Advertisement
ಅಮೆರಿಕ ಮತ್ತು ಚೀನಾ ಮಧ್ಯೆ ಕಳೆದ ವರ್ಷದಿಂದ ಶುರುವಾದ ವ್ಯಾಪಾರ ಯುದ್ಧ ಒಂದೊಂದೇ ಕ್ಷೇತ್ರವನ್ನು ಬಾಧಿಸಲು ಶುರು ವಾಗಿದೆ. ಈವರೆಗೆ ಇದು ಕೇವಲ ಸಾಮಗ್ರಿಗಳ ಆಮದು ರಫ್ತು ವಿಚಾರವಾಗಿಯಷ್ಟೇ ಇದ್ದ ಸಂಗತಿ, ಈಗ ಇನ್ನಷ್ಟು ವ್ಯಾಪಿಸಿದೆ. ಇದರ ಒಂದು ಹಂತದಲ್ಲಿ ಚೀನಾದ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಿಕೆ ಕಂಪನಿ ಹುವಾವೆ ವಿರುದ್ಧ ಹಲವು ನಿರ್ಬಂಧಗಳನ್ನು ಅಮೆರಿಕ ವಿಧಿಸಿದೆ. ಅಮೆರಿಕ ಮೂಲದ ಯಾವುದೇ ಕಂಪನಿಗಳೂ ಹುವಾವೆ ಜೊತೆಗೆ ವಹಿವಾಟು ನಡೆಸುವಂತಿಲ್ಲ ಎಂದು ಡೊನಾಲ್ಡ್ ಟ್ರಂಪ್ ಸರ್ಕಾರ ಆದೇಶಿಸಿದೆ. ವಿಶ್ವದ ವಿವಿಧೆಡೆಗೆ ಮಾರಾಟ ಹೊಂದಿದ್ದ ಹುವಾವೆಗೆ ಭಾರಿ ಆಘಾತ ಉಂಟಾಗಿದೆ.
Related Articles
Advertisement
ಅಮೆರಿಕ ಮತ್ತು ಹುವಾವೆ ಮಧ್ಯೆ ಶುರುವಾದ ತಿಕ್ಕಾಟ ನಿನ್ನೆ ಮೊನ್ನೆಯದಲ್ಲ. ಇದು ಸುಮಾರು ಏಳು ವರ್ಷದ್ದು. ಹುವಾವೆ ಸ್ಮಾರ್ಟ್‌ಫೋನ್ ಕಂಪನಿಯಷ್ಟೇ ಅಲ್ಲ. ಇದು ಜಗತ್ತಿಗೆ ಸ್ಮಾರ್ಟ್ ಫೋನ್ ಹಾಗೂ ಇತರ ಟೆಲಿಕಾಂ ಸಾಧನಗಳನ್ನೂ ವಿಶ್ವಾದ್ಯಂತ ಉತ್ಪಾದಿಸುವ ಅತಿದೊಡ್ಡ ಕಂಪನಿ. ಸುಮಾರು 2012ರ ವೇಳೆಗೆ ಇದೇ ರೀತಿ ಝೆಡ್‌ಟಿಇ ಕಂಪನಿಯ ಜೊತೆಗೆ ಅಮೆರಿಕ ಮುರಿದುಕೊಂಡು ಬಿದ್ದಿತ್ತು. ಇಂದು ಝೆಡ್‌ಟಿಇ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ.
ಹುವಾವೆಗೂ ಚೀನಾ ಕಮ್ಯುನಿಸ್ಟ್ ಪಾರ್ಟಿಗೂ ನೇರ ಸಂಪರ್ಕವಿದೆ ಎಂಬುದು ಅಮೆರಿಕದ ಆತಂಕ. ಕಮ್ಯುನಿಸ್ಟ್ ಪಾರ್ಟಿಯ ಮುಖಂಡರ ಜೊತೆ ಆಪ್ತನಾಗಿರುವ ಹಾಗೂ ಸೇನೆಯಲ್ಲಿ ಹಲವು ವರ್ಷ ಇಂಜಿನಿಯರ್ ಆಗಿ ಕೆಲಸ ಮಾಡಿದ್ದ ರೆನ್ ಝೆಂಗ್‌ಫೀ ಈ ಕಂಪನಿಯ ಸ್ಥಾಪಕರು. 1983ರಲ್ಲಿ ಚೀನಾ ಆರ್ಥಿಕತೆ ಹೊಸ ಮಗ್ಗುಲಿಗೆ ಹೊರಳಿಕೊಳ್ಳುತ್ತಿರುವಾಗ ಹುಟ್ಟಿಕೊಂಡ ಈ ಕಂಪನಿಯನ್ನು ಕೆಲವೇ ವರ್ಷಗಳಲ್ಲಿ ಚೀನಾ ಸರ್ಕಾರ ತಂತ್ರಜ್ಞಾನ ಸಲಕರಣೆಯ ಏಕಸ್ವಾಮ್ಯದ ಕಂಪನಿ ಎಂಬಂತೆ ಬಿಂಬಿಸಿತ್ತು. ಕಂಪನಿ ವರ್ಷದಿಂದ ವರ್ಷಕ್ಕೆ ಶೇ. 10 ರಷ್ಟು ದರದಲ್ಲಿ ಪ್ರಗತಿ ಸಾಧಿಸುತ್ತಿತ್ತು. 2000ನೇ ಇಸ್ವಿಯಲ್ಲಿ ಕಂಪನಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕಾಲಿಟ್ಟಾಗಲೇ ಸಮಸ್ಯೆ ಶುರುವಾಗಿತ್ತು.
ಈ ಸಮಯದಲ್ಲೇ ಹುವಾವೆಯ ವಿಶ್ವಾಸಾರ್ಹತೆಯ ಮೇಲೆ ದೊಡ್ಡದೊಂದು ಕಪ್ಪುