Advertisement

VHP ಆವರಣದ ಸಂಘರ್ಷ: ಸಮಸ್ಯೆ ಇತ್ಯರ್ಥಕ್ಕೆ ಹಿರಿಯರ ನೇತೃತ್ವಕ್ಕೆ ಸಂಘದ ಮುಖಂಡರ ಸೂಚನೆ?

02:22 AM Oct 26, 2024 | Team Udayavani |

ಪುತ್ತೂರು: ವಿಹಿಂಪ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆಯಲ್ಲಿ ಕಾರ್ಯಕರ್ತರೊಳಗೆ ಉಂಟಾದ ಸಂಘರ್ಷವನ್ನು ಶಾಶ್ವತ ಶಮನಗೊಳಿಸಲು ಹಿರಿಯರು ನೇತೃತ್ವ ವಹಿಸಿಕೊಳ್ಳುವಂತೆ ಸಂಘ ಪರಿವಾರದ ಪ್ರಮುಖರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Advertisement

ಒಂದು ಕಾಲದಲ್ಲಿ ವಿಹಿಂಪ, ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದ ಅರುಣ್‌ ಕುಮಾರ್‌ ಪುತ್ತಿಲ ಹಾಗೂ ಹಿಂದೂ ಪರ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಸಂಘಟನೆಯ ಕೆಲವು ಕಾರ್ಯಕರ್ತರ ನಡುವೆ ಬುಧವಾರ ಸಂಘಟನೆಯ ಶಕ್ತಿ ಸ್ಥಳದಲ್ಲೇ ಉಂಟಾದ ಘರ್ಷಣೆ ಸಂಘ ಪರಿವಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.

ವಿಹಿಂಪ ಕೇಂದ್ರಿಯ ಕಾರ್ಯದರ್ಶಿ ಆಕ್ರೋಶ
ವಿಹಿಂಪ ಕೇಂದ್ರಿಯ ಕಾರ್ಯದರ್ಶಿ ಗೋಪಾಲ್‌ ಜಿ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲೇ ಈ ರೀತಿಯ ಘಟನೆ ನಡೆದಿದ್ದು, ಈ ಬಗ್ಗೆ ತುರ್ತು ಬೈಠಕ್‌ನಲ್ಲಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ತಿಳಿದು ಬಂದಿದೆ. ಎಲ್ಲ ಗ್ರಾಮಗಳಲ್ಲಿ ವಿಹಿಂಪ ಶಾಖೆ ಹೊಂದಿರುವ ಪುತ್ತೂರು ತಾಲೂಕು ಸಂಘ ಪರಿವಾರದ ಸಂಘಟನ ಶಕ್ತಿ ಕೇಂದ್ರವಾಗಿದ್ದು, ಇಲ್ಲಿನ ಈ ಬೆಳವಣಿಗೆಯಿಂದ ಎಲ್ಲೆಡೆ ತಪ್ಪು ಸಂದೇಶ ರವಾನಿಸಿದಂತಾಗಿದೆ ಎನ್ನುವ ಅಂಶ ಬೈಠಕ್‌ನಲ್ಲಿ ಪ್ರಸ್ತಾವವಾಗಿದೆ.

ಮುಂದುವರಿದ ಸಂದೇಶ ಸಂಘರ್ಷ..!
ಘಟನೆ ಬಗ್ಗೆ ಅರುಣ್‌ ಪುತ್ತಿಲ ಹಾಗೂ ಮುರಳಿಕೃಷ್ಣ ಹಸಂತಡ್ಕ ಬಹಿರಂಗ ಹೇಳಿಕೆ ನೀಡಿದ್ದು, ಇದರಲ್ಲಿ ಉಲ್ಲೇಖವಾಗಿರುವ ಅಂಶಗಳ ಬಗ್ಗೆ ಸಂದೇಶ ಸಂಘರ್ಷ ಮುಂದುವರಿದಿದೆ. ಇಬ್ಬರು ಮುಖಂಡರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಕೆಸರೆರಚಾಟ ಮುಂದುವರಿಸಿದ್ದಾರೆ. ಕಟು ಪದಗಳಲ್ಲಿ ಟೀಕೆ ಮುಂದುವರಿದಿದೆ.

ವಿಹಿಂಪ ಕಾಯಕ್ರಮದಲ್ಲಿ ಶಾಸಕ ರೈ: ಕಾಂಗ್ರೆಸ್‌ ಕಾರ್ಯಕರ್ತರ ಅಸಮಾಧಾನ?
ಪುತ್ತೂರು: ವಿಶ್ವ ಹಿಂದೂ ಪರಿಷದ್‌ ಜಿಲ್ಲಾ ಕಾರ್ಯಾಲಯದ ಕಟ್ಟಡದ ಭೂಮಿ ಪೂಜೆಯಲ್ಲಿ ಪಾಲ್ಗೊಂಡ ಶಾಸಕ ಅಶೋಕ್‌ ಕುಮಾರ್‌ ರೈ ಅವರ ನಡೆ ವಿರುದ್ಧ ಕಾಂಗ್ರೆಸ್‌ನಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿರುವ ಅಂಶ ಬೆಳಕಿಗೆ ಬಂದಿದೆ.

Advertisement

ಎರಡು ದಶಕಗಳ ಕಾಲ ಬಿಜೆಪಿಯಲ್ಲಿದ್ದ ಅಶೋಕ್‌ ರೈ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೇರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರ ಗೆಲುವಿನಲ್ಲಿ ಅಲ್ಪಸಂಖ್ಯಾಕ ಸಮುದಾಯದ ಮತಗಳು ಪ್ರಧಾನ ಪಾತ್ರ ವಹಿಸಿತ್ತು.

ಬುಧವಾರ ನಡೆದ ಭೂಮಿ ಕಾರ್ಯಕ್ರಮದಲ್ಲಿ ವಿಹಿಂಪ ಮುಖಂಡರ ಆಹ್ವಾನದಂತೆ ಆಗಮಿಸಿದ್ದರು. ಇದೇ ವಿಚಾರ ಈಗ ಕೈ ಪಾಳಯದಲ್ಲಿ ಚರ್ಚಾ ವಸ್ತುವಾಗಿದೆ. ಅಶೋಕ್‌ ರೈ ಭಾಗವಹಿಸಿರುವ ಬಗ್ಗೆ ಕೆಲವು ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಹೈಕಮಾಂಡ್‌ನ‌ ಗಮನಕ್ಕೂ ತಂದಿದ್ದಾರೆ. ಸಂಘ ಪರಿವಾರ ಸಂಘಟನೆಗಳಿಂದ ಕಾಂಗ್ರೆಸ್‌ ಅಂತರ ಕಾಯ್ದುಕೊಂಡಿರುವಾಗ ತಮ್ಮ ಶಾಸಕರು ವಿಹಿಂಪ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಕಾರ್ಯಕರ್ತರಿಗೆ ಬೇಸರ ತರಿಸಿದೆ ಎಂದು ಹೇಳಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯ ಬಳಿಕದ ಬೆಳವಣಿಗೆಯಿಂದ ಸಂಘದ ತತ್ವ ಸಿದ್ಧಾಂತದಡಿಯಲ್ಲಿ ಕೆಲಸ ಮಾಡುವ ಕೆಲವು ಕಾರ್ಯಕರ್ತರು ನೋವನುಭವಿಸಿದ್ದರು. ಸಂಘ, ಸಂಘಟನೆಯ ಹಿರಿಯರ ಮೇಲಿನ ಟೀಕೆಗಳಿಂದ ಅವರು ನೊಂದಿದ್ದು, ಇದು ಈ ಘಟನೆಗೆ ಕಾರಣವಿರಬಹುದು. ಈ ಎಲ್ಲ ಗೊಂದಲಗಳನ್ನು ಬಗೆಹರಿಸಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಕಾರ್ಯ ಹಿರಿಯರ ನೇತೃತ್ವದಲ್ಲಿ ನಡೆಯಲಿದೆ.
– ಮುರಳಿಕೃಷ್ಣ ಹಸಂತಡ್ಕ ,ಹಿಂದೂ ಸಂಘಟನೆ ಮುಖಂಡ

ವಿಶ್ವ ಹಿಂದೂ ಪರಿಷದ್‌ನ ಪ್ರಾಂತೀಯ ಉಪಾಧ್ಯಕ್ಷನಾಗಿರುವ ಯು. ಪೂವಪ್ಪ ಅವರ ಆಹ್ವಾನದಂತೆ ನಾನು ಕಾರ್ಯಕ್ರಮಕ್ಕೆ ಹೋಗಿದ್ದೆ. ನಾನು ಹಿಂದೂ ಧರ್ಮದ ಕಾರ್ಯಕರ್ತನಾಗಿ ಹೋಗಿದ್ದೇನೆ. ಅಲ್ಲಿ ಘಟನೆ ಯಾವ ರೀತಿ ಆಗಿದೆ ಅನ್ನುವ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದು ಹಿಂದೂ ಸಮಾಜಕ್ಕೆ ನೋವನ್ನು ತಂದಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ಆಗದಂತೆ ವಿಹಿಂಪ, ಬಜರಂಗದಳ ನೋಡಿಕೊಳ್ಳಬೇಕು.
– ಅರುಣ್‌ ಕುಮಾರ್‌ ಪುತ್ತಿಲ. ಹಿಂದೂ ಸಂಘಟನೆ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next