Advertisement

ವೀಡಿಯೋ ಕಾನ್ಫರೆನ್ಸ್ ನಲ್ಲಿ 3ಡಿ ಅನುಭವ ನೀಡಲಿದೆ ಗೂಗಲ್ ಪ್ರಾಜೆಕ್ಟ್ ಸ್ಟಾರ್‌ ಲೈನ್

06:48 PM May 28, 2021 | ಶ್ರೀರಾಜ್ ವಕ್ವಾಡಿ |

ಕೋವಿಡ್ ನಿಂದಾಗಿ ಜಗತ್ತಿನಾದ್ಯಂತ ಹಲವಾರು ಪರಿವರ್ತನೆಗಳಾಗಿವೆ. ಭಾರತದಲ್ಲಂತೂ ಹಲವಾರು ಕ್ಷೇತ್ರಗಳು ಡಿಜಿಟಲ್ ಆಗಿವೆ. ಪ್ರತಿನಿತ್ಯ ಶಾಲೆ-ಕಾಲೇಜಿಗೆ ಹೋಗಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳಿಗೆ ಮನೆಯೊಳಗಿಂದಲೇ ಆನ್ಲೈನ್ ಕ್ಲಾಸ್! ಎಲ್ಲಾ ಕಾರ್ಯ-ಚಟುವಟಿಕೆಗಳಿಗೂ ಪರ್ಯಾಯ ರೂಪ ಬಂದಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಆದರೆ, ಯಾರೊಂದಿಗಾದರೂ ಕೋಣೆಯೊಳಗೆ ಒಟ್ಟಿಗೆ ಇರಬೇಕು ಎಂದೆನಿಸಿದರೆ, ಅದಕ್ಕೆ ಏನೂ ಪರ್ಯಾಯವೇ ಇಲ್ಲ.

Advertisement

ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ ಗಳಾದ ಜೂ಼ಮ್, ಗೂಗಲ್ ಮೀಟ್, ಮೈಕ್ರೋಸಾಫ್ಟ್ ಇತ್ಯಾದಿ ಕಂಪನಿಗಳು ನಿಮ್ಮ ಸ್ನೇಹಿತರು, ಒಡನಾಡಿಗಳೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆಯಾದರೂ, ಒಟ್ಟಿಗೆ ಕುಳಿತು ಸಂವಹನ ಮಾಡುವಂತಹ ಅನುಭವ ಅದರಲ್ಲಿ ಸಿಗುವುದಿಲ್ಲ. ಅಂತಹ ನೈಜ ಅನುಭವ ನೀಡಲು ಗೂಗಲ್ ಮುಂದಾಗಿದೆ! ಜನರೊಂದಿಗೆ ಒಳ್ಳೆಯ ಸಂಬಂಧ ಮತ್ತು ಸಂಪರ್ಕ ಇಟ್ಟುಕೊಳ್ಳಲು ಸಹಕಾರಿಯಾಗಲು, ಪ್ರಾಜೆಕ್ಟ್ ಸ್ಟಾರ್‌ ಲೈನ್‌ನೊಂದಿಗೆ ಗೂಗಲ್ ಬಂದಿದೆ.

ಏನಿದು ಪ್ರಾಜೆಕ್ಟ್ ಸ್ಟಾರ್‌ ಲೈನ್?

ಯಾವುದೇ ಕನ್ನಡಕ ಅಥವಾ ಇನ್ನಿತರ ಸಾಧನ ಬಳಸದೇ, ವೀಡಿಯೋ ಕರೆ/ಕಾನ್ಫರೆನ್ಸಿಂಗ್ ಕಾಲ್‌ ನಲ್ಲಿ 3ಡಿ ಅನುಭವ ನೀಡುವ ಪ್ರಾಜೆಕ್ಟ್ ಆಗಿದೆ.

ಗೂಗಲ್ ಐ/ಒ 2021 ರಲ್ಲಿ “ತಮ್ಮ ಕಂಪನಿಯು ಹಲವಾರು ವರ್ಷಗಳಿಂದ ಕಂಪ್ಯೂಟರ್ ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಹೊಸ ತಂತ್ರಾಂಶ ನಿರ್ಮಿಸುವ, ಸ್ವ-ನಿರ್ಮಿತ ಯಂತ್ರಾಂಶ ಮತ್ತು ಹೆಚ್ಚು ವಿಶೇಷವಾದ ಸಾಧನಗಳನ್ನು ಅವಲಂಬಿಸಿರುವ ಯೋಜನೆಯನ್ನು ಪ್ರಾರಂಭಿಸಿದತ್ತು” ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಅವರು ಹೇಳಿದ್ದರು.

Advertisement

ಪ್ರಾಜೆಕ್ಟ್ ಸ್ಟಾರ್‌ ಲೈನ್ ಎಂದು ಕರೆಯಲ್ಪಡುವ ಇದು ಇನ್ನೂ ಆರಂಭಿಕ ಹಂತದಲ್ಲಿದ್ದು, ಯಾರೊಂದಿಗಾದರೂ ವೀಡಿಯೋ ಕರೆ ಮಾಡಲು ಮತ್ತು ಅವರೊಂದಿಗೆ ಹೈಪರ್- ರಿಯಾಲಿಸ್ಟಿಕ್ 3ಡಿ ಅನುಭವ ಸಿಗಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

ಅತ್ಯಂತ ಸರಳವಾಗಿ ವಿವರಿಸುವುದಾದರೆ, ನೀವು ಒಂದು ಕಡೆ ಕುಳಿತಿರುತ್ತೀರಿ. ದೂರದ ಅಮೇರಿಕಾದಲ್ಲಿರುವ ಒಬ್ಬ ಸ್ನೇಹಿತನಿಗೆ ವೀಡಿಯೋ ಕರೆ ಮಾಡುತ್ತೀರಿ. ಎದುರುಗಡೆ ಒಂದು ಮ್ಯಾಜಿಕ್ ವಿಂಡೋ ಹಾಗೂ ಅದರಾಚೆಗೆ ಅಮೇರಿಕಾದಲ್ಲಿರುವ ನಿಮ್ಮ ಸ್ನೇಹಿತ ಕುಳಿತು ಸಂವಹನ ನಡೆಸುತ್ತಿದ್ದೀರಿ ಎಂಬುವುದನ್ನೊಮ್ಮೆ ಕಲ್ಪನೆ ಮಾಡಿ. ದೂರದ ಊರಿನಲ್ಲಿದ್ದರೂ, ಹತ್ತಿರದಲ್ಲಿ ಕುಳಿತು ಮಾತನಾಡಿದ ಅನುಭವವನ್ನು ಸ್ಟಾರ್‌ ಲೈನ್ ನೀಡುತ್ತದೆ.

ಪ್ರಾಜೆಕ್ಟ್ ಸ್ಟಾರ್‌ ಲೈನ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಪ್ರಾಜೆಕ್ಟ್ ಸ್ಟಾರ್‌ ಲೈನ್‌ನಲ್ಲಿ ಮೂರು ಅಂಶಗಳಿವೆ:

೧.     ಕ್ಯಾಮೆರಾಗಳು ಮತ್ತು ಆಳ ಸಂವೇದಕಗಳು : ವ್ಯಕ್ತಿಯನ್ನು ಅನೇಕ ದೃಷ್ಟಿಕೋನಗಳಿಂದ ಸೆರೆಹಿಡಿಯುವ ವಿಶೇಷ ಉಪಕರಣಗಳು

೨.     ಕಂಪ್ಯೂಟರ್ ವಿಜ್ಞಾನ ಪ್ರಗತಿಗಳು : ಕಾದಂಬರಿ ಸಂಕೋಚನ ಮತ್ತು ಸ್ಟ್ರೀಮಿಂಗ್ ಕ್ರಮಾವಳಿಗಳು ಸೇರಿದಂತೆ ಕಸ್ಟಮ್ ಸಾಫ್ಟ್ ವೇರ್

೩.     ಬೆಳಕಿನ ಕ್ಷೇತ್ರ ಪ್ರದರ್ಶನ : 3ಡಿ ಯಲ್ಲಿ ಯಾರೊಬ್ಬರ ವಾಸ್ತವಿಕ ಪ್ರಾತಿನಿಧ್ಯವನ್ನು ನೀಡುವ ಕಸ್ಟಮ್ ಯಂತ್ರಾಂಶ

ಪ್ರಾಜೆಕ್ಟ್ ಸ್ಟಾರ್‌ ಲೈನ್, ಬಳಕೆದಾರರ ಆಕಾರ ಮತ್ತು ನೋಟವನ್ನು ಅನೇಕ ದೃಷ್ಟಿಕೋನಗಳಿಂದ ಸೆರೆಹಿಡಿಯಲು ಹೈ-ರೆಸಿಂಗ್ ಕ್ಯಾಮೆರಾಗಳನ್ನು ಮತ್ತು ಕಸ್ಟಮ್ ಡೆಪ್ತ್ ಸೆನ್ಸರ್‌ಗಳನ್ನು ಬಳಸುತ್ತದೆ. ತದನಂತರ ಸಾಫ್ಟ್ ವೇರ್  ನ ಸಹಾಯದಿಂದ ಎಲ್ಲವನ್ನೂ ಅತ್ಯಂತ ವಿವರವಾಗಿ, ಸ್ಪಷ್ಟವಾಗಿ, ರಿಯಲ್-ಟೈಮ್ 3ಡಿ ಮಾದರಿಯನ್ನು ರಚಿಸುತ್ತದೆ. ಕಂಪ್ಯೂಟರ್ ದೃಷ್ಟಿ, ಯಂತ್ರ ಕಲಿಕೆ, ಪ್ರಾದೇಶಿಕ ಆಡಿಯೋ ಮತ್ತು ರಿಯಲ್‌ಟೈಮ್ ಕಂಪ್ರೆಶನ್ ವಿಷಯದಲ್ಲಿ ಇನ್ನೂ ಸಂಶೋಧನೆ ನಡೆಸುತ್ತಿದೆ ಎಂದು ಗೂಗಲ್ ಹೇಳಿದೆ. ಆದರೆ, ನಾವೆಲ್ಲರೂ ಗಮನಿಸಬೇಕಾದ ಅಂಶವೆಂದರೆ, ಸಂಪೂರ್ಣ 3ಡಿ ಮಾದರಿಯಲ್ಲಿ ಚಿತ್ರಣವನ್ನು ಪ್ರದರ್ಶಿಸುವುದರಿಂದ, ಅದರ ಡೇಟಾ ಬಳಕೆಯೂ ಹೆಚ್ಚಿಗಿರುತ್ತದೆ. ಪ್ರತಿ ಸೆಕೆಂಡಿಗೆ ಜಿಬಿ ಡೇಟಾ ಕಂಸ್ಯೂಮ್ ಮಾಡಿದರೂ ಅಚ್ಚರಿಯಿಲ್ಲ!!

ಆದ್ದರಿಂದ, ಪ್ರಸ್ತುತ ಇರುವ ನೆಟ್‌ ವರ್ಕ್ ಗಳಲ್ಲಿ ಈ 3ಡಿ ಚಿತ್ರಣವನ್ನು ರವಾನಿಸಲು ಕಷ್ಟವಾಗುವುದರಿಂದ, ಡೇಟಾ ಬಳಕೆಯನ್ನು ಕಡಿಮೆಗೊಳಿಸುವಲ್ಲಿಯೂ ಸಂಶೋಧನೆಯನ್ನೂ ಮಾಡುತ್ತಿದೆ. ಗೂಗಲ್ ಒಂದು ಲೈಟ್ ಫೀಲ್ಡ್ ಡಿಸ್‌ ಪ್ಲೇ (ಬೆಳಿಕಿನ ಬಗ್ಗೆ)ಯನ್ನೂ ಸಹ ಅಭಿವೃದ್ಧಿಪಡಿಸಿದೆ. ಇದರಿಂದಾಗಿ, ನಾವು ಕರೆಯಲ್ಲಿರುವವರೊಂದಿಗೆ ಕುಳಿತುಕೊಳ್ಳುವ ವಾಸ್ತವಿಕ ಪ್ರಾತಿನಿಧ್ಯವನ್ನು 3ಡಿಯಲ್ಲಿ ತೋರಿಸುತ್ತದೆ.

ನಿಮ್ಮ ತಲೆ ಮತ್ತು ದೇಹವನ್ನು ನೀವು ಚಲಿಸುವಾಗ, ನಿಮ್ಮ ದೃಷ್ಟಿಗೆ ಸರಿಹೊಂದುವಂತೆ ಲೈಟ್ ಡಿಸ್‌ ಪ್ಲೇಯೂ ಸಹ ಹೊಂದಿಕೊಳ್ಳುತ್ತದೆ. ಇದರಿಂದಾಗಿ 3ಡಿ ಅನುಭವ ಪಡೆಯಲು ಹೆಚ್ಚುವರಿ ಕನ್ನಡಕ ಅಥವಾ ಇತರ ಹೆಡ್‌ ಸೆಟ್‌ ಗಳ ಅಗತ್ಯವಿರುವುದಿಲ್ಲ.

ಪ್ರಾಜೆಕ್ಟ್ ಸ್ಟಾರ್‌ ಲೈನ್ ಮಾರುಕಟ್ಟೆಯಲ್ಲಿ ಯಾವಾಗ ಲಭ್ಯವಾಗುತ್ತದೆ?

ಇದು ಈಗಾಗಲೇ ಗೂಗಲ್‌ನ ಕೆಲವು ಕಛೇರಿಗಳಲ್ಲಿ ಬಳಕೆಯಲ್ಲಿದೆ. ತನ್ನದೇ ಕಛೇರಿಗಳಲ್ಲಿ ಸಾವಿರಾರು ಗಂಟೆಗಳ ಕಾಲ ಪರೀಕ್ಷೆಯನ್ನು ನಡೆಸಿದೆ. ಆದರೆ, ಗ್ರಾಹಕರಿಗಾಗಿ ಮಾರುಕಟ್ಟೆಯಲ್ಲಿ ಬಿಡುವ ಯಾವುದೇ ಯೋಜನೆ ಸದ್ಯಕ್ಕಿಲ್ಲ ಎಂದು ಗೂಗಲ್ ಹೇಳಿದೆ. ಹೀಗಿದ್ದರೂ, ತನ್ನ ಉದ್ಯಮ ಪಾಲುದಾರರಲ್ಲಿ ಇದರ ಬಗ್ಗೆ ಉತ್ಸಾಹವಿದೆ ಮತ್ತು ಮೊದಲಿಗೆ, ಆರೋಗ್ಯ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಈ ಯೋಜನೆಯನ್ನು ವಿಸ್ತರಿಸಲು ಯೋಜಿಸುತ್ತಿದೆ ಎಂದು ಅದು ಹೇಳಿದೆ.

“ಅತ್ಯಂತ ಸರಳವಾಗಿ ವಿವರಿಸುವುದಾದರೆ, ನೀವು ಒಂದು ಕಡೆ ಕುಳಿತಿರುತ್ತೀರಿ. ದೂರದ ಅಮೇರಿಕಾದಲ್ಲಿರುವ ಒಬ್ಬ ಸ್ನೇಹಿತನಿಗೆ ವೀಡಿಯೋ ಕರೆ ಮಾಡುತ್ತೀರಿ. ಎದುರುಗಡೆ ಒಂದು ಮ್ಯಾಜಿಕ್ ವಿಂಡೋ ಹಾಗೂ ಅದರಾಚೆಗೆ ಅಮೇರಿಕಾದಲ್ಲಿರುವ ನಿಮ್ಮ ಸ್ನೇಹಿತ ಕುಳಿತು ಸಂವಹನ ನಡೆಸುತ್ತಿದ್ದೀರಿ ಎಂಬುವುದನ್ನೊಮ್ಮೆ ಕಲ್ಪನೆ ಮಾಡಿ. ದೂರದ ಊರಿನಲ್ಲಿದ್ದರೂ, ಹತ್ತಿರದಲ್ಲಿ ಕುಳಿತು ಮಾತನಾಡಿದ ಅನುಭವವನ್ನು ಸ್ಟಾರ್‌ ಲೈನ್ ನೀಡುತ್ತದೆ.”

__________________________________________

ಇಂದುಧರ ಹಳೆಯಂಗಡಿ

Advertisement

Udayavani is now on Telegram. Click here to join our channel and stay updated with the latest news.

Next