ಪಾಟ್ನಾ: ನಡೆದುಕೊಂಡು ಹೋಗುವಾಗ ರಸ್ತೆಯಲ್ಲಿ ಹಣ ಸಿಕ್ಕರೆ ನಾವೇನು ಮಾಡಬಹುದು. ಅತ್ತಿತ್ತ ನೋಡಿ ಮೆಲ್ಲನೆ ಅದನ್ನು ಕಿಸೆಯಲ್ಲಿ ಹಾಕಿಕೊಂಡು ಬರುತ್ತೇವೆ. ಆದರೆ ಸಾರ್ವಜನಿಕವಾಗಿ ಹಣದ ಕಂತೇ ಸಿಕ್ಕರೆ ಏನು ಮಾಡಬಹುದು?
ಚರಂಡಿಯೊಂದರಲ್ಲಿ ಹಣದ ರಾಶಿ ತೇಲಿಕೊಂಡು ಬಂದಿರುವ ಘಟನೆ ಪಾಟ್ನಾದಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಸಸಾರಾಮ್ ಜಿಲ್ಲೆಯ ಮೊರಾದಾಬಾದ್ ಪ್ರದೇಶದಲ್ಲಿ ನಡೆದಿದೆ.
ಬೆಳಗ್ಗೆ 8 ಗಂಟೆಯ ವೇಳೆಗೆ ವ್ಯಕ್ತಿಯೊಬ್ಬರು ತ್ಯಾಜ್ಯಗಳಿಂದ ಗಲೀಜು ಆಗಿರುವ ಚರಂಡಿ ನೀರಿನಲ್ಲಿ ತೇಲಿಕೊಂಡು ಹೋಗುವುದನ್ನು ನೋಡಿದ್ದಾರೆ. 100,10 ರೂ. ನೋಟುಗಳ ಕಂತೆ ಕಂತೆಗಳೇ ತೇಲುವುದನ್ನು ನೋಡಿದ್ದಾರೆ. ಕೆಲ ಸಮಯದ ಬಳಿಕ ಬಂದು ನೋಡಿದಾಗ ಅಲ್ಲಿ ನೋಟುಗಳು ಕಂಡಿಲ್ಲ. ಮೊದಲು ಒಬ್ಬಾತ ಚರಂಡಿಗೆ ಇಳಿದು ನೋಟುಗಳ ಬಂಡಲ್ ತೆಗೆದಿದ್ದಾನೆ. ಈ ವಿಚಾರ ಒಬ್ಬರಿಂದ ಒಬ್ಬರಿಗೆ ಗೊತ್ತಾಗಿ, ಇಡೀ ಗ್ರಾಮಕ್ಕೆ ಗೊತ್ತಾಗಿದೆ. ಗ್ರಾಮದ ಜನರೆಲ್ಲ ಬಂದು ಚರಂಡಿಗೆ ಗಲೀಜು ನೀರಿಗೆ ಇಳಿದಿದ್ದಾರೆ. ನೋಟುಗಳ ಬಂಡಲ್ ತೆಗೆದು ಚರಂಡಿಯಿಂದ ಮೇಲಕ್ಕೆ ಬರುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಕೆಲವರು ಈ ನೋಟುಗಳು ನಕಲಿ ಎಂದು ಹೇಳಿದರೆ, ಇನ್ನು ಕೆಲವರು ಇದು ಅಸಲಿ ಎಂದಿದ್ದಾರೆ. ಜನರನ್ನು ನಿಯಂತ್ರಿಸಲು ಗ್ರಾಮಕ್ಕೆ ಪೊಲೀಸರು ಬಂದಿದ್ದಾರೆ. ಸದ್ಯ ಇದರ ಅಸಲಿ ಕಹಾನಿ ತನಿಖೆಯ ಬಳಿಕವಷ್ಟೇ ಗೊತ್ತಾಗಬೇಕಿದೆ.