ನರಗುಂದ: ಸಂಘಟನೆಯಲ್ಲಿ ಶಕ್ತಿಯಿದೆ. ಋಷಿ ಮುನಿಗಳು ಸಂಚರಿಸಿದ ಈ ನಾಡು, ದೇಶ ಮತ್ತು ದೇಶದ ಜನರ ಧರ್ಮ, ಸಂಸ್ಕೃತಿ ರಕ್ಷಣೆಗೆ ವಿಶ್ವ ಹಿಂದೂ
ಪರಿಷತ್ ಮತ್ತು ಭಜರಂಗದಳ ಶ್ರಮಿಸುತ್ತಿವೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಂಘಟನಾ ಮಂತ್ರಿ ಮನೋಹರ ಮಠದ ಹೇಳಿದರು.
ಪಟ್ಟಣದ ಗಾಂಧಿ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಆಶ್ರಯದಲ್ಲಿ ಶೌರ್ಯ ಸಂಚಲನ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯಕ್ಕಾಗಿ ಮತ್ತು ಅನ್ನದಾತರ ಹೋರಾಟಕ್ಕೆ ಪ್ರೇರಣೆ ನೀಡಿದ ಈ ಬಂಡಾಯ ಭೂಮಿಯಲ್ಲಿ ಗೀತಾ ಜಯಂತಿ ದಿನದಂದು ಶೌರ್ಯ ಯಾತ್ರೆ ಹಮ್ಮಿಕೊಂಡಿದ್ದು ಸಂತಸದ ವಿಷಯ. ದೇಶವನ್ನು ಒಡೆಯುವ, ಸಮಾಜವನ್ನು ಒಡೆಯುವ ಕೆಟ್ಟ ಶಕ್ತಿಯನ್ನು ಮಟ್ಟ ಹಾಕಲು ಈ ಸಂಘಟನೆ ಹುಟ್ಟಿಕೊಂಡಿದೆ. ಜಾತಿ, ಬೇಧ ಮಾಡದೆ ಹಿಂದೂ ಧರ್ಮ ಮತ್ತು ಹೆಣ್ಣು ಮಕ್ಕಳ ರಕ್ಷಣೆಗೆ ಶ್ರಮಿಸುತ್ತಿದೆ ಎಂದರು.
ಸಾನಿಧ್ಯ ವಹಿಸಿದ್ದ ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ಒಂದು ಕಾಲದಲ್ಲಿ ಗೋವುಗಳನ್ನು ಸಾಕಿದವರು ಶ್ರೀಮಂತರು ಎಂದು ಗುರುತಿಸಲಾಗುತ್ತಿತ್ತು. ಆದರೆ ಈಗ ಗೋವು ಮಾಯವಾಗಿವೆ. ಗೋಹತ್ಯೆ ನಿಲ್ಲಬೇಕು. ಗೋವು ಸಾಕುವ ಮೂಲಕ ಸಾವಯವ ಕೃಷಿಗೆ ಒತ್ತು ನೀಡಬೇಕು ಎಂದರು.
ವಿರಕ್ತಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಸಮಾಜ, ಮನಸ್ಸು ಒಡೆಯುವುದನ್ನು ತಡೆಯಲು ಮತ್ತು ಜಾಗೃತಿ ಮೂಡಿಸುವ ಕೆಲಸವಾಗಬೇಕು. ದುಶ್ಚಟಗಳನ್ನು ತ್ಯಜಿಸಿ, ಉತ್ತಮ ಸಮಾಜ ನಿರ್ಮಿಸಲು ಮುಂದಾದರೆ ಅದು ಸಾರ್ಥಕವಾಗುತ್ತದೆ. ಯುವಕರಿಂದ ಸದೃಢ ಭಾರತ ನಿರ್ಮಾಣ ಸಾಧ್ಯ ಎಂದರು. ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ದುರ್ಗಣ, ವ್ಯಸನಗಳನ್ನು ತ್ಯಜಿಸಿ ಧರ್ಮದ ದಿಕ್ಸೂಚಿಯಲ್ಲಿ ನಡೆಯಬೇಕು. ಹನುಮಮಾಲೆ ಧರಿಸುವುದು ಸೇವೆ, ಶ್ರದ್ಧೆಯ ಪ್ರತೀಕವಾಗಿದೆ. ಆಚಾರ ವಿಚಾರ ಪಾಲಕರಾಗಿ ಎಂದರು. ಭಜರಂಗದಳದ ಬಸವರಾಜ ಗಡೇಕಾರ ಇದ್ದರು. ಶ್ರೀನಿವಾಸ ಗುಜಮಾಗಡಿ ಸ್ವಾಗತಿಸಿದರು. ಶಿವರಡ್ಡಿ ಪೆಟ್ಲೂರ ನಿರೂಪಿಸಿ, ವಿಕ್ರಮ್ ಬೆಳದಡಿ ವಂದಿಸಿದರು.