Advertisement

ಚಿತ್ರರಂಗದ ಹಿರಿಯ ಕಲಾವಿದೆ ಬಿ.ವಿ.ರಾಧಾ ವಿಧಿವಶ

06:00 AM Sep 11, 2017 | |

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಬಿ.ವಿ.ರಾಧಾ (70) ಭಾನುವಾರ ಬೆಳಗ್ಗೆ ನಿಧನರಾದರು.
ಕೆಲ ವರ್ಷಗಳ ಹಿಂದೆ ಕ್ಯಾನ್ಸರ್‌ಗೆ ತುತ್ತಾಗಿದ್ದ ಅವರು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಆದರೆ, ಶನಿವಾರ ಬೆಳಗ್ಗೆ ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. 

Advertisement

ಭಾನುವಾರ ಮುಂಜಾನೆ ಹೃದಯಾಘಾತದಿಂದ ಕಲ್ಯಾಣನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪುತ್ರಿ ಧನಲಕ್ಷ್ಮೀ¾ ಹಾಗೂ ಅಪಾರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಹೊರಮಾವುನಲ್ಲಿರುವ ಅವರ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಸಾವಿನಲ್ಲೂ ಸಾರ್ಥಕತೆ
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಕೆಎಸ್‌ಎಲ್‌ ಸ್ವಾಮಿ ಅವರನ್ನು ಪ್ರೇಮಿಸಿ ವಿವಾಹವಾಗಿದ್ದ ರಾಧಾರವರು ತಮ್ಮ ವೃತ್ತಿ ಮತ್ತು ಖಾಸಗಿ ಜೀವನದುದ್ದಕ್ಕೂ ರವಿಯವರ ಆದರ್ಶಗಳನ್ನು ಪಾಲಿಸಿಕೊಂಡು ಬಂದವರು. ಅದರಂತೆ ಪತಿ ಕೆಎಸ್‌ಎಲ್‌ ಸ್ವಾಮಿಯರು ದೇಹದಾನ ಮಾಡಿದ್ದ ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ರಾಧಾರವರ ದೇಹವನ್ನು ಅವರ ಇಚ್ಛೆಯಂತೆ ದಾನ ಮಾಡಲು ಕುಟುಂಬದವರು ನಿರ್ಧರಿಸಿದ್ದಾರೆ.

250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ
ನಟವೃಂದ ನಾಟಕ ತಂಡದಲ್ಲಿ ಸಕ್ರಿಯ ಕಲಾವಿದೆಯಾಗಿ ರೂಪುಗೊಂಡಿದ್ದ ಬಿ.ವಿ.ರಾಧಾ, ಡಾ.ರಾಜ್‌ಕುಮಾರ್‌ ಅವರ “ನವಕೋಟಿ ನಾರಾಯಣ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. “ಆರು ಮೂರು ಒಂಭತ್ತು’, “ದೇವರು ಕೊಟ್ಟ ತಂಗಿ’, “ಮಿಥಿಲೆಯ ಸೀತೆಯರು’, ಯಾವ ಜನ್ಮದ ಮೈತ್ರಿ’ ಹಾಗೂ “ಬಲೇ ಅದೃಷ್ಟವೋ ಅದೃಷ್ಟ’ ಚಿತ್ರಗಳಲ್ಲಿ ಎರಡನೇ ನಾಯಕಿಯಾಗಿ ಅಭಿನಯಿಸಿದ್ದ ರಾಧಾ, ಸುಮಾರು 250 ಕನ್ನಡ ಚಿತ್ರಗಳು ಸೇರಿ ತೆಲುಗು, ಮಲಯಾಳಿ, ತುಳು ಹಾಗು ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದ್ದರು. ಸಿನಿಮಾ ಜತೆಗೆ ಬಿ.ವಿ.ರಾಧಾ “ಕುಂಕುಮ ಭಾಗ್ಯ’ ಹಾಗೂ “ಚಿ.ಸೌ.ಸಾವಿತ್ರಿ’, “ಪುನರ್‌ ವಿವಾಹ’ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ನಟನೆ ಜತೆಗೆ “ಹರಕೆಯ ಕುರಿ’ ಹಾಗೂ “ಜಂಬೂ ಸವಾರಿ’ ಎಂಬ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.

