಲ್ಲಿ ನಡೆಸಿದ್ದ ರಾಸಾಯನಿಕ ಅನಿಲ ದಾಳಿಯಲ್ಲಿ ಮೃತಪಟ್ಟಿದ್ದ ಮಕ್ಕಳ ವಿಡಿಯೋ ಎಂದು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಹರಿದಾಡುತ್ತಿದ್ದ ವಿಡಿಯೋದಲ್ಲಿದ್ದಿದ್ದು ಸಿರಿಯಾದ ಮಕ್ಕಳದ್ದಾಗಿದೆ ಎಂದು ವಿವರಿಸಿದ್ದಾರೆ.
ಬೇರೆ, ಬೇರೆ ದೇಶಗಳಲ್ಲಿ, ರಾಜ್ಯಗಳಲ್ಲಿ ನಡೆದಿರುವ ಘಟನೆಗಳಿಗೆ ಪ್ರಚೋದನಕಾರಿ ವಾಯ್ಸ್ ಓವರ್ ನೀಡಿ ಹೀಗೆ ನಕಲಿ ವಿಡಿಯೋಗಳನ್ನು ಬಿತ್ತರಿಸಲಾಗುತ್ತಿದೆ. ಇಂತಹ ನಕಲಿ ವಿಡಿಯೋಗಳಿಂದಾಗಿ ದೇಶಾದ್ಯಂತ ಸುಮಾರು 30ಕ್ಕೂ ಅಧಿಕ ಸಾವುಗಳು ಸಂಭವಿಸಿದೆ.