ಗದಗ: ಮಲಪ್ರಭೆ ಹಾಗೂ ಬೆಣ್ಣಿಹಳ್ಳ ಉಕ್ಕಿ ಹರಿದಿದ್ದರಿಂದ ರೋಣ ಮತ್ತು ನರಗುಂದ ತಾಲೂಕಿನ 40ಕ್ಕೂ ಹೆಚ್ಚು ಹಳ್ಳಿಗಳ ಜನರ ಬದುಕು ಅಕ್ಷರಶಃ ಕೊಚ್ಚಿ ಹೋಗಿದೆ. ಸಾವಿರಾರು ಮನೆಗಳು ಕುಸಿದಿವೆ. ಬರೋಬ್ಬರಿ ಒಂದು ವಾರದಿಂದ ಅಬ್ಬರಿಸಿ ಬೊಬ್ಬಿರಿದ ಮಲಪ್ರಭೆ ಇದೀಗ ಶಾಂತವಾಗುತ್ತಿದೆ. ಇಷ್ಟು ದಿನ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತರಿಗೆ ಮುಂದೇನು ಎಂಬ ದೊಡ್ಡ ಸವಾಲು ಎದುರಾಗಿದೆ.
ಜಿಲ್ಲೆಯ ರೋಣ ಮತ್ತು ನರಗುಂದ ತಾಲೂಕಿನಲ್ಲಿ ಹಾದು ಹೋಗುವ ಮಲಪ್ರಭಾ ನದಿ ಹಾಗೂ ಬೆಣ್ಣಿಹಳ್ಳದಿಂದಾಗಿ ಉಭಯ ತಾಲೂಕಿನ ತಲಾ 16 ಗ್ರಾಮಗಳು ಜಲಗಂಡಾಂತರಕ್ಕೆ ತುತ್ತಾಗಿವೆ. ಜಿಲ್ಲೆಯಲ್ಲಿ ಅಷ್ಟೇನು ಮಳೆ ಇಲ್ಲದಿದ್ದರೂ ಮಲಪ್ರಭೆ ಹಾಗೂ ಬೆಣ್ಣಿಹಳ್ಳದ ಮೇಲ್ಭಾಗದಲ್ಲಿ ಮಳೆ ಅಬ್ಬರಿಸಿದ್ದರಿಂದ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿತ್ತು. ಅಪಾಯ ಮಟ್ಟ ಮೀರಿದ್ದರಿಂದ ಎರಡೂ ತಾಲೂಕಿನ ಹತ್ತಾರು ಗ್ರಾಮಗಳಿಗೆ ಪ್ರವಾಹ ಅಪ್ಪಳಿಸಿತ್ತು. ಪರಿಣಾಮ ಸುಮಾರು ಸಾವಿರಾರು ಮನೆಗಳು ಹಾನಿಗೊಳಗಾಗಿದ್ದು, ಸಂತ್ರಸ್ತರನ್ನು ಅಕ್ಷರಶಃ ಬೀದಿಗೆ ತಳ್ಳಿದೆ.
ಕುಸಿದ ಮನೆಗಳ ಎದುರು ಕಣ್ಣೀರು: ಈ ಭಾರಿ ತುಂಗಭದ್ರಾ ಮತ್ತು ಮಲಪ್ರಭಾ ನದಿ ಪಾತ್ರದಲ್ಲೂ ಒಟ್ಟೊಟ್ಟಿಗೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ಪೈಕಿ ಮಲಪ್ರಭೆ ಪಾತ್ರದಲ್ಲಿ ಹೆಚ್ಚು ಸಂಭವಿಸಿದೆ. ಪ್ರವಾಹ ಹೆಚ್ಚುತ್ತಿದ್ದಂತೆ ಗ್ರಾಮಗಳನ್ನು ತೊರೆದಿದ್ದ ಅನೇಕರಿಗೆ ತಮ್ಮ ಮನೆ, ಜಮೀನು ಸ್ಥಿತಿ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ, ಸೋಮವಾರ ಮಧ್ಯಾಹ್ನದ ಬಳಿಕ ನದಿಗಳು ಶಾಂತವಾಗಿದ್ದರಿಂದ ಜನರು ತಮ್ಮ ಗ್ರಾಮ, ಮನೆಗಳ ಸ್ಥಿತಿಗತಿಯನ್ನು ನೋಡಲು ಧಾವಿಸಿ ಬರುತ್ತಿದ್ದಾರೆ. ಕೆಲವೆಡೆ ಮೊಣಕಾಲುಗಳವರೆಗೆ ನೀರಿದ್ದರೂ ಲೆಕ್ಕಿಸದೇ ಮನೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.
