ಶಹಾಪುರ: ತಾಲೂಕಿನ ವಿಭೂತಿಹಳ್ಳಿ ಗ್ರಾಮದ ಡಾ| ಬಾಬಾಸಾಹೇಬ್ ಅಂಬೇಡ್ಕರ್ ಅವರ ನಾಮಫಲಕಕ್ಕೆ
ಯಾರೋ ಕಿಡಿಗೇಡಿಗಳು ಸಗಣಿ ಎರಚಿದ ಘಟನೆ ನಡೆದಿದೆ.
ಕಿಡಿಗೇಡಿಗಳ ಕೃತ್ಯ ಖಂಡಿಸಿ ದಲಿತ ಸಂಘಟನೆಗಳ ಕಾರ್ಯಕರ್ತರು, ಡಾ| ಅಂಬೇಡ್ಕರ್ ಅಭಿಮಾನಿಗಳು ರಾಜ್ಯ
ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಅಲ್ಲದೇ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಶಿವಕುಮಾರ ತಳವಾರ, ಸೋಮವಾರ ಬೆಳಗ್ಗೆ ಗ್ರಾಮದಲ್ಲಿ ಅಶಾಂತಿ ಮೂಡಿಸುವ ಉದ್ದೇಶದಿಂದ ಕಿಡಿಗೇಡಿಗಳು ಬಾಬಾಸಾಹೇಬರ ನಾಮಫಲಕಕ್ಕೆ ಸಗಣಿ ಎರಚಿದ್ದು, ಸರ್ವ ಜನಾಂಗದವರು ಉತ್ತಮ ಬಾಂಧವ್ಯದಿಂದ ಸಹಬಾಳ್ವೆ ನಡೆಸುವ ಇಂತಹ ಗ್ರಾಮದಲ್ಲಿ ಶಾಂತಿ ಹದಗೆಡಿಸುವ ಕೃತ್ಯ ನಡೆಸಿದ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಜರುಗಿಸಬೇಕು ಎಂದು ಆಗ್ರಹಿಸಿದರು.
ಮಹಾ ಮಾನವತಾವಾದಿ ಡಾ|ಅಂಬೇಡ್ಕರ್ ಅವರ ನಾಮಫಲಕ್ಕೆ ಸಗಣಿ ಎರಚಿದವರನ್ನು ಶೀಘ್ರದಲ್ಲಿ
ಆರೋಪಿಗಳನ್ನು ಬಂಧಿಸದಿದ್ದಲ್ಲಿ ರಾಜ್ಯಾದ್ಯಂತ ದಲಿತ ಸಂಘಟನೆಗಳಿಂದ ಹೋರಾಟ ನಡೆಸಲಾಗುವುದು ಎಂದು
ಎಚ್ಚರಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ನಾಗರಾಜ ಪ್ರತಿಭಟನಾ ನಿರತರ ಮನವೊಲಿಸಿ ಕಿಡಿಗೇಡಿಗಳನ್ನು ಪತ್ತೆ ಮಾಡಿ ಬಂಧಿಸುವದಾಗಿ ಭರವಸೆ ನೀಡಿದರು. ಸಿಪಿಐ ಅವರ ಭರವಸೆ ಮೇರೆಗೆ ದಲಿತ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ವಾಪಸ್ ಪಡೆದರು.
ಡಾ| ಅಂಬೇಡ್ಕರ್ ನಾಮಫಲಕ ಶುಚಿಗೊಳಿಸಿ ಪೂಜೆ ಸಲ್ಲಿಸಲಾಯಿತು. ಮಲ್ಲಯ್ಯ, ನಿಂಗಣ್ಣ, ಮಲ್ಲೇಶಪ್ಪ ನಾಟೇಕಾರ ಸೇರಿದಂತೆ ಇತರರಿದ್ದರು. ಕಿಡಗೇಡಿಗಳನ್ನು ಕೂಡಲೇ ಪತ್ತೆ ಮಾಡಲಾಗುವುದು. ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗ್ರಾಮದಲ್ಲಿ ಶಾಂತಿಯುತ ವಾತಾವರಣವಿದೆ. ಎಲ್ಲ ಸಮುದಾಯದವರು ಪರಸ್ಪರ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ನಾಗರಾಜ ಜೆ., ಸಿಪಿಐ ಶಹಾಪುರ