Advertisement

ಸಾಹಸಿ ವಿಜಯ: ಕಾಲಿಲ್ಲದವಳ ಕೈಹಿಡಿದ ಛಲ

07:30 AM Apr 25, 2018 | |

ಪೊಲಿಯೋದಿಂದಾಗಿ ಎರಡೂ ಕಾಲುಗಳನ್ನು ಕಳಕೊಂಡ ವಿಜಯಾ ಎಂಬ ಈ ಹೆಣ್ಣು ಮಗಳಿಗೆ ಎದ್ದು ನಿಲ್ಲುವ ತ್ರಾಣವೇ ಇಲ್ಲ. ಆದರೂ, ಆಕೆ ಸ್ವಾವಲಂಬನೆಯಿಂದ ಬದುಕನ್ನು ರೂಪಿಸಿಕೊಂಡು, ತಂದೆ- ತಾಯಿಗೆ ನೆರಳಾಗಿದ್ದಾಳೆ…

Advertisement

ಬೆಳೆದು ದೊಡ್ಡವರಾದ ಮೇಲೆ ಹೆತ್ತವರನ್ನು ಮರೆತೇಬಿಡುವ ಮಕ್ಕಳನ್ನು ನಾವು ನೋಡಿದ್ದೇವೆ. ಆದರೆ, ಇಲ್ಲೊಬ್ಬಳು ಹುಡುಗಿ ಸ್ವತಂತ್ರವಾಗಿ ನಿಲ್ಲಲಾಗದಿದ್ದರೂ ಹೆತ್ತವರಿಗೆ ಊರುಗೋಲಾಗಿ. ಕುಟುಂಬಕ್ಕೆ ಹೆಗಲಾಗಿದ್ದಾಳೆ.

  ಈ ಯುವತಿಯ ಹೆಸರು ವಿಜಯಾ ವಿರೂಪಾಕ್ಷಯ್ಯ ಮೈಲಾರಕಳ್ಳಿಮಠ. ಹಾವೇರಿ ತಾಲೂಕಿನ ಗುತ್ತಲ ಪಟ್ಟಣದ ನಿವಾಸಿ. ಪೊಲಿಯೋದಿಂದಾಗಿ ಎರಡೂ ಕಾಲುಗಳನ್ನು ಕಳಕೊಂಡ ಈಕೆಗೆ ಸ್ವತಃ ಎದ್ದು ನಿಲ್ಲಲು ತ್ರಾಣವೇ ಇಲ್ಲ. ಆದರೂ, ತಾನು ಸ್ವಾವಲಂಬಿಯಾಗಬೇಕು, ತಂದೆ- ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಛಲವಿದೆ. ಸದ್ಯಕ್ಕೆ ಮನೆ ಬಳಿಯೇ ಗೂಡಂಗಡಿ ಇಟ್ಟುಕೊಂಡು, ಅದರಿಂದ ಬರುವ ಚಿಕ್ಕ ಆದಾಯ ಹಾಗೂ ಸರ್ಕಾರದಿಂದ ಸಿಗುವ ಮಾಸಾಶನದಲ್ಲಿ ಕುಟುಂಬ ನಡೆಸುತ್ತಿದ್ದಾಳೆ.

  ವಿಜಯಾಗೆ ಮೂವರು ಸಹೋದರಿಯರಿದ್ದು, ಎಲ್ಲರಿಗೂ ಮದುವೆಯಾಗಿದೆ. ಒಬ್ಬ ಸಹೋದರ ಈಜಲು ಹೋಗಿ ತೀರಿಕೊಂಡಿದ್ದಾನೆ. ಅಂಗವೈಕಲ್ಯದಿಂದಾಗಿ ಮನೆಯಲ್ಲಿಯೇ ಇರುವಂತಾದ ವಿಜಯಾರ ಮೇಲೆ ಹೆತ್ತವರ ಜವಾಬ್ದಾರಿ ಇದೆ. ಈಕೆ ನಾಲ್ಕು ತಿಂಗಳಿದ್ದಾಗ ಪೋಲಿಯೋದಿಂದ ಎರಡೂ ಕಾಲುಗಳನ್ನು ಕಳಕೊಂಡರು. ದೊಡ್ಡ ದೊಡ್ಡ ವೈದ್ಯರಲ್ಲಿ ತೋರಿಸಿ, ಶಸ್ತ್ರಚಿಕಿತ್ಸೆ ಮಾಡಿಸಿದರೂ ಪ್ರಯೋಜನವಾಗಲಿಲ್ಲ.

  ನಡೆದಾಡಲು ಆಗದ ಕಾರಣ ಈಕೆ ಶಾಲೆಯ ಮೆಟ್ಟಿಲೇರಲೇ ಇಲ್ಲ. ಶಾಲೆಗೆ ಕರೆದೊಯ್ಯಲೂ ಯಾರೂ ಮುಂದೆ ಬರಲಿಲ್ಲ. ಕೇಂದ್ರ ಸರ್ಕಾರದ “ಸಾಕ್ಷರ ಭಾರತ ಯೋಜನೆ’ ಈಕೆಯ ಬದುಕಿಗೆ ಬೆಳಕಾಯ್ತು. ವಿಜಯಾಳ ಪರಿಸ್ಥಿತಿ ಮತ್ತು ಓದುವ ಹಂಬಲವನ್ನು ಅರ್ಥಮಾಡಿಕೊಂಡ ಗ್ರಾಮದ ಸಾಕ್ಷರ ಪ್ರೇರಕಿ ರಾಜೇಶ್ವರಿ ರವಿ ಸಾರಂಗಮಠ ಅವರು ಪ್ರತಿನಿತ್ಯ ಈಕೆಯ ಮನೆಗೇ ಹೋಗಿ ಓದು-ಬರಹ ಕಲಿಸಿದರು.

Advertisement

ಆರು ತಿಂಗಳ ತರಬೇತಿಯ ನಂತರ, ಸಾಕ್ಷರ ಭಾರತದ ಜಿಲ್ಲಾಮಟ್ಟದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದರು. 2013ರಲ್ಲಿ ಸಾಕ್ಷರತಾ ಕಲಿಕೆಯಲ್ಲಿ ಉತ್ತಮ ಕಲಿಕಾರ್ಥಿಯಾಗಿ ರಾಜ್ಯ ಪ್ರಶಸ್ತಿ ಮತ್ತು 2014ರಲ್ಲಿ ರಾಜ್ಯದ ಪ್ರತಿನಿಧಿ ಯಾಗಿ ಆಗಿನ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿಯಿಂದ ಪುರಸ್ಕಾರ ಪಡೆದರು. ಪ್ರಸ್ತುತ, ಎಸ್ಸೆಸ್ಸೆಲ್ಸಿ ಪರೀಕ್ಷೆ ಕಟ್ಟಿ ಮೂರು ವಿಷಯದಲ್ಲಿ ಪಾಸಾಗಿರುವ ಈಕೆ, ಉಳಿದವುಗಳನ್ನು ಮರುಪರೀಕ್ಷೆಯಲ್ಲಿ ಪಾಸ್‌ ಮಾಡುವ ಗುರಿ ಹೊಂದಿದ್ದಾಳೆ. 
  ವಿಜಯಾ ಅವರಿಗೆ ಸಹಾಯಹಸ್ತ ನೀಡುವವರರು ವಿಜಯಾ (ಮೊ. 9060505355) ಅವರನ್ನು ಸಂಪರ್ಕಿಸಬಹುದು.

ಎಸ್ಸೆಸ್ಸೆಲ್ಸಿ ಪಾಸಾದರೆ ಸರ್ಕಾರದಿಂದ ಅಥವಾ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಸಿಗಬಹುದು. ಆಗ ಅಂಗಡಿಯ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಬಹುದು. ಈಗಿನ ದುಡಿಮೆಯಲ್ಲಿ ಹೊಟ್ಟೆಗಾದರೆ ಬಟ್ಟೆಗಿಲ್ಲ, ಬಟ್ಟೆಗಾದರೆ ಹೊಟ್ಟೆಗಿಲ್ಲ ಎಂಬಂಥ ಸ್ಥಿತಿಯಿದೆ. ಅಂಗವಿಕಲರಿಗೆ ಸರ್ಕಾರದಿಂದ ಅನೇಕ ಸೌಲಭ್ಯಗಳು ಸಿಗುತ್ತವೆ ಎನ್ನುತ್ತಾರೆ. ಆದರೆ, ಸೌಲಭ್ಯಗಳು ಸುಲಭವಾಗಿ ಸಿಗುವುದಿಲ್ಲ. ಎಲ್ಲದ್ದಕ್ಕೂ ವರ್ಷಗಟ್ಟಲೆ ಅಲೆದಾಡಬೇಕು. ಮೂರು ಚಕ್ರದ ಬೈಕ್‌ಗೆ ಅರ್ಜಿ ಹಾಕಿ ಎರಡು ವರ್ಷವಾದರೂ ಇನ್ನೂ ಸಿಕ್ಕಿಲ್ಲ. ನನಗೆ ವ್ಯಾಪಾರದಲ್ಲಿ ಆಸಕ್ತಿ ಇದ್ದು, ವ್ಯವಹಾರ ಹೆಚ್ಚಿಸಲು ಸಹಾಯ ಸಿಕ್ಕರೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತೇನೆ.
ವಿಜಯಾ ಮೈಲಾರಕಳ್ಳಿಮಠ

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next