ನೋಯ್ಡಾ: ತಾನು ಅಂಟಿಸಿದ್ದ ನಾಯಿ ಕಾಣೆಯಾದ ಪೋಸ್ಟರ್ ನ್ನು ಹೇಳದೆ ಕೇಳದೆ ತೆಗೆದ ವ್ಯಕ್ತಿಯನ್ನು ಮಹಿಳೆಯೊಬ್ಬರು ಕಾಲರ್ ಪಟ್ಟಿ ಹಿಡಿದು ಹಲ್ಲೆ ಮಾಡಿರುವ ಘಟನೆಯ ವಿಡಿಯೋ ವೈರಲ್ ಆಗಿದೆ.
ನೋಯ್ಡಾ ಸೆಕ್ಟರ್ 75 ರ ಏಮ್ಸ್ ಗಾಲ್ಫ್ ಅವೆನ್ಯೂ ಸೊಸೈಟಿಯಲ್ಲಿ ಈ ಘಟನೆ ನಡೆದಿದ್ದು, ಅದೇ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುವ ಮಹಿಳೆ ವ್ಯಕ್ತಿ ಮೇಲೆ ಗರಂ ಆಗಿದ್ದಾರೆ.
ಅರ್ಶಿ ಎಂಬ ಮಹಿಳೆ ತನ್ನ ನಾಯಿ ಕಾಣೆಯಾಗಿದೆ ಎಂದು ಕಳೆದ ಕೆಲ ದಿನಗಳ ಹಿಂದೆ ಅಪಾರ್ಟ್ ಮೆಂಟ್ ಸುತ್ತಮುತ್ತ ಪೋಸ್ಟರ್ ನ್ನು ಅಂಟಿಸಿದ್ದರು. ಆದರೆ ದೀಪಾವಳಿ ಮುಂಚಿತವಾಗಿ ಪೇಂಟಿಂಗ್ ಕೆಲಸ ಪ್ರಾರಂಭವಾಗುವ ಕಾರಣ ನವೀನ್ (ವಿಡಿಯೋದಲ್ಲಿರುವ ವ್ಯಕ್ತಿ) ಪೋಸ್ಟರ್‌ಗಳನ್ನು ತೆಗೆದುಹಾಕಿದ್ದಾರೆ.
ಇದನ್ನು ಅರಿತ ಅರ್ಶಿ ನವೀನ್ ಅವರ ಟಿ-ಶರ್ಟ್ ಕಾಲರ್ ಹಿಡಿದು “ಎಒಎ (ಅಪಾರ್ಟ್‌ಮೆಂಟ್ ಮಾಲೀಕರ ಸಂಘ) ಸುಪ್ರೀಂ ಕೋರ್ಟ್‌ಗಿಂತ ದೊಡ್ಡದಾ?” ಎಂದು ಹೇಳಿ ನವೀನ್ ನನ್ನು ತಳ್ಳಿ, ಆತನ ಕೂದಲನ್ನು ಎಳೆದಾಡಿ ಹೊಡೆಯಲು ಹೋಗಿದ್ದಾರೆ.
ಇದನ್ನೂ ಓದಿ: Crime News: ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ; ವಿಷ ಸೇವಿಸಿ ಪ್ರಾಣ ಕಳೆದುಕೊಂಡ ದಂಪತಿ
ಈ ಘಟನೆಯ ವಿಡಿಯೋವನ್ನು ಅಲ್ಲಿದ್ದವರು ಚಿತ್ರೀಕರಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸದ್ಯ ನವೀನ್ ಅವರು ಸೆಕ್ಟರ್ 113 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅವರ ಹೇಳಿಕೆ ಮತ್ತು ವಿಡಿಯೋ ಆಧರಿಸಿ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.