Advertisement
ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಪಾಟಾಜೆ ಪರಮೇಶ್ವರಿ ಅವರ ಕುಟುಂಬ ಕುಸಿದ ಮನೆಯಿಂದ ಕುಸಿಯುವ ಹಂತದಲ್ಲಿರುವ ಬೆಳ್ಳಾರೆ ಪ್ರಾಥಮಿಕ ಕೇಂದ್ರದ ಹಳೆಯ ಕಟ್ಟಡಕ್ಕೆ ಸ್ಥಳಾಂತರಗೊಂಡು ಪಾಡು ಪಡುತ್ತಿದೆ. ಸ್ಥಳಾಂತರಗೊಂಡು 15 ದಿನ ಕಳೆದರೂ ಈ ಕುಟುಂಬಕ್ಕೆ ಸೂರು ಕಲ್ಪಿಸುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದೆ.
ಸುಮಾರು 55 ವರ್ಷ ದಾಟಿರುವ ಪರಮೇಶ್ವರಿ ಅವರು ತನ್ನ ಅಂಗವಿಕಲ ಪುತ್ರ ಬಾಲಕೃಷ್ಣ ಹಾಗೂ ಗಣೇಶ ಅವರೊಂದಿಗೆ ಪಾಟಾಜೆಯಲ್ಲಿ ವಾಸವಾಗಿದ್ದರು. ತಿಂಗಳ ಹಿಂದೆ ಸುರಿದ ಭಾರೀ ಮಳೆಗೆ ಅವರ ಮಣ್ಣಿನ ಇಟ್ಟಿಗೆಯ ಗೋಡೆಯಿಂದ ರಚಿಸಲಾಗಿದ್ದ ಮನೆ ಸಂಪೂರ್ಣ ಕುಸಿದು ಬಿದ್ದಿತ್ತು. ಬೀದಿಪಾಲಾದ ಕುಟುಂಬ ಪರಮೇಶ್ವರಿ ಅವರ ಹೆಸರಿನಲ್ಲಿರುವ ಕಾವಿನಮೂಲೆಯ 5 ಸೆಂಟ್ಸ್ ಜಾಗದಲ್ಲಿ ಟರ್ಪಾಲು ಹಾಕಿ ರಾತ್ರಿ ದಿನ ಕಳೆದಿತ್ತು. ಈ ಮಾಹಿತಿ ಪಡೆದ ಬೆಳ್ಳಾರೆ ಗ್ರಾ.ಪಂ., ಕುಟುಂಬವನ್ನು ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆಯ ಕಟ್ಟಡಕ್ಕೆ ಸ್ಥಳಾಂತರ ಮಾಡಿತ್ತು.
ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆಯ ಕಟ್ಟಡ ಬೀಳುವ ಹಂತ ದಲ್ಲಿರುವಾಗಲೇ ಆ ಕಟ್ಟಡಕ್ಕೆ ಪರಮೇಶ್ವರಿ ಅವರ ಕುಟುಂಬವನ್ನು ಸ್ಥಳಾಂತರಿಸಲಾಗಿದೆ. ಹಳೆಯ ಕಟ್ಟಡದ ಒಂದು ಮೂಲೆಯಲ್ಲಿ ಮನೆ ಮಂದಿ ಇರಲು ಅವಕಾಶ ನೀಡ ಲಾಗಿದೆ. ಆ ಕೊಠಡಿಯೊಳಗೆ ಮಳೆಗೆ ನೀರು ನುಗ್ಗುತ್ತಿದ್ದು, ಯಾವುದೇ ಭದ್ರತೆ ಇಲ್ಲ. ಕಿಟಕಿ ಮುರಿದು ಹೋಗಿದೆ. ಶುಚಿತ್ವದ ಕೊರತೆಯಿಂದ ಸೊಳ್ಳೆಗಳು ತುಂಬಿವೆ. ಹೀಗಾಗಿ ಅಂಗವಿಕಲ ಯುವಕನಿರುವ ಕುಟುಂಬಕ್ಕೆ ಬೆಂಕಿಯಿಂದ ಬಾಣಲೆಗೆ ಬಿದ್ದ ಸ್ಥಿತಿ ಉಂಟಾಗಿದೆ.
Related Articles
ಪರಮೇಶ್ವರಿ ಅವರ ಪತಿ ನಿಧನರಾದ ಬಳಿಕ ಅದೇ ಜಾಗದಲ್ಲಿ ಮಣ್ಣಿನ ಇಟ್ಟಿಗೆಯ ಮನೆ ಕಟ್ಟಿ ಕುಟುಂಬ ಜೀವನ ಸಾಗಿಸುತ್ತಿತ್ತು. ಹಗಲು ಹೊತ್ತಿನಲ್ಲಿ ಭಾರೀ ಮಳೆಗೆ ಮನೆಗೆ ಕುಸಿದು ಬೀಳುತ್ತಿದ್ದಂತೆ ಗಣೇಶ್ ಅವರು ಅಂಗವಿಕಲ ಅಣ್ಣನನ್ನು ಎತ್ತಿಕೊಂಡು ಹೊರಗೆ ಬಂದಿದ್ದಾರೆ. ಮನೆಯಲ್ಲಿದ್ದ ಸಾಕು ಪ್ರಾಣಿಗಳು ಮಣ್ಣಿನಡಿಗೆ ಸಿಲುಕಿ ಸತ್ತಿವೆ. ಮನೆಯ ಎಲ್ಲ ಸಾಮಗ್ರಿಗಳು ನಾಶವಾಗಿವೆ ಎಂದು ಅಳಲು ತೋಡಿಕೊಳ್ಳುತ್ತಾರೆ ಮನೆ ಮಂದಿ.
Advertisement
ಪರಿಹಾರ ಸಿಕ್ಕಿಲ್ಲಪರಮೇಶ್ವರಿ ಬೆಳ್ಳಾರೆಯ ಸೊಸೈಟಿಯಲ್ಲಿ ದಿನಗೂಲಿ ನೌಕರೆ. ಹಿರಿಯ ಮಗ ಅಂಗವಿಕಲನಾಗಿದ್ದು, ಸಹೋದರ ಆತನ ಆರೈಕೆಯಲ್ಲಿ ತೊಡಗಿದ್ದಾನೆ. ಮನೆ ಕುಸಿದ ಬಳಿಕ ಗ್ರಾ.ಪಂ.ನವರು ಕುಸಿಯಲು ಸಿದ್ಧವಾಗಿರುವ ಹಳೆಯ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ಸ್ಥಳಾಂತರ ಮಾಡಿದ್ದಾರೆಯೇ ಹೊರತು ಯಾವುದೇ ಪರಿಹಾರ ನೀಡಿಲ್ಲ ಎಂದು ಪರಮೇಶ್ವರಿ ಹಾಗೂ ಮಗ ಗಣೇಶ್ ಕಣ್ಣೀರಿಡುತ್ತಿದ್ದಾರೆ. ಊಟಕ್ಕೂ ಗತಿಯಿಲ್ಲ
ಇಡೀ ಮನೆ ಕುಸಿದು ನೆಲ ಸಮವಾಗಿದ್ದರೂ ಯೋಗ್ಯವಾದ ವಸತಿ ವ್ಯವಸ್ಥೆ ಕೊಟ್ಟಿಲ್ಲ. ಉಚಿತ ಊಟ, ಉಪಾಹಾರದ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಇಳಿ ವಯಸ್ಸಿನ ಪರಮೇಶ್ವರಿ ಅವರ ದುಡಿಮೆ ಮಾಡಿ ದಿನಸಿ ತಂದು ಹಸಿವು ನೀಗಿಸಬೇಕು. ಮಳೆ ಬಂದರೆ ಅಡುಗೆ ಮಾಡಲು ಸಾಧ್ಯವಿಲ್ಲದ ಸ್ಥಿತಿ ಇಲ್ಲಿದೆ. ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರ ಕುಟುಂಬಗಳಿಗೆ ಸೂಕ್ತ ವಸತಿ, ಆಹಾರ ವ್ಯವಸ್ಥೆ ಒದಗಿಸುವ ಸರಕಾರದ ಭರವಸೆ ಪಾಲನೆಯಾಗಿಲ್ಲ ಎನ್ನುವುದಕ್ಕೆ ಈ ಕುಟುಂಬವೇ ಪ್ರತ್ಯಕ್ಷ ಸಾಕ್ಷಿ. ಮನೆ ನಿರ್ಮಾಣಕ್ಕೆ ಪ್ರಯತ್ನ
ಪಂಚಾಯತ್‌ನಿಂದ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದೇವೆ. ಊಟದ ವ್ಯವಸ್ಥೆಗೆ ಅಕ್ಕಿ ಸಾಮಗ್ರಿಗಳನ್ನು ತಾಲೂಕು ಕಚೇರಿಯಿಂದ ಸಂಗ್ರಹಿಸಿ ನೀಡಿದ್ದೇವೆ. ಶೀಘ್ರದಲ್ಲಿ ನೂತನ ಮನೆ ನಿರ್ಮಿಸಲು ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿ ಆಸರೆ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇವೆ. ಸಂಘ ಸಂಸ್ಥೆಗಳು ಸಹಕಾರಕ್ಕೆ ಮುಂದಾಗಿದ್ದು, ಅದನ್ನು ಅವರಿಗೆ ತಲುಪಿಸಲಾಗುವುದು.
– ಧನಂಜಯ ಕೆ.ಆರ್. ಪಿಡಿಒ, ಬೆಳ್ಳಾರೆ ಗ್ರಾ.ಪಂ. ಚೆಕ್ ವಿತರಿಸಲು ಕ್ರಮ
ಪರಮೇಶ್ವರಿ ಅವರಿಗೆ ಹೊಸ ಮನೆ ಕಟ್ಟಲು ರಾಜೀವ ಗಾಂಧಿ ವಸತಿ ಯೋಜನೆ ಅಡಿ ಚೆಕ್ ವಿತರಿಸಲು ಕ್ರಮ ಕೈಗಳ್ಳಲಾಗುವುದು. ಅವರಿಗೆ ಉಳಿದುಕೊಳ್ಳಲು ಪಂಚಾಯತ್ ವತಿಯಿಂದ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ವ್ಯವಸ್ಥೆಗಳು ಸರಿ ಇಲ್ಲದಿದ್ದಲ್ಲಿ ಪರಶೀಲಿಸಿ ಬೇರೆಡೆ ಸ್ಥಳಾಂತರಿಸಲಾಗುವುದು. ಆಹಾರಕ್ಕೂ ತೊಂದರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲು ಪಂಚಾಯತ್‌ಗೆ ತಿಳಿಸಿದ್ದೇವೆ.
– ಕುಂಞಿ ಅಹಮ್ಮದ್, ತಹಶೀಲ್ದಾರ್, ಸುಳ್ಯ ಉಮೇಶ್ ಮಣಿಕ್ಕಾರ