ಮಂಗಳೂರು/ಚಿಕ್ಕಮಗಳೂರು: ಕಾಫಿ ಡೇ ಸಂಸ್ಥಾಪಕ, ಮಾಜಿ ಕೇಂದ್ರ ಸಚಿವ ಎಸ್ ಎಂ ಕೃಷ್ಣ ಅಳಿಯ ವಿಜಿ ಸಿದ್ದಾರ್ಥ ಮೃತದೇಹ ಬುಧವಾರ ಬೆಳಗ್ಗೆ ಮಂಗಳೂರಿನ ಹೊಯ್ಗೆ ಬಜಾರ್ ತೀರದಲ್ಲಿ ಪತ್ತೆಯಾಗಿತ್ತು. ಸಿದ್ದಾರ್ಥ ಹುಟ್ಟೂರು ಚಿಕ್ಕಮಗಳೂರಿನಲ್ಲಿಯೇ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ವರದಿ ತಿಳಿಸಿದೆ.
ಸಂಜೆ 6.30ರ ನಂತರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಿದ್ದಾರ್ಥ ಅವರ ಹುಟ್ಟೂರಾದ ಚಿಕ್ಕಮಗಳೂರಿನ ಕಾಫಿ ಎಸ್ಟೇಟ್ ನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಸದಾಶಿವನಗರದಿಂದ ಎಸ್ ಎಂ ಕೃಷ್ಣ, ಪತ್ನಿ ಪ್ರೇಮಾ, ಮಗಳು ಮಾಳವಿಕಾ ಸೇರಿದಂತೆ ಸಿದ್ದಾರ್ಥ ಕುಟುಂಬಸ್ಥರು ಚಿಕ್ಕಮಗಳೂರು ತಲುಪಿದ್ದಾರೆ.
ಸೋಮವಾರ ಸಂಜೆಯಿಂದ ಮಂಗಳೂರು-ಉಳ್ಳಾಲ ಸಮೀಪದ ನೇತ್ರಾವತಿ ನದಿ ಪ್ರದೇಶದ ಬಳಿ ಎಜಿ ಸಿದ್ದಾರ್ಥ ನಾಪತ್ತೆಯಾಗಿರುವುದಾಗಿ ಸಿದ್ದಾರ್ಥ ಕಾರು ಚಾಲಕ ಹೇಳಿಕೆ ನೀಡಿದ್ದರು. ಬಳಿಕ ಅಗ್ನಿಶಾಮಕ ದಳ, ಎನ್ ಡಿಆರ್ ಎಫ್, ಹೋವರ್ ಕ್ರಾಫ್ಟ್, ಮುಳುಗು ತಜ್ಞರು ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದರು.
ಮಂಗಳವಾರ ತಡರಾತ್ರಿವರೆಗೂ ಶೋಧ ಕಾರ್ಯಾಚರಣೆ ನಡೆದಿತ್ತಾದರೂ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲವಾಗಿತ್ತು. ಬುಧವಾರ ಬೆಳಗ್ಗೆ ಮಂಗಳೂರಿನ ಹೊಯ್ಗೆ ಬಜಾರ್ ತೀರದ ಬಳಿ ಮೀನುಗಾರರಿಗೆ ಶವ ಸಿಕ್ಕಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಮೂಲಕ ಸಿದ್ದಾರ್ಥ ಪ್ರಕರಣದ ಊಹಾಪೋಹಕ್ಕೆ ತೆರೆ ಬಿದ್ದಿದಂತಾಗಿದೆ.
ಚಿಕ್ಕಮಗಳೂರು ತಲುಪಿದ ಸಿದ್ದಾರ್ಥ ಮೃತದೇಹ, ಅಂತಿಮ ದರ್ಶನ
ಮಂಗಳೂರಿನಿಂದ ಆ್ಯಂಬುಲೆನ್ಸ್ ನಲ್ಲಿ ಸಿದ್ದಾರ್ಥ ಮೃತದೇಹ ಚಿಕ್ಕಮಗಳೂರು ತಲುಪಿದ್ದು, ಗಣ್ಯಾತೀಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಸಿದ್ದಾರ್ಥ ಪತ್ನಿ ಮಾಳವಿಕಾ, ಮಾವ ಎಸ್.ಎಂ.ಕೃಷ್ಣ, ಅತ್ತೆ ಪ್ರೇಮಾ, ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಹಾಗೂ ಕುಟುಂಬಸ್ಥರು ಸಿದ್ದಾರ್ಥ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.
ಕಾಫಿ ಡೇ ಮಾಲೀಕರಾದ ಹಾಗೂ ಉದ್ಯಮಿ ದಿ ವಿ.ಜಿ.ಸಿದ್ದಾರ್ಥ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಚಿಕ್ಕಮಗಳೂರಿನ ಚಿಕ್ಕಮಗಳೂರು – ಕಡೂರು ರಸ್ತೆಯಲ್ಲಿರುವ ಅವರ ಎಬಿಸಿ ಕಚೇರಿಯ ಅವರಣದಲ್ಲಿ ಮಧ್ಯಾಹ್ನ 2 ಗಂಟೆಯಿಂದ 4.30 ರವರಗೆ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿದೆ. ನಂತರ ದಿವಂಗತ ಅಂತ್ಯ ಸಂಸ್ಕಾರವನ್ನು ಅವರ ಸ್ವಗ್ರಾಮ ಬೇಲೂರು ತಾಲ್ಲೂಕಿನ ಚೇತನಹಳ್ಳಿಯಲ್ಲಿ ನೆರೆವೇರಿಸಲಾಗುತ್ತದೆ ಎಂದು ಎಸ್ ಎಂ ಕೃಷ್ಣ ಮತ್ತು ವಿಜಿ ಸಿದ್ದಾರ್ಥ ಕುಟುಂಬ ಪ್ರಕಟಣೆಯಲ್ಲಿ ತಿಳಿಸಿತ್ತು.