ಕರಾಚಿ: ತನ್ನ ಫೇಸ್ ಬುಕ್ ಗೆಳೆಯನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಹೋಗಿರುವ ರಾಜಸ್ಥಾನದ ವಿವಾಹಿತ ಮಹಿಳೆ ಅಂಜು, ಪಾಕ್ ಗೆಳೆಯ ನಸ್ರುಲ್ಲಾ ಜೊತೆ ವಿವಾಹವಾಗಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ದಿನ ಹಿಂದೆ ವೈರಲ್ ಆಗಿತ್ತು. ಇದೀಗ ಅಂಜು ಬಗ್ಗೆ ಮತ್ತೊಂದು ಸುದ್ದಿ ಇಂಟರ್ ನೆಟ್ ನಲ್ಲಿ ಸದ್ದು ಮಾಡುತ್ತಿದೆ.
ಘಟನೆ ಹಿನ್ನೆಲೆ: ರಾಜಸ್ಥಾನದ ಭಿವಾಡಿ ಜಿಲ್ಲೆಯ ವಿವಾಹಿತ ಮಹಿಳೆ ಅಂಜು ಫೇಸ್ ಬುಕ್ ನಲ್ಲಿ ಪರಿಚಯವಾದ ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ನಸ್ರುಲ್ಲಾ ಅವರನ್ನು ಭೇಟಿಯಾಗಲು ಪಾಕ್ ಗೆ ತಲುಪಿದ್ದರು. ಆಕೆ ಪ್ರಯಾಣದ ಎಲ್ಲಾ ದಾಖಲೆಗಳನ್ನು ಹಿಡಿದುಕೊಂಡು ಪಾಕಿಸ್ತಾನಕ್ಕೆ ತಲುಪಿದ್ದಾಳೆ. ಅಂಜು ವಾಟ್ಸಾಪ್ ಮೂಲಕ ಕರೆ ಮಾಡಿ ನಾನು ಲಾಹೋರ್ ನಲ್ಲಿದ್ದೇನೆ. 3-4 ದಿನದಲ್ಲಿ ಬರುವುದಾಗಿ ಹೇಳಿದ್ದಳು ಎಂದು ಆಕೆಯ ಪತಿ ಅರವಿಂದ್ ಮಾಧ್ಯಮಕ್ಕೆ ತಿಳಿಸಿದ್ದರು.
ನಸ್ರುಲ್ಲಾ ಹಾಗೂ ನಾನ ಒಳ್ಳೆಯ ಸ್ನೇಹಿತರು. ನಾನು ಪಾಕ್ ಸುತ್ತಾಡಲು ಬಂದಿದ್ದೇನೆ. ಶೀಘ್ರದಲ್ಲಿ ವೀಸಾ ಅವಧಿ ಮುಗಿದ ಬಳಿಕ ಭಾರತಕ್ಕೆ ಬರುವುದಾಗಿ ಅಂಜು ಹೇಳಿದ್ದರು. ಅಂಜು – ಅರವಿಂದ್ ಸಂಬಂಧ ವಿಚ್ಚೇದನ ಹಂತಕ್ಕೆ ಬಂದಿರುವುದಾಗಿ ವರದಿಯಾಗಿದೆ.
ಆದರೆ ಇದಾದ ಬಳಿಕ ಅಂಜು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ನಸ್ರುಲ್ಲಾ ಅವರ ಜೊತೆ ವಿವಾಹವಾಗಿದ್ದಾರೆ ಎನ್ನುವ ಫೋಟೋ ವಿಡಿಯೋಗಳು ಸಾಮಾಜಿ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ ಇದು ಸುಳ್ಳೆಂದು ನಸ್ರುಲ್ಲಾ ಹಾಗೂ ಅಂಜು ಹೇಳಿದ್ದರು.
ಇದೀಗ ಸೋಮವಾರ, (ಆಗಸ್ಟ್ 14 ರಂದು) ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ಅಂಜು, ನಸ್ರುಲ್ಲಾ ಹಾಗೂ ಪಾಕ್ ನ ಕೆಲ ಜನರ ಗುಂಪಿನೊಂದಿಗೆ ಸೇರಿಕೊಂಡು ಕೇಕ್ ಕತ್ತರಿಸಿ, ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಳ್ಳುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮದುವೆಯಾಗಿ ಇಸ್ಲಾಂಗೆ ಮತಾಂತರಗೊಂಡ ಅಂಜು ಅವರ ಹೆಸರನ್ನು ಫಾತಿಮಾ ಎಂದು ಮರುನಾಮಕರಣ ಮಾಡಲಾಗಿದೆ ಎಂದು ವರದಿಯಾಗಿದೆ.