ಕಾಸರಗೋಡು: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಪಾಕಿಸ್ಥಾನದ ಜೈಶ್-ಎ-ಮೊಹಮ್ಮದ್ ಉಗ್ರ ನಡೆಸಿದ ಆತ್ಮಾಹುತಿ ದಾಳಿಯಲ್ಲಿ 40 ವೀರ ಯೋಧರನ್ನು ಕಳೆದುಕೊಂಡ ಭಾರತ ಅದಕ್ಕೆ ಪ್ರತೀಕಾರವೆಂಬಂತೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕಾರ್ಯವೆಸಗುತ್ತಿರುವ ಉಗ್ರರ ಅಡಗುದಾಣ ಮತ್ತು ಶಿಬಿರಗಳ ಮೇಲೆ ಮಂಗಳವಾರ ಮುಂಜಾನೆ ಭಾರತೀಯ ಯೋಧರು ಯಶಸ್ವಿ ವೈಮಾನಿಕ ದಾಳಿ ನಡೆಸಿದ ವರದಿಯಾಗುತ್ತಿದ್ದಂತೆ ಕಾಸರಗೋಡು ನಗರ ಸಹಿತ ರಾಜ್ಯದ ವಿವಿಧೆಡೆ ವಿಜಯೋತ್ಸವ ಆಚರಿಸಲಾಯಿತು.
ಪಟಾಕಿ ಸಿಡಿಸಿ ಸಂಭ್ರಮ
ಕಾಸರಗೋಡು ನಗರದ ಕರಂದಕ್ಕಾಡ್, ಬ್ಯಾಂಕ್ ರಸ್ತೆ ಮೊದಲಾದೆಡೆಗಳಲ್ಲಿ ಯುವಕರ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಗೆ ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ, ನ್ಯಾಯವಾದಿ ಕೆ. ಶ್ರೀಕಾಂತ್, ಮಾಜಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ರಾಜ್ಯ ಸಮಿತಿ ಸದಸ್ಯ ರವೀಶ್ ತಂತ್ರಿ ಕುಂಟಾರು, ಕೆ.ಟಿ. ಕಾಮತ್, ನ್ಯಾಯವಾದಿ ಸದಾನಂದ ರೈ, ಕೌನ್ಸಿಲರ್ ಸವಿತಾ ಟೀಚರ್, ನ್ಯಾಯವಾದಿ ಕರುಣಾಕರನ್ ನಂಬ್ಯಾರ್, ಜಿ. ಚಂದ್ರನ್, ಧನಂಜಯ ಮಧೂರು, ಎ.ಪಿ. ಹರೀಶ್ ಕುಮಾರ್, ಸೂರಜ್ ಶೆಟ್ಟಿ, ಉಮಾ ಕಡಪ್ಪುರ, ಅಂಜು ಜೋಸ್ಟಿ, ಎ. ಕೇಶವ, ಕೆ. ಶಂಕರ, ಕೆ. ಗುರುಪ್ರಸಾದ್ ಮೊದಲಾದವರು ನೇತೃತ್ವ ನೀಡಿದರು.
ಪಾಕಿಸ್ಥಾನದಲ್ಲಿರುವ ಭಯೋತ್ಪಾದಕರ ಕೇಂದ್ರಗಳ ಮತ್ತು ಅಡಗುದಾಣಗಳ ಮೇಲೆ ದಾಳಿ ನಡೆಸಿದ ಭಾರತದ ಸೈನ್ಯದ ಬಗ್ಗೆ ಪಾಕಿಸ್ಥಾನಕ್ಕೂ ಸಿಪಿಎಂ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರಿಗೂ ತೀವ್ರ ನಡುಕ ಆರಂಭವಾಗಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ, ನ್ಯಾಯವಾದಿ ಕೆ. ಶ್ರೀಕಾಂತ್ ಲೇವಡಿ ಮಾಡಿದರು.
ಪಾಕಿಸ್ಥಾನ ಮತ್ತು ಕೊಡಿಯೇರಿ ಬಾಲಕೃಷ್ಣನ್ ಅವರ ಮನೋಸ್ಥಿತಿ ಒಂದೇ ಆಗಿರುವುದರಿಂದ ಶತ್ರು ರಾಷ್ಟ್ರ ಹಾಗೂ ಸಿಪಿಎಂ ರಾಜ್ಯ ಕಾರ್ಯದರ್ಶಿಯವರಿಗೆ ಒಟ್ಟಿಗೆ ಭಯ ಶುರುವಾಗಿದೆ ಎಂದರು.
ಕೀಳು ರಾಜಕಾರಣ
ಚುನಾವಣೆಯನ್ನು ಮುಂದಿರಿಸಿ ಮೋದಿ ಸರಕಾರವು ಈ ಆಕ್ರಮಣವನ್ನು ನಡೆಸಿದೆ ಎಂದು ಪಾಕಿಸ್ಥಾನವು ವಾದಿಸಿದರೆ, ಕೊಡಿಯೇರಿ ಬಾಲಕೃಷ್ಣನ್ ಕೂಡ ಅದೇ ವಾದವನ್ನು ಸಮರ್ಥಿಸಿದ್ದಾರೆ ಎಂಬುದನ್ನು ಕೆ. ಶ್ರೀಕಾಂತ್ ಉಲ್ಲೇಖೀಸಿದರು.
ಪಾಕಿಸ್ಥಾನದ ಉಗ್ರಗಾಮಿಗಳ ಆಕ್ರಮಣದಲ್ಲಿ ದೇಶದ ವೀರ ಸೈನಿಕರು ದೇಶಕ್ಕಾಗಿ ಮರಣವನ್ನಪ್ಪಿದಾಗ ಒಪ್ಪಂದದ ಮೂಲಕ ಶಾಂತಿ ಸಮಾಧಾನ ನೆಲೆ ನಿಲ್ಲುವಂತೆ ಮಾಡಬೇಕು ಎಂದು ಹೇಳಿಕೆ ನೀಡಿದ ಕೊಡಿಯೇರಿ ಅವರು ತನ್ನ ಸಿಪಿಎಂ ಪಕ್ಷದ ಕಾರ್ಯಕರ್ತರ ಮೇಲೆ ಯಾರಾದರೂ ದಾಳಿ ನಡೆಸಿದರೆ ಆಯುಧದಿಂದಲೇ ತಕ್ಕ ಉತ್ತರ ನೀಡಬೇಕೆಂದು ಕಾರ್ಯಕರ್ತರಿಗೆ ಆದೇಶ ನೀಡುತ್ತಾರೆ. ಇದೆಂತಹ ವಿಪರ್ಯಾಸ. ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಸಿಪಿಎಂ ಪಕ್ಷವು ನಮ್ಮ ನಾಡಿನಲ್ಲಿ ನೆಲೆಯೂರಿದೆ ಎಂದು ಕೆ. ಶ್ರೀಕಾಂತ್ ಆಕ್ರೋಶ ವ್ಯಕ್ತಪಡಿಸಿದರು.