Advertisement

ಸಂಪುಟದ ಸಂಭ್ರಮಕ್ಕಿಂತ ಸಂತ್ರಸ್ತರ ರಕ್ಷಣೆ ಮುಖ್ಯ: ಕೋಟ

10:24 PM Aug 16, 2019 | Sriram |

ಉಡುಪಿ: ಯಡಿಯೂರಪ್ಪ ನವರು ಮುಖ್ಯಮಂತ್ರಿಯಾಗಿ ಮೂರು ವಾರ ಕಳೆದರೂ, ಸಂಪುಟ ರಚನೆಯಾಗದಿರುವ ಕುರಿತು ಕಾಂಗ್ರೆಸ್‌ನಾಯಕ ಉಗ್ರಪ್ಪ ಕಟುವಾಗಿ ಟೀಕಿಸಿ, ಯಾವುದೇ ಸರಕಾರ ರಚನೆಯಾಗಿ 8 ದಿನಗಳೊಳಗೆ ಸಚಿವ ಸಂಪುಟ ರಚಿಸದಿದ್ದರೆ ರಾಜ್ಯಪಾಲರು ಸರಕಾರವನ್ನು ವಜಾ ಮಾಡಬೇಕು ಎಂದು ಆಗ್ರಸಿರುವುದಕ್ಕೆ ವಿಧಾನ ಪರಿಷತ್‌ ಮಾಜಿ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.

Advertisement

ಕುಮಾರ ಸ್ವಾಮಿಯವರ ಸಮ್ಮಿಶ್ರ ಸರಕಾರವು ಸಚಿವ ಸಂಪುಟದ ರಚನೆಗೆ 14 ದಿನಗಳನ್ನು ತೆಗೆದುಕೊಂಡಿತ್ತು. 8 ದಿನಗಳ ಅವಧಿಯ ಸೂತ್ರ ಹಿಂದಿನ ಸರಕಾರಕ್ಕೆ ಯಾಕೆ ಅನ್ವಯಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ಸಂತೃಪ್ತರ ರಕ್ಷಣೆಗೆ ನಿಂತ ಜನಪ್ರತಿನಿಧಿಗಳು
ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸಿದ 4 ದಿನಗಳಲ್ಲಿ ರಾಜ್ಯದಲ್ಲಿ ಜಲಪ್ರಳಯ ಉಂಟಾಗಿ 17 ಜಿಲ್ಲೆಗಳಲ್ಲಿ ಅತಿವೃಷ್ಟಿ ಉಂಟಾಗಿದೆ. ಹಿರಿಯರಾದ ಉಗ್ರಪ್ಪನವರಿಗೂ ತಿಳಿದಿರುವಂತೆ ರಾಜ್ಯದಲ್ಲಿ 50 ಸಾವಿರ ವಾಸ್ತವ್ಯದ ಮನೆಗಳು ಕುಸಿದು ಹೋಗಿದೆ. 40ಕ್ಕೂ ಹೆಚ್ಚು ಜನರು ಜಲ ಪ್ರಳಯಕ್ಕೆ ಬಲಿಯಾಗಿದ್ದಾರೆ. ನೂರಾರು ಸೇತುವೆಗಳು ಕುಸಿದು ಹೋಗಿವೆ. 86ಕ್ಕೂ ಹೆಚ್ಚು
ತಾಲೂಕುಗಳಲ್ಲಿ ಜನರು ಸಂಕಷ್ಟ ಅನುಭಸುತ್ತಿದ್ದಾರೆ. 4 ಲಕ್ಷ ಹೆಕ್ಟೇರ್‌ ಕೃಷಿ ಭೂಮಿ ನೆಲಸಮವಾಗಿದೆ.

