ಕಾಬೂಲ್: ಅಫ್ಘಾನಿಸ್ತಾನದಲ್ಲಿ ಮದ್ಯ ಮಾರಾಟವನ್ನು ಬಂದ್ ಮಾಡಿಸುವ ನಿಟ್ಟಿನಲ್ಲಿ ಕಾರ್ಯಾಚರಣೆಗಿಳಿದ ಅಫ್ಘಾನ್ ನ ಗುಪ್ತಚರ ಇಲಾಖೆ ಅಧಿಕಾರಿಗಳು ಭಾನುವಾರ ಬರೋಬ್ಬರಿ ಮೂರು ಸಾವಿರ ಲೀಟರ್ ಮದ್ಯವನ್ನು ಕಾಬೂಲ್ ಕಾಲುವೆಗೆ ಸುರಿದ ಘಟನೆ ಭಾನುವಾರ (ಜನವರಿ 02) ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಇಂದಿನಿಂದ ಜೋಹಾನ್ಸ್ ಬರ್ಗ್ ಟೆಸ್ಟ್: ವಿರಾಟ್ ಪಂದ್ಯದಿಂದ ಔಟ್, ರಾಹುಲ್ ನೂತನ ನಾಯಕ
ರಾಜಧಾನಿಯಲ್ಲಿ ದಾಳಿ ನಡೆಸಿದ ವೇಳೆ ವಶಪಡಿಸಿಕೊಂಡಿದ್ದ ಆಲ್ಕೋಹಾಲ್ ಬ್ಯಾರೆಲ್ ಗಳನ್ನು ತಾಲಿಬಾನ್ ಆಡಳಿತದ ಗುಪ್ತಚರ ಇಲಾಖೆಯ ಏಜೆಂಟ್ಸ್ ಗಳು ಕಾಲುವೆಗೆ ಸುರಿಯುತ್ತಿರುವ ವಿಡಿಯೋ ಫೂಟೇಜ್ ಅನ್ನು ಜಿಡಿಐ(ಜನರಲ್ ಡೈರೆಕ್ಟೋರೇಟ್ ಆಫ್ ಇಂಟೆಲಿಜೆನ್ಸ್) ಬಿಡುಗಡೆಗೊಳಿಸಿದ್ದಾರೆ.
ಮುಸ್ಲಿಮರು ಮದ್ಯವನ್ನು ತಯಾರಿಸುವುದರಿಂದ ಮತ್ತು ಮಾರಾಟ ಮಾಡುವ ಕೆಲಸದಿಂದ ದೂರವಿರಬೇಕು ಎಂದು ಧಾರ್ಮಿಕ ಮುಖಂಡರೊಬ್ಬರು ತಿಳಿಸಿದ್ದಾರೆ. ಆದರೆ ಯಾವಾಗ ದಾಳಿ ನಡೆಸಲಾಯಿತು, ಯಾವಾಗ ಮದ್ಯವನ್ನು ಕಾಲುವೆಗೆ ಸುರಿದು ಹರಿಬಿಡಲಾಯ್ತು ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಕಾರ್ಯಾಚರಣೆ ವೇಳೆ ಮೂವರು ಡೀಲರ್ ಗಳನ್ನು ಬಂಧಿಸಲಾಗಿದೆ ಎಂಬ ಮಾಹಿತಿಯನ್ನು ತಾಲಿಬಾನ್ ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂದಿನ ಸರ್ಕಾರದ ಆಡಳಿತಾವಧಿಯಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿತ್ತು. ಆದರೆ ತಾಲಿಬಾನ್ ಸರ್ಕಾರ ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ವರದಿ ವಿವರಿಸಿದೆ.