ಪ್ರವಾಹದ ಭೀಕರತೆಗೆ ಸಾವಿರಾರು ಮನೆಗಳು ನೆಲಕ್ಕಚ್ಚಿವೆ. ಈ ಭಾಗದ ನೂರಾರು ಹೆಕ್ಟೇರ್ ಪ್ರದೇಶದ ಜಮೀನುಗಳ ಚಿತ್ರಣವೇ ಬದಲಾಗಿದೆ. ತಮ್ಮ ಕನಸಿನ ಮನೆ ಹಾಗೂ ಅನ್ನಕೊಡುವ ಭೂಮಿಯ ಚಿತ್ರಣವನ್ನು ಕಂಡು ಜನರು ಬೆಚ್ಚಿ ಬೀಳುತ್ತಿದ್ದಾರೆ. ವಿಧಿಯೇ ನೀನೆಷ್ಟು ಕ್ರೂರಿ ಎಂದು ಗೋಳಾಡುತ್ತಿದ್ದಾರೆ.
ಹಲವು ಮನೆಗಳು ಭಾಗಶಃ ಕುಸಿದಿದ್ದು, ಇನ್ನೂ ಕೆಲ ಮನೆಗಳು ಮುಟ್ಟಿದರೆ ಬೀಳುವಂತಾಗಿದೆ. ಮತ್ತಿತರೆ ಮನೆಗಳ ಮೇಲ್ಛಾವಣಿ, ಗೋಡೆಗಳಿಂದ ನೀರು ಬಸಿಯುತ್ತಿದ್ದು, ಶೀಥಿಲಾವಸ್ಥೆಗೆ ತಲುಪಿವೆ. ಯಾವುದೇ ಕ್ಷಣಾದಲ್ಲದಾರೂ ಮೈಮೇಲೆ ಕುಸಿದು ಬೀಳುವಂತಿವೆ. ಹೀಗಾಗಿ ತಮ್ಮದೇ ಮನೆಯಾಗಿದ್ದರೂ, ಕಟ್ಟಡಗಳ ಸ್ಥಿತಿಯಿಂದ ಒಳ ಪ್ರವೇಶಿಸಲಾಗದೇ ಮನೆ ಮುಂದೆಯೇ ಕಣ್ಣೀರಿಡುತ್ತಿರುವುದು ನೋಡುಗರ ಮನಕಲುಕುತ್ತಿವೆ.
ಇಂತಹ ಪರಿಸ್ಥಿತಿ ಮಧ್ಯೆಯೇ ಕೆಲ ಯುವಕರು ಧೈರ್ಯದಿಂದ ಮುನ್ನುಗ್ಗಿ ಮನೆಯಲ್ಲಿ ಅಳಿದುಳಿದ ಪಾತ್ರೆ, ಪಗಡೆ, ಕಾಳು ಕಡಿಗಳನ್ನು ಹೊತ್ತು ತರುತ್ತಿದ್ದಾರೆ. ಪ್ರವಾಹದಿಂದ ಹಾನಿಗೊಳಗಾಗಿರುವ ಕಾಳು ಕಡಿಗಳನ್ನು ಬಿಸಿಲಿಗೆ ಒಣಗಿಸಿಕೊಳ್ಳುತ್ತಿದ್ದಾರೆ. ಮನೆ ಕುಸಿದಿದ್ದರಿಂದ ನಿರಾಶ್ರಿತರಾಗಿರುವ ಕುಟುಂಬಗಳು ಸರಕಾರದ ಪರಿಹಾರ ಕೇಂದ್ರಗಳಲ್ಲೇ ಮುಂದುವರಿಯುವಂತಾಗಿದೆ. ದಾನಿಗಳು ನೀಡಿರುವ ಪರಿಹಾರ ಸಾಮಗ್ರಿಗಳು ಇಂದಲ್ಲ ನಾಳೆ ಮುಗಿದು ಹೋಗಲಿದ್ದು, ಮುಂದೇನು ಎಂಬ ಭವಿಷ್ಯದ ಚಿಂತೆಯಲ್ಲಿ ಮುಳುಗಿದ್ದಾರೆ.