ಇಂತಹ ಸಂದರ್ಭದಲ್ಲಿ ಸಚಿವ ಸಂಪುಟದ ಸಂಭ್ರಮಾಚರಣೆಗಿಂತಲೂ, ಮುಂದೆ ಸಚಿವರಾಗುವ ಶಾಸಕರ ಸಹಿತ ಎಲ್ಲ ಜನಪ್ರತಿನಿಧಿಗಳು ಸಂತೃಪ್ತರ ರಕ್ಷಣೆಗೆ ನಿಂತಿದ್ದಾರೆ. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರು ನಿರಂತರ 10ಕ್ಕೂ ಹೆಚ್ಚು ದಿನಗಳಿಂದ ಪ್ರವಾಹ ಪೀಡಿತ ಜಿಲ್ಲೆಯಲ್ಲಿ ಸಂಷ್ಟದಲ್ಲಿರುವ ಜನರ ಮಧ್ಯೆ ಕುಳಿತು ಅಧಿಕಾರಿಗಳ ಜತೆ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಒಂದೇ ದಿನ 2-3 ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. 1,300 ಕ್ಕೂ ಹೆಚ್ಚು ನಿರಾಶ್ರಿತರ ಕೇಂದ್ರಗಳನ್ನು ತೆರೆದು ಸಂತ್ರಸ್ತರ ರಕ್ಷಣೆ ಮಾಡಲಾಗುತ್ತಿದೆ ಎಂದರು.

ಪರಿಹಾರ ಘೋಷಣೆಯಾಗಿದೆ
ಉಗ್ರಪ್ಪನವರಾಗಲಿ, ಡಿ.ಕೆ.ಶಿವಕುಮಾರ್‌ ಅವರಗಾಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಸಂಭ್ರಮಕ್ಕಿಂತಲೂ ಜಲಾವೃತವಾದ ಸಾಮಾನ್ಯ ಜನರ ಬದುಕು ಕಟ್ಟಿಕೊಡುವಲ್ಲಿ ಸರಕಾರದ ಧಾವಂತ ಅರ್ಥಮಾಡಿಕೊಳ್ಳಬೇಕು ಎಂದು ವಿನಂತಿಸಿದ್ದಾರೆ. ಇಡೀ ರಾಜ್ಯದಲ್ಲಿ ಮನೆಗಳನ್ನು ಕಳೆದುಕೊಂಡ ಸಂಕಷ್ಟಪೀಡಿತ ಕುಟುಂಬಗಳಿಗೆ ಪ್ರತಿ ಮನೆ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು 5 ಲ.ರೂ. ಪರಿಹಾರ ಘೋಷಿಸಿದ್ದಾರೆ. 50 ಸಾವಿರ ಮನೆಗಳು ದುರಂತಕ್ಕೆ ಒಳಗಾಗಿವೆ. ಕೇವಲ ಮನೆಗಳ ಪುನರ್‌ನಿರ್ಮಾಣಕ್ಕೆ ತುರ್ತು ರಿಪೇರಿಗೆ 3 ಸಾವಿರ ಕೋ.ರೂ. ಹೊರೆ ಬೀಳಲಿದೆ. ನಿರಾಶ್ರಿತ ಕುಟುಂಬಗಳಿಗೆ ತುರ್ತು ಪರಿಹಾರವಾಗಿ 10 ಸಾವಿರ ರೂ. ಘೋಷಿಸಲಾಗಿದೆ. ಮನೆ ಕಳೆದುಕೊಂಡವರಿಗೆ ಪುನರ್‌ನಿರ್ಮಾಣ ಮಾಡುವವರೆಗೆ ಬಾಡಿಗೆ ಮನೆಯಲ್ಲಿರಲು ಮಾಸಿಕ 5 ಸಾವಿರ ರೂ. ಬಾಡಿಗೆ ನೀಡಲಾಗುತ್ತದೆ. ಇದಕ್ಕಾಗಿ ಕೇಂದ್ರ ಸರಕಾರದಿಂದ ನಿಶ್ಚಿತವಾಗಿ ನೆರವು ಹರಿದು ಬರಲಿದೆ. ಇಂತಹ ಸಂದರ್ಭ ಪಕ್ಷ ಭೇದ ಮರೆತು ಎಲ್ಲ ಪಕ್ಷದ ಶಾಸಕರು ಸಂತ್ರಸ್ತರ ಪರವಾಗಿ ದುಡಿಯುವಾಗ ಪಕ್ಷಗಳು ಟೀಕೆ ಮಾಡುವುದು ತರವಲ್ಲ.
ವಿಪಕ್ಷಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಅವರು ಉಗ್ರಪ್ಪ ಮತ್ತು ಡಿ.ಕೆ.ಶಿವಕುಮಾರ್‌ ಅವರಿಗೆ
ಪತ್ರಿಕಾ ಪ್ರಕಟನೆ ಮೂಲಕ ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next