ಬೆಳಗಾವಿ: ಕಣ್ಣು ಹಾಯಿಸಿದಲ್ಲೆಲ್ಲ ಹಚ್ಚ ಹಸಿರಿನ ತೋರಣ, ಮೈಗೆ ಚುಮು ಚುಮು ಚಳಿ ಒಡ್ಡುವ ತಂಪು ಗಾಳಿ, ಬಂಡೆಗಳ ಮೇಲಿಂದ ಹಾಲ್ನೊರೆಯಂತೆ ಹರಿಯುವ ಜಲಧಾರೆ, ಬೆರಗು ಮೂಡಿಸುವ ನಿಸರ್ಗ ತಾಣ, ಮಂಜು ಹನಿಗಳಿಂದ ಆವರಿಸಿದ ರಮಣೀಯ ನೋಟ ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ ಸಾವಂತವಾಡಿ ತಾಲೂಕಿನ ಚೌಕುಳ ಗ್ರಾಮದ ಬಳಿಯ ನಯನ ಮನೋಹರ “ಬಾಬಾ ಫಾಲ್ಸ್’ದಲ್ಲಿ ಕಂಡು ಬರುತ್ತದೆ. ಬಂಡೆಗಳ ಮೇಲಿಂದ ಹಾಲಿನಂತೆ ಭೋರ್ಗರೆಯುವ ಬಾಬಾ ಜಲಪಾತ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ.
Advertisement
ಬಾಬಾ ಫಾಲ್ಸ್ ಗಡಿಭಾಗ ಬೆಳಗಾವಿಯಿಂದ 86ಕಿ.ಮೀ. ದೂರದಲ್ಲಿದೆ. ಮಳೆಗಾಲ ಆರಂಭವಾದರೆ ಇಲ್ಲಿ ಜಲವೈಭವಸೃಷ್ಟಿಯಾಗುತ್ತದೆ. ಮೈದುಂಬಿ ಧುಮ್ಮಿಕ್ಕುತ್ತಿರುವ ಬಾಬಾ ಫಾಲ್ಸ್ ಅಥವಾ ಕುಂಬವಡೆ ಫಾಲ್ಸ್ ನೋಡಲು ಕರ್ನಾಟಕ-ಮಹಾರಾಷ್ಟ್ರದಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಈ ಫಾಲ್ಸ್ ಖಾಸಗಿ ಒಡೆತನದಲ್ಲಿದೆ.
ಬೆಳಗಾವಿಯಿಂದ 65ಕಿ.ಮೀ. ಸಾಗಿದರೆ ಸಾವಂತವಾಡಿಯ ಅಂಬೋಲಿ ಚೆಕ್‌ಪೋಸ್ಟ್ ಇದೆ. ಅಲ್ಲಿಯ ಜೆಆರ್‌ಡಿ ರೆಸಾರ್ಟ್ ಬಳಿಯಿಂದ ಎಡಕ್ಕೆ ತಿರುಗಿ 10 ಕಿ.ಮೀ ಸಾಗಿದರೆ ಚೌಕುಳ ಗ್ರಾಮವಿದ್ದು, ಈ ಮಾರ್ಗದಿಂದ ನೇರವಾಗಿ 8 ಕಿ.ಮೀ. ಸಾಗಿದರೆ ಕುಂಬವಡೆ ಗ್ರಾಮದಲ್ಲಿರುವ ಬಾಬಾ ಫಾಲ್ಸ್ ಬರುತ್ತದೆ. ಮುಖ್ಯ ರಸ್ತೆಗೆ ಹೊಂದಿಕೊಂಡ ಈ ಫಾಲ್ಸ್‌ನ ಸಮೀಪದಲ್ಲೇ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳು ಹೋಗುತ್ತವೆ. ಇಲ್ಲಿಗೆ ಹೋಗಲು ಬಸ್ ವ್ಯವಸ್ಥೆ ಇಲ್ಲ, ತುಸು ದೂರದಲ್ಲಿ ಪಾರ್ಕಿಂಗ್ ಮಾಡಿ ಐದು ನಿಮಿಷ ಕಾಲ್ನಡಿಗೆಯಲ್ಲಿ ಹೋದರೆ ಜುಳು ಜುಳು ನಿನಾದದೊಂದಿಗೆ ರಮಣೀಯವಾಗಿ ಕಾಣುವ ಧುಮ್ಮಿಕ್ಕುವ ಜಲಪಾತದಲ್ಲಿ
ಮೈಮರೆಯಬಹುದು.
Related Articles
ಎತ್ತರದ ಹೀಗೆ ಅನೇಕ ಬಂಡೆಗಳ ಮೇಲಿಂದ ಧುಮ್ಮಿಕ್ಕುವ ಜಲಪಾತಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಈ ಜಲಪಾತಗಳ ಮನಮೋಹಕ ದೃಶ್ಯ ನೋಡಲು ಪ್ರವಾಸಿಗರು ಬರುತ್ತಿದ್ದಾರೆ.
Advertisement
“ಬಾಬಾ’ ಹೆಸರು ಬಂದಿದ್ದು ಹೇಗೆ?ಮಹಾರಾಷ್ಟ್ರ ವಿಧಾನಸಭೆ ಮಾಜಿ ಸ್ಪೀಕರ್, ಕೊಲ್ಲಾಪುರ ಜಿಲ್ಲೆಯ ಗಡಹಿಂಗ್ಲಜ್ ಮಾಜಿ ಶಾಸಕ ದಿ. ಬಾಬಾಸಾಹೇಬ ಕುಪ್ಪೇಕರ
ಅವರ ಖಾಸಗಿ ಒಡೆತನದ ಜಾಗ ಸಾವಂತವಾಡಿ ತಾಲೂಕಿನ ಕುಂವಡೆ ಗ್ರಾಮದಲ್ಲಿದೆ. ಸುಮಾರು 2-3 ಕಿ.ಮೀ. ಪ್ರದೇಶದಲ್ಲಿರುವ ಈ ಜಾಗದಲ್ಲಿ ನೀರು ಬೀಳುತ್ತಿತ್ತು. ಇದನ್ನು ನಯನಮನೋಹರವಾಗಿಸಲು ಇಲ್ಲಿ 10 ವರ್ಷಗಳ ಹಿಂದೆ ಬಂಡೆಗಳ ಮೇಲಿಂದ ನೀರು ಧುಮ್ಮಿಕ್ಕುವಂತೆ ಮಾಡಲಾಯಿತು. ಈ ಜಲಪಾತದ ಹಿಂದೆ ಬಂಡೆಗಲ್ಲಿನ ಗುಡ್ಡ ಕೊರೆದು ಅದರೊಳಗೆ ನಿಂತು ಹಾಲ್ನೊರೆಯಂತೆ ಹರಿಯುವ ಜಲಪಾತ ಅನುಭವಿಸುವಂತೆ ಮಾಡಲಾಯಿತು. ದಿ. ಬಾಬಾಸಾಹೇಬ ಅವರ ಹೆಸರನ್ನು ಈ ಫಾಲ್ಸ್‌ಗೆ ಬಾಬಾ ಅಂತ ಹೆಸರಿಡಲಾಯಿತು. ಸದ್ಯ ದಿ. ಬಾಬಾಸಾಹೇಬ ಕುಪ್ಪೇಕರ ಅವರ ಅಣ್ಣನ ಮಗ ಸಂಗ್ರಾಮ ಕುಪ್ಪೇಕರ ಇದನ್ನು ನೋಡಿಕೊಳ್ಳುತ್ತಾರೆ. ಈ ಫಾಲ್ಸ್ ನೋಡಲು ಪ್ರತಿಯೊಬ್ಬರಿಗೆ 60 ರೂ. ಶುಲ್ಕವಿದೆ. ಬರದಿಂದ ಸೊರಗಿದ್ದ ಜಲಪಾತಗಳಿಗೆ ಜೀವಕಳೆ
ಕಳೆದ ವರ್ಷ ಭೀಕರ ಬರಗಾಲದಿಂದ ಜಲಪಾತಗಳಿಗೆ ಬರ ಬಿದ್ದಿತ್ತು. ನೀರಿಲ್ಲದೇ ಸೊರಗಿದ್ದವು. ಜೀವ ಕಳೆದುಕೊಂಡಿದ್ದ ಫಾಲ್ಸ್‌ಗಳಿಗೆ ಈಗ ಜೀವಕಳೆ ಬಂದಿದೆ. ಈ ಬಾರಿ ಪಶ್ಚಿಮ ಘಟ್ಟದ ಎಲ್ಲ ಜಲಪಾತಗಳು ಭೋರ್ಗರೆಯುತ್ತಿವೆ. ಪ್ರಕೃತಿಯ ಮಡಿಲಲ್ಲಿ ಸುಂದರವಾಗಿ ಹರಿಯುತ್ತಿವೆ. ಬಿಸಿಲಿನ ಬೇಗೆಗೆ ಬೆಂದಿದ್ದ ಪ್ರವಾಸಿಗರು ಈಗ ಫಾಲ್ಸ್‌ಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸ ಮಾಡುತ್ತಿದ್ದಾರೆ.
ಅಂಬೋಲಿ ಫಾಲ್ಸ್‌ಕ್ಕಿಂತಲೂ ಬಾಬಾ ಫಾಲ್ಸ್ ಕಡೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಬಾಬಾ ಫಾಲ್ಸ್‌ದಿಂದ ಅಂಬೋಲಿ ಅತಿ ಸಮೀಪವಿದೆ. ಅಂಬೋಲಿ ಫಾಲ್ಸ್ ಹೆದ್ದಾರಿ ಪಕ್ಕದಲ್ಲೇ ಇರುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಜನಜಂಗುಳಿ ಹೆಚ್ಚಾದರೆ ಇಲ್ಲಿ ಎಂಜಾಯ್ ಮಾಡಲು ಆಗುವುದೇ ಇಲ್ಲ. ಈ ಫಾಲ್ಸ್ ಸುತ್ತಲೂ ಮಹಾರಾಷ್ಟ್ರ ಅರಣ್ಯ ಇಲಾಖೆಯವರು ಹೆಚ್ಚಿನ ನಿರ್ಬಂಧ ಹೇರಿದ್ದಾರೆ. ವೀಕೆಂಡ್‌ನಲ್ಲಿ ಅಂತೂ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳ ಪ್ರವಾಸಿಗರು ಅಂಬೋಲಿಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಾರೆ. ಹೀಗಾಗಿ ಜನರ ಚಿತ್ತ ಬಾಬಾ ಫಾಲ್ಸ್ ಕಡೆಗೆ ನೆಟ್ಟಿದೆ.
*ಬೆಳಗಾವಿಯಿಂದ ಅಂಬೋಲಿ 65 ಕಿ.ಮೀ.
* ಅಂಬೋಲಿ ಚೆಕ್‌ಪೋಸ್ಟ್‌ದಿಂದ ಬಾಬಾ ಫಾಲ್ಸ್ 20 ಕಿ.ಮೀ.
* ಅಂಬೋಲಿ ಚೆಕ್‌ಪೋಸ್ಟ್‌ದಿಂದ ಜೆಆರ್‌ಡಿ ರೆಸಾರ್ಟ್ ಮೂಲಕ ಎಡಕ್ಕೆ ತಿರುಗುವುದು
*ಬಾಬಾ ಫಾಲ್ಸ್ ಬಳಿ ಪಾರ್ಕಿಂಗ್ ವ್ಯವಸ್ಥೆ
*ಫಾಲ್ಸ್ ಬಳಿ ಒಂದು ರೆಸಾರ್ಟ್ ಇದ್ದು, ಆರ್ಡರ್ ಊಟ ಸಿಗುತ್ತದೆ
*ಚಿಕ್ಕ ಪುಟ್ಟ ಗೂಡಂಗಡಿಗಳಲ್ಲಿ ಬಿಸಿ ಬಿಸಿ ಚಹಾ, ಭಜಿ, ವಡಾ ಪಾವ್ ಸಿಗುತ್ತದೆ. ಜಲಧಾರೆಗೆ ಮೈವೊಡ್ಡುವ ಪ್ರವಾಸಿಗರು
ಪಶ್ಚಿಮ ಘಟ್ಟ ಪ್ರದೇಶದಲ್ಲಿರುವ ಬಾಬಾ ಫಾಲ್ಸ್‌ನಿಂದ ಧುಮ್ಮಿಕ್ಕುವ ಜಲಧಾರೆಯ ಕೆಳಗೆ ಪ್ರವಾಸಿಗರು ಮೈವೊಡ್ಡಿ ತಮ್ಮನ್ನೇ ತಾವು ಮರೆತು ಎಂಜಾಯ್ ಮಾಡುತ್ತಾರೆ. ಮೈ ಚಳಿ ಬಿಟ್ಟು ಕುಣಿದು ಕುಪ್ಪಳಿಸುತ್ತಿದ್ದಾರೆ. ನಿಸರ್ಗ ರಮಣೀಯ ತಾಣದಲ್ಲಿ ನಿಂತು ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಮೈಮರೆಯುತ್ತಿದ್ದಾರೆ. ಕರ್ನಾಟಕದ ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಗದಗ ಸೇರಿದಂತೆ ವಿವಿಧ ಭಾಗಗಳಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ಶನಿವಾರ, ರವಿವಾರ ಇಲ್ಲಿ ಬರುವವರ ಸಂಖ್ಯೆ ಹೆಚ್ಚು. ಮಹಾರಾಷ್ಟ್ರ, ಗೋವಾದಿಂದಲೂ ಪ್ರವಾಸಿಗರು ಬರುವುದು ಸಾಮಾನ್ಯವಾಗಿದೆ. *ಭೈರೋಬಾ ಕಾಂಬಳೆ