ನವದೆಹಲಿ: ಜಪಾನ್‌ನ ಯುವತಿಯೊಬ್ಬಳನ್ನು ಬುಧವಾರ ಹೋಳಿ ಆಚರಣೆ ವೇಳೆ ಪುರುಷರ ಗುಂಪೊಂದು ಅಟ್ಟಾಡಿಸಿಕೊಂಡು, ಕಿರುಕುಳ ನೀಡಿ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ.
ವಿಡಿಯೋದಲ್ಲಿ, ಯುವಕರು ಆಕೆಯನ್ನು ಹಿಡಿದುಕೊಂಡು “ಹೋಳಿ ಹೈ” ಎಂಬ ಘೋಷಣೆಗಳ ನಡುವೆ ಬಣ್ಣಗಳನ್ನು ಬಳಿದಿದ್ದಾರೆ.ಒಬ್ಬ ಹುಡುಗ ಅವಳ ತಲೆಯ ಮೇಲೆ ಮೊಟ್ಟೆಯನ್ನು ಒಡೆಯುವುದನ್ನು ಸಹ ಕಾಣಬಹುದು. ಯುವತಿ ತಳ್ಳಲ್ಪತ್ತಿದ್ದು ಗುಂಪಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನದ ವೇಳೆ ತನ್ನನ್ನು ಹಿಡಿದಿಡಲು ಪ್ರಯತ್ನಿಸುವ ವ್ಯಕ್ತಿಗೆ ಅವಳು ಕಪಾಳಮೋಕ್ಷ ಮಾಡಿರುವುದನ್ನು ವಿಡಿಯೋ ತೋರಿಸುತ್ತದೆ.
“ಕಂಡುಬರುವ ದೃಶ್ಯಗಳ ಆಧಾರದ ಮೇಲೆ, ವಿಡಿಯೋ ಪಹರ್‌ಗಂಜ್ ಪ್ರದೇಶಕ್ಕೆ ಸಂಬಂಧಿಸಿದೆ ಎಂದು ತೋರುತ್ತಿದೆ, ಆದಾಗ್ಯೂ, ಆ ಪ್ರದೇಶದಲ್ಲಿ ಅಂತಹ ಯಾವುದೇ ಘಟನೆ ನಡೆದಿದೆಯೇ ಅಥವಾ ವಿಡಿಯೋ ಹಳೆಯದಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ” ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಪಹರ್‌ಗಂಜ್ ಪೊಲೀಸ್ ಠಾಣೆಯಲ್ಲಿ ಯಾವುದೇ ವಿದೇಶಿಯರೊಂದಿಗೆ ಯಾವುದೇ ರೀತಿಯ ಅನುಚಿತ ವರ್ತನೆಗೆ ಸಂಬಂಧಿಸಿದ ಯಾವುದೇ ದೂರು ಅಥವಾ ಕರೆ ಬಂದಿಲ್ಲ. ಯುವತಿಯ ಗುರುತು ಅಥವಾ ಘಟನೆಯ ಬಗ್ಗೆ ಯಾವುದೇ ವಿವರಗಳನ್ನು ಪಡೆಯಲು ಸಹಾಯಕ್ಕಾಗಿ ಜಪಾನ್ ರಾಯಭಾರ ಕಚೇರಿಗೆ ಇಮೇಲ್ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಭಾಗಾಧಿಕಾರಿಗಳು ಮತ್ತು ಸ್ಥಳೀಯ ಗುಪ್ತಚರರ ಮೂಲಕ ವಿಡಿಯೋದಲ್ಲಿ ಕಂಡುಬರುವ ಹುಡುಗರ ಗುರುತನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಮತ್ತು ವಿವರಗಳನ್ನು ಪರಿಶೀಲಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಹಲವರು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ದೆಹಲಿ ಪೊಲೀಸರು ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.