ಲಕ್ನೋ: ಉತ್ತರಪ್ರದೇಶದ ಅಲಿಗಢ್ ನಲ್ಲಿನ ಶಾಲೆಯೊಂದಕ್ಕೆ ಚಿರತೆಯೊಂದು ನುಗ್ಗಿ ತರಗತಿಯಲ್ಲಿದ್ದ ವಿದ್ಯಾರ್ಥಿಯೊಬ್ಬನ ಮೇಲೆ ದಾಳಿ ನಡೆಸಿರುವ ಘಟನೆ ಬುಧವಾರ(ಡಿಸೆಂಬರ್ 01) ನಡೆದಿದೆ.
ಇದನ್ನೂ ಓದಿ:ಹಿರಿಯ ಚಿತ್ರ ನಟ ಶಿವರಾಂ ಅರೋಗ್ಯ ಸ್ಥಿತಿ ಗಂಭೀರ ; ಐಸಿಯುನಲ್ಲಿ ಚಿಕಿತ್ಸೆ
ಅಲಿಗಢ್ ನ ಚೌಧರಿ ನಿಹಾಲ್ ಸಿಂಗ್ ಇಂಟರ್ ಕಾಲೇಜಿನ ತರಗತಿಯೊಳಕ್ಕೆ ಚಿರತೆಯೊಂದು ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ನಡೆಸಿತ್ತು. ಬಳಿಕ ಚಿರತೆಯನ್ನು ಕ್ಲಾಸ್ ರೂಂನೊಳಕ್ಕೆ ಕೂಡಿಹಾಕಲಾಗಿತ್ತು. ತರಗತಿಯೊಳಗೆ ಚಿರತೆ ನುಗ್ಗಿದ ವಿಷಯ ತಿಳಿದು, ಶಾಲೆಯ ಹೊರಗೆ ಸಿಬಂದಿಗಳು, ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಅಲ್ಲದೇ ಅರಣ್ಯಾಧಿಕಾರಿಗಳು ಚಿರತೆಯನ್ನು ಹಿಡಿದು ಕೊಂಡೊಯ್ಯುವವರೆಗೆ ತರಗತಿಯ ಹೊರಗೆ ಕಾಯುವಂತಾಗಿತ್ತು ಎಂದು ವರದಿ ವಿವರಿಸಿದೆ.
“ನಾನು ತರಗತಿಯೊಳಗೆ ಬಂದಾಗ, ಚಿರತೆ ಇದ್ದಿರುವುದು ಕಾಣಿಸಿತ್ತು. ಕೂಡಲೇ ನಾನು ಹೊರಗೆ ಬರುತ್ತಿದ್ದಾಗ, ನನ್ನ ಮೇಲೆ ದಾಳಿ ನಡೆಸಿತ್ತು” ಎಂದು ಘಟನೆಯಲ್ಲಿ ಗಾಯಗೊಂಡಿರುವ ವಿದ್ಯಾರ್ಥಿ ಲಕ್ಕಿ ರಾಜ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾನೆ.
ವಿದ್ಯಾರ್ಥಿ ಕೈಗೆ ಗಾಯವಾಗಿದ್ದು, ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದಾಗಿ ಕಾಲೇಜು ಪ್ರಾಂಶುಪಾಲರಾದ ಯೋಗೇಶ್ ಯಾದವ್ ತಿಳಿಸಿದ್ದಾರೆ. ವಿದ್ಯಾರ್ಥಿ ಹೊರಬಂದ ಕೂಡಲೇ ಕೋಣೆಗೆ ಬೀಗ ಹಾಕಿ, ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿದರು. ತರಗತಿಯೊಳಗೆ ಅಡ್ಡಾಡುತ್ತಿರುವ ಚಿರತೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದಾಗಿ ವರದಿ ಹೇಳಿದೆ.
ವಿಡಿಯೋ ಕೃಪೆ: ಟಿವಿ9