Advertisement

Vasant Nadiger: ಹಿರಿಯ ಪತ್ರಕರ್ತ ವಸಂತ ನಾಡಿಗೇರ ನಿಧನ

10:28 AM Sep 09, 2024 | Team Udayavani |

ಬೆಂಗಳೂರು: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಂಪಾದಕ ವಸಂತ ನಾಡಿಗೇರ ಅವರು ಸೋಮವಾರ (ಸೆ.09) ಮುಂಜಾನೆ ನಿಧನ ಹೊಂದಿದ್ದಾರೆ.

Advertisement

ಸುಮಾರು ಮೂರು ದಶಕಕ್ಕೂ ಹೆಚ್ಚಿನ ಕಾಲ ಕನ್ನಡ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ್ದ ವಸಂತ ನಾಡಿಗೇರ ಅವರು ಬೆಂಗಳೂರಿನಲ್ಲಿ ಸೋಮವಾರ ಮುಂಜಾನೆ 3.15ರ ಸುಮಾರಿಗೆ ಹೃದಯಾಘಾತದಿಂದ ವಿಧಿವಶರಾದರು.

ಹಾವೇರಿ ಜಿಲ್ಲೆ ರಾಣೆಬೆನ್ನೂರಿನವರಾದ ವಸಂತ ನಾಡಿಗೇರ ಅವರು ರಸಾಯನ ಶಾಸ್ತ್ರದಲ್ಲಿ ಪದವಿ ಪಡೆದರಾದರೂ ಪತ್ರಿಕೋದ್ಯಮ ಸೆಳೆದಿತ್ತು. ಸಂಯುಕ್ತ ಕರ್ನಾಟಕದಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. ಅವರು ಪತ್ನಿ, ಪುತ್ರ, ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ವಿಭಿನ್ನ ಹೆಡ್‌ ಲೈನ್‌ ಗಳ ಮೂಲಕ ಗಮನ ಸೆಳೆದಿದ್ದ ಅವರು ವಿಜಯ ಕರ್ನಾಟಕ, ವಿಶ್ವವಾಣಿ ದಿನಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು. ಕಳೆದ ಎರಡು ವರ್ಷಗಳಿಂದ ಸಂಯುಕ್ತ ಕರ್ನಾಟಕ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಸಿಎಂ ಸಂತಾಪ

Advertisement

ಪತ್ರಕರ್ತ ವಸಂತ ನಾಡಿಗೇರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು, ಹಿರಿಯ ಪತ್ರಕರ್ತರಾದ ವಸಂತ ನಾಡಿಗೇರ ಅವರ ನಿಧನ ವಾರ್ತೆ ನೋವುಂಟು ಮಾಡಿದೆ. ವಿಜಯ ಕರ್ನಾಟಕದಲ್ಲಿ ಹಿರಿಯ ಸಹಾಯಕ ಸಂಪಾದಕರಾಗಿ, ಸಂಯುಕ್ತ ಕರ್ನಾಟಕದಲ್ಲಿ ಸಂಪಾದಕರಾಗಿ, ಹೀಗೆ ಹಲವು ದಶಕಗಳಿಂದ ಪತ್ರಿಕಾರಂಗದಲ್ಲಿ ಸೇವೆಸಲ್ಲಿಸುತ್ತಿದ್ದ ವಸಂತ ನಾಡಿಗೇರ ಅವರ ಅಗಲಿಕೆಯಿಂದ ಪತ್ರಿಕಾರಂಗಕ್ಕೆ ಬಹುದೊಡ್ಡ ನಷ್ಟವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಅವರ ದುಃಖತಪ್ತ ಕುಟುಂಬ ವರ್ಗಕ್ಕೆ ಸಂತಾಪಗಳು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next