ಬೆಂಗಳೂರು: ಯೂಟ್ಯೂಬ್ ಹಾಗೂ ಫೇಸ್ ಬುಕ್‌ನಲ್ಲಿ ಕಂಟೆಂಟ್ ಕ್ರಿಯೇಟರ್ (Content creator) ಆಗಿ ಗುರುತಿಸಿಕೊಂಡಿರುವ ʼವಿಕ್ಕಿಪೀಡಿಯಾ’(Vickypedia) ವಿಕಾಸ್ ಅವರನ್ನು ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ವಿಕಾಸ್(Vikas) ತನ್ನ ವಿಡಿಯೋದಲ್ಲಿ ಯುವಜನರು ಹಾಗೂ ಮಾದಕ ವಸ್ತು ಬಗ್ಗೆ ಮಾತನಾಡಿದ್ದರು ಈ ಕಾರಣದಿಂದ ಬೈಯಪ್ಪನಹಳ್ಳಿ ಪೊಲೀಸರು ಅವರನ್ನು ಠಾಣೆಗೆ ಕರೆಸಿ ಕೆಲವೊಂದು ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಮಯ ವಿಡಿಯೋಗಳಿಂದ ಜನಪ್ರಿಯರಾಗಿರುವ ವಿಕಾಸ್, ʼನಾನು ನಂದಿನಿʼ ಎನ್ನುವ ಹಾಡಿನ ಮೂಲಕ ಇತ್ತೀಚೆಗೆ ಎಲ್ಲೆಡೆ ವೈರಲ್ ಆಗಿದ್ದರು.
ವಿಕಾಸ್ ಇತ್ತೀಚೆಗಿನ ಅವರ ವಿಡಿಯೋದಲ್ಲಿ “ಇಂದಿನ ಯುವಕರು ಎಂಜಾಯ್‌ಮೆಂಟ್‌ಗೆ ಅಂತ ಮದ್ಯಪಾನ ಮಾಡೋದು, ಸಿಗರೇಟ್ ಸೇದೋದು, ಹುಡುಗೀರ್ ಹಿಂದೆ ಹೋಗ್ತಾರೆ. ಆದರೆ, ನಾನು ಎಂಜಾಯ್‌ಮೆಂಟ್ ಮಾಡಲು ಡ್ರಗ್ಸ್ ತಗೋತೀನಿ” ಎಂದು ಹೇಳುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಇದು ಯುವಜನರನ್ನು ದಾರಿ ತಪ್ಪಿಸುತ್ತದೆ ಎನ್ನುವ ಕಾರಣದಿಂದ ಪೊಲೀಸರು ವಿಕಾಸ್ ಅವರನ್ನು ಠಾಣೆಗೆ ಕರೆದು ಎಚ್ಚರಿಕೆ ನೀಡಿದ್ದಾರೆ. ಇದಲ್ಲದೆ ವಿಡಿಯೋ ಮಾಡುವಾಗ ಅನುಸರಿಸಬೇಕಾದ ಕೆಲವೊಂದು ನಿಯಮದ ಬಗ್ಗೆ ಪೊಲೀಸರು ಪಾಠ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ವಿಕಾಸ್ ಹಾಗೂ ಅಮಿತ್ ಈ ವಿಡಿಯೋ ಮಾಡಿದ್ದರು. ಪೊಲೀಸರು ವಿಕಾಸ್ ರಿಂದ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಈ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ.