Advertisement

ಗೋಕಾಕದಲ್ಲಿ ಮತ್ತೆ ಸಂತ್ರಸ್ತರ ಪ್ರತಿಭಟನೆ

02:15 PM Feb 26, 2020 | Suhan S |

ಗೋಕಾಕ: ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಪರಿಹಾರ ವಿತರಣೆ ಹಾಗೂ ಸರ್ವೇ ಕಾರ್ಯದಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿದ್ದು ಅವುಗಳನ್ನು ಶೀಘ್ರವೇ ಸರಿಪಡಿಸಿ ನೋಂದವರಿಗೆ ನ್ಯಾಯ ಒದಗಿಸಿಕೊಡಬೇಕೆಂದು ತಾಲೂಕಿನ ತಳಕಟ್ನಾಳ ಗ್ರಾಮಸ್ಥರು ತಹಶೀಲದಾರರಿಗೆ ಮನವಿ ಸಲ್ಲಿಸಿದರು.

Advertisement

ಮಂಗಳವಾರ ನಗರದ ಮಿನಿ ವಿಧಾನಸೌಧದ ಮುಂದೆ ತಾಪಂ ಸದಸ್ಯ ಲಕ್ಷ್ಮಣ ಮುಸಗುಪ್ಪಿ ನೇತೃತ್ವದಲ್ಲಿ ಸೇರಿದ ನೂರಾರು ತಳಕಟ್ನಾಳ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ, ಮಿನಿ ವಿಧಾನಸೌಧದ ಒಳಗೆ ಹೋಗುವ ಮುಖ್ಯ ಗೇಟ್‌ ಬಂದ್‌ ಮಾಡಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ತೀವ್ರತೆ ಅರಿತು ಉಪತಹಶೀಲದಾರ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಪ್ರತಿಭಟನಾಕಾರರು ತಹಶೀಲದಾರರು ಕೂಡಲೇ ಸ್ಥಳಕ್ಕೆ ಆಗಮಿಸಬೇಕೆಂದು ಒತ್ತಾಯಿಸಿದರು. ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಜಿಲ್ಲಾಧಿಕಾರಿಗಳು ಕರೆದ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಪ್ರತಿಭಟನೆ ಮುಂದುವರೆಯುತ್ತಿದ್ದಂತೆ ಪ್ರತಿಭಟನಾಕಾರರೊಂದಿಗೆ ಸೇರಿದ ರೈತ ಸಂಘದ ಮುಖಂಡರು, ಪ್ರತಿಭಟನೆ ನಡೆಸಿ ಒಂದು ವಾರದೊಳಗಾಗಿ ನೆರೆ ಸಂತ್ರಸ್ತರಿಗೆ ಪರಿಹಾರ ದೊರಕದಿದ್ದಲ್ಲಿ ರೈತ ಸಂಘದ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಗಾಗಿ ಉಪತಹಶೀಲ್ದಾರ್‌ಗೆ ತಿಳಿಸಿ ಹಿರಿಯ ಅಧಿಕಾರಗಳ ಗಮನಕ್ಕೆ ತರುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ಹಿಂಪಡೆದರು.

ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ ಬಂದ ಮಹಾಪೂರದಿಂದ ತಳಕಟ್ನಾಳ ಗ್ರಾಮದಲ್ಲಿ ಹಲವಾರು ಮನೆಗಳು ಬಿದ್ದಿದ್ದು, ಅವುಗಳ ಸರ್ವೆ ಕಾರ್ಯದಲ್ಲಿ ಅಧಿ ಕಾರಿಗಳು ತಾರತಮ್ಯ ಎಸಗಿದ್ದು, ಪರಿಹಾರಧನ ವಿತರಣೆಯಲ್ಲೂ ಸಂತ್ರಸ್ತರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ನಮಗೆ ನ್ಯಾಯ ದೊರಕಿಲ್ಲ. ಕೂಡಲೇ ತಹಶೀಲ್ದಾರರು ಗ್ರಾಮಕ್ಕೆ ಆಗಮಿಸಿ ಹಾನಿಗೊಳಗಾದ ಸ್ಥಳದ ಬಗ್ಗೆ ಪರಿಶೀಲನೆ ನಡೆಸಿ ನೆರೆ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಾರ್ಯಾಲಯದ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಗಣಪತಿ ಈಳಿಗೇರ, ಮಾರುತಿ ಸನದಿ, ರಮೇಶ ಗೂದಿಗೊಪ್ಪ, ಪರಶುರಾಮ ಹಳ್ಳಿ, ಬಾಳೇಶ ಬಾಗೇವಾಡಿ, ತಳಕಟ್ನಾಳ ಗ್ರಾಮದ ಮುಖಂಡರಾದ ಹಣಮಂತ ಹುಲಕುಂದ, ರಮೇಶ ಭಜಂತ್ರಿ, ನಾಗಪ್ಪ ಮಾದರ, ಆರ್‌.ವಿ.ದೊಡಮನಿ, ತಾಯವ್ವ ನಂದಿ, ರಾಮಪ್ಪ ನಾಯಿಕ, ಅರ್ಜುನ ನಂದಿ, ದುಂಡಪ್ಪ ಗುದಗನ್ನವರ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next