ಉಡುಪಿ: ಮುಂಜಾನೆ 3 ಗಂಟೆಯ ವೇಳೆ ಸುಮಾರು 20 ಕಿ.ಮೀ ಸ್ವತಃ ಆಟೋ ಚಲಾಯಿಸಿ ಗರ್ಭಿಣಿಯೋರ್ವರನ್ನು ಆಸ್ಪತ್ರೆಗೆ ದಾಖಲಿಸಿದ್ದ ಪೆರ್ಣಂಕಿಲದ ಆಶಾ ಕಾರ್ಯಕರ್ತೆ ರಾಜೀವಿ ಅವರ ಕಾರ್ಯವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಶ್ಲಾಘಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮುಂಜಾನೆ 3 ಗಂಟೆಯ ವೇಳೆ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿರುವ ಆಶಾಕಾರ್ಯಕರ್ತೆ ರಾಜೀವಿ ಅವರ ಕಾರ್ಯ ಪ್ರಶಂಸನೀಯ ಎಂದಿದ್ದಾರೆ.
ರಾಜೀವಿ ಅವರಿಗೆ ಮಧ್ಯರಾತ್ರಿ 3.15ರ ಸುಮಾರಿಗೆ ಪೆರ್ಣಂಕಿಲದ ಶ್ರೀಲತಾ ಎಂಬವರು ಕರೆ ಮಾಡಿ ಹೆರಿಗೆ ನೋವು ಹೆಚ್ಚಾಗಿರುವ ವಿಷಯ ತಿಳಿಸಿದ್ದಾರೆ. ತಕ್ಷಣವೇ ರಾಜೀವಿ ಅವರು ತಮ್ಮ ಆಟೊ ರಿಕ್ಷಾ ಓಡಿಸಿ ಗರ್ಭಿಣಿಯನ್ನು ಪೆರ್ಣಂಕಿಲದಿಂದ 20 ಕಿ.ಮೀ ದೂರದಲ್ಲಿರುವ ಉಡುಪಿಯ ಸರ್ಕಾರಿ ಮಹಿಳಾ ಹಾಗೂ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶ್ರೀಲತಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ರಾಜೀವಿ ಅವರು ತಿಳಿಸಿದ್ದಾರೆ.
ನನ್ನ ಗಂಡನಿಂದ ಹವ್ಯಾಸಕ್ಕಾಗಿ ಆಟೋ ಚಲಾಯಿಸುವುದನ್ನು ಕಲಿತಿದ್ದೆ. ಆದರೆ, ಇದೇ ನನಗೆ ಈಗ ವೃತ್ತಿಯಾಗಿದೆ. ಈಗಾಗಲೇ ಹಲವು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದೇನೆ. ಹೆರಿಗೆಗೆ ಆಟೋ ಬಾಡಿಗೆ ಪಡೆದುಕೊಳ್ಳುವುದಿಲ್ಲ ಎಂದಿದ್ದಾರೆ.
ಪೆರ್ಣಂಕಿಲ ಪ್ರದೇಶದಲ್ಲಿ ಕಡಿಮೆ ಬಸ್ ಸೇವೆ ಇರುವ ಕಾರಣ ಪೆರ್ಣಂಕಿಲ ಪ್ರದೇಶದ ಮಹಿಳೆಯರನ್ನು ಸುರಕ್ಷಿತವಾಗಿ ಮನೆಗಳಿಗೆ ತಲುಪಿಸುವಂತೆ ರಾಜೀವಿ ಮಾಡುತ್ತಿದ್ದಾರೆ. ಜೀವನ ನಿರ್ವಹಣೆಗಾಗಿ ಬೆಳಗ್ಗಿನಿಂದ ಮಧ್ಯಾಹ್ನ ತನಕ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡಿದರೆ, ರಾತ್ರಿಯರೆಗೆ ಆಟೋ ಚಾಲಕಿಯಾಗಿ ದುಡಿಯುತ್ತಿದ್ದೇನೆ ಎಂದು ಹೇಳಿದ್ದಾರೆ.