Advertisement

ಹಿರಿಯ ಪತ್ರಕರ್ತ ಕೆ. ಸತ್ಯನಾರಾಯಣ ನಿಧನ

09:54 PM Jan 08, 2023 | Team Udayavani |

ಬೆಂಗಳೂರು: ಹಿರಿಯ ಪತ್ರಕರ್ತ ಕೆ. ಸತ್ಯನಾರಾಯಣ ಅವರು ಜಯನಗರದ ಎಲ್‌ಐಸಿ ಕಾಲನಿಯಲ್ಲಿರುವ ತಮ್ಮ ನಿವಾಸದಲ್ಲಿ ರವಿವಾರ ನಿಧನ ಹೊಂದಿದರು.

Advertisement

“ತಾಯಿ ನುಡಿ’ ದಿನಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭಿಸಿದ್ದ ಅವರು, ಕನ್ನಡಪ್ರಭ ದಿನಪತ್ರಿಕೆ ಆರಂಭದ ವೇಳೆ ಸೇವೆ ಸಲ್ಲಿಸಿದ್ದರು. ಜತೆಗೆ ಹಲವು ವರ್ಷಗಳ ಕಾಲ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ಅಂತ್ಯಕ್ರಿಯೆ ರವಿವಾರ ಸಂಜೆ ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ ಪೊಲೀಸ್‌ ಗೌರವಗಳೊಂದಿಗೆ ನಡೆಯಿತು.

ಗಣ್ಯರ ಸಂತಾಪ
ಅವರ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದ್ದು, ಕೆ. ಸತ್ಯನಾರಾಯಣ ಅವರು ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆ ಅಪಾರ. ಇಳಿವಯಸ್ಸಿನಲ್ಲೂ ಅಂಕಣಗಳ ಮೂಲಕ ಸಮಕಾಲೀನ ರಾಜಕೀಯ, ವಾಣಿಜ್ಯ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಿದ್ದರು.

ಮೌಲ್ಯಾಧಾರಿತ ಪತ್ರಿಕೋದ್ಯಮದ ಸಂಕೇತವಾಗಿದ್ದ ಅವರಿಗೆ ಟಿಎಸ್‌ಆರ್‌ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳು ಸಂದಿವೆ. ಅವರ ಅಗಲಿಕೆ ಕನ್ನಡ ಪತ್ರಿಕೋದ್ಯಮಕ್ಕೆ ದೊಡ್ಡ ನಷ್ಟ. ಹಳೆ ತಲೆಮಾರಿನ ಪತ್ರಿಕೋದ್ಯಮದ ಕೊಂಡಿ ಕಳಚಿದಂತಾಗಿದೆ ಎಂದಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಸತ್ಯನಾರಾಯಣ ಪ್ರತಿಭೆ, ಬದ್ಧತೆ ಮತ್ತು ಕಸಬುಗಾರಿಕೆಗೆ ಹೆಸರಾಗಿದ್ದರು. ಅವರ ನಿಧನದಿಂದ ಬಹುಕಾಲದ ಆತ್ಮೀಯ ಸೇಹಿತನನ್ನು ಕಳೆದುಕೊಂಡಿದ್ದೇನೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಸಂತಾಪ ಸೂಚಿಸಿದ್ದಾರೆ.

Advertisement

ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು, ಸತ್ಯನಾರಾಯಣ ಅವರು ಸತ್ಯನಿಷ್ಠ ಪತ್ರಿಕೋದ್ಯಮದ ಅನನ್ಯ ಕೊಂಡಿಯಾಗಿದ್ದರು. ಅವರನ್ನು ಒಬ್ಬ ಓದುಗನಾಗಿ ಬಲ್ಲೆ. ಅವರ ರಾಜಕೀಯ ವಿಶ್ಲೇಷಣೆಗಳು ವಸ್ತುನಿಷ್ಠವಾಗಿದ್ದವು. ಹೊಸ ತಲೆಮಾರಿನ ಪತ್ರಕರ್ತರ ಪಾಲಿಕೆ ಅವರು ದಂತಕಥೆ. ಸ್ವತ್ಛವಾಗಿ ವೃತ್ತಿ ಜೀವನ ನಿಭಾಯಿಸಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಕೋರಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸಹಿತ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next