ಆ ಕಾಲದಲ್ಲೇ ಡಾ.ರಾಜ…ಕುಮಾರ್‌, ಎಂ.ಜಿ ರಾಮಚಂದ್ರನ್‌, ಶಿವಾಜಿ ಗಣೇಶನ್‌, ಎನ್‌.ಟಿ.ರಾಮರಾವ್‌, ಜೆಮಿನಿ ಗಣೇಶನ್‌, ಅಕ್ಕಿನೇನಿ ನಾಗೇಶ್ವರ್‌ ರಾವ್‌ ಸೇರಿ ಹಲವು ನಟರ ಜತೆ ನಟಿಸಿ ಸೈ ಎನಿಸಿಕೊಂಡಿದ್ದರು.

Advertisement

ಕೈ-ಕಾಲು ಗಟ್ಟಿ ಇದೆ ಕೆಲಸ ಕೊಡಿ!
“ನಮಗೂ ಕೈ ಕಾಲು ಗಟ್ಟಿಯಾಗಿವೆ. ಮುಖ ಕೂಡ ಚೆನ್ನಾಗಿದೆ. ಚೆನ್ನಾಗಿಯೇ ಪಾರ್ಟ್‌ ಮಾಡ್ತೀವಿ. ದಯತೋರಿ ಪಾರ್ಟ್‌ ಮಾಡೋಕೆ ಅವಕಾಶ ಕೊಡಿ….’
– ಹೀಗೆ ಕೆಲವು ತಿಂಗಳ ಹಿಂದೆ ನೋವು ತುಂಬಿದ ಮಾತುಗಳಲ್ಲೇ ಹೇಳಿಕೊಂಡಿದ್ದರು ಹಿರಿಯ ಕಲಾವಿದೆ ಬಿ.ವಿ.ರಾಧಾ. “ಜಿಂದಾ’ ಚಿತ್ರದಲ್ಲಿ ನಟಿಸುತ್ತಿದ್ದ ವೇಳೆ ತಮ್ಮ ಸಹ ಕಲಾವಿದರಾದ ಆಶಾಲತಾ ಮತ್ತು ಪುಷ್ಪ ಅವರ ಜತೆ ಪತ್ರಕರ್ತರ ಮುಂದೆ ಬಂದ ರಾಧಾರವರು “ಕೈ ಕಾಲು ಗಟ್ಟಿ ಇದೆ’ ನಮಗೂ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿ’ ಎಂದಿದ್ದರು.

“ನಾನು ಕನ್ನಡ ಚಿತ್ರರಂಗಕ್ಕೆ ಬಂದು 50 ವರ್ಷಗಳಾಗಿವೆ. ಸಿನಿಮಾದವರಿಗೆ ಬೇರೆ ಕೆಲಸ ಗೊತ್ತಿಲ್ಲ. ನಮಗೂ ಕೈ ಕಾಲು, ಮುಖ ಎಲ್ಲವೂ ಚೆನ್ನಾಗಿದೆ. ನಮಗಿನ್ನೂ ನಟಿಸೋ ತಾಕತ್ತು ಇದೆ. ನಿರ್ಮಾಪಕ, ನಿರ್ದೇಶಕರು ದಯತೋರಿ ಪಾರ್ಟ್‌ ಕೊಡಿ. ನಾವು ಕೊಟ್ಟ ಕೆಲಸಕ್ಕೆ ಮೋಸ ಮಾಡಲ್ಲ. ಎಲ್ಲರಿಗಿಂತ ಚೆನ್ನಾಗಿಯೇ ನಟನೆ ಮಾಡ್ತೀವಿ. ಪಾತ್ರ ಸಣ್ಣದೋ, ದೊಡ್ಡದೋ ಆ ಬಗ್ಗೆ ಕೇಳ್ಳೋದಿಲ್ಲ. ಹಣದ ವಿಷಯ ಕೂಡ ಮುಖ್ಯ ಆಗಲ್ಲ. ಆದರೆ, ನಮ್ಮಂತಹ ಹಿರಿಯ ಕಲಾವಿದರನ್ನು ಗುರುತಿಸಿ ಕೆಲಸ ಕೊಡಿ. ಹಳಬರಿಗೆ ಹಣಕ್ಕಿಂತ ಕೆಲಸ ಮುಖ್ಯ ಈಗಲೂ ನಾವು ಗಟ್ಟಿಮುಟ್ಟಾಗಿದ್ದೇವೆ. ಹೊಸಬರಿರಲಿ, ಹಳಬರೇ ಇರಲಿ, ನಮ್ಮಂತಹ ಕಲಾವಿದರನ್ನು ಗುರುತಿಸಿ’ ಎಂದು ರಾಧಾ ಅವರು ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next