ಅಯೋಧ್ಯೆ: ರಾಮ ಮಂದಿರ ನಿರ್ಮಾಣಕ್ಕಾಗಿ ಹಿಂದೂ ಪರ ಸಂಘಟನೆಗಳು ಚಟುವಟಿಕೆಗಳನ್ನು ತೀವ್ರಗೊಳಿಸುತ್ತಿದ್ದು, ಭಾನುವಾರ ಅಯೋಧ್ಯೆಯಲ್ಲಿ ಬೃಹತ್ ಹೂಂಕಾರ್ ಸಮಾವೇಶವನ್ನು ಆಯೋಜಿಸುತ್ತಿವೆ. ಈ ಹಿನ್ನಲೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಅಯೊಧ್ಯೆಯಲ್ಲಿ ಸೆಕ್ಷನ್ 144 ಜಾರಿ ಮಾಡಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.
ದೇಶದ ವಿವಿಧೆಡೆಯಿಂದ ಸಾವಿರಾರು ಮಂದಿ ಆರ್‌ಎಸ್‌ಎಸ್,ವಿಎಚ್‌ಪಿ ಮತ್ತು ಶಿವಸೇನೆ ಕಾರ್ಯಕರ್ತರು ಅಯೋಧ್ಯೆಯಲ್ಲಿ ಜಮಾವಣೆಗೊಳ್ಳುತ್ತಿದ್ದಾರೆ. ನಗರದ ಎಲ್ಲೆಡೆ ಕೇಸರಿ ಧ್ವಜಗಳು, ಬ್ಯಾನರ್‌ಗಳು ರಾರಾಜಿಸುತ್ತಿವೆ. ಶಿವಸೇನೆ ಪ್ರಮುಖ ನಾಯಕ ಉದ್ಭವ್ ಠಾಕ್ರೆ ಅವರು ಅಯೋಧ್ಯೆಗೆ ಆಗಮಿಸಿದ್ದಾರೆ.
ನಾಳೆ ಅಯೋಧ್ಯೆಯಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಜನ ಜಮಾವಣೆಗೊಳ್ಳುವ ಸಾಧ್ಯತೆಗಳಿದ್ದು, ಸೂಪರ್ ಸಂಡೆ ಎಂದು ಪೊಲೀಸರು ಕರೆದಿದ್ದಾರೆ.
ನಾಳೆ ವಿಎಚ್‌ಪಿ ಮತ್ತು ಶಿವಸೇನೆ ಪ್ರತ್ಯೇಕವಾಗಿ ಸಮಾವೇಶಗಳನ್ನು ನಡೆಸುತ್ತಿದೆ. ಮಹಾರಾಷ್ಟ್ರದಿಂದ ವಿಶೇಷ ರೈಲಿನಲ್ಲಿ ಸುಮಾರು 25 ಸಾವಿರ ಶಿವಸೇನಾ ಕಾರ್ಯಕರ್ತರು ಅಯೋಧ್ಯೆಯತ್ತ ಆಗಮಿಸುತ್ತಿದ್ದಾರೆ.
ಸೇನೆ ನಿಯೋಜನೆಗೆ ಮನವಿ
ಯುಪಿಯ ಮಾಜಿ ಸಿಎಂ ಅಖೀಲೇಶ್ ಯಾದವ್ ಅವರು ಅಯೋಧ್ಯೆಯಲ್ಲಿ ಆತಂಕಕಾರಿ ಸ್ಥಿತಿ ನಿರ್ಮಾಣವಾಗಿದ್ದು ಸೇನೆಯನ್ನು ನಿಯೋಜಿಸಬೇಕು ಎಂದು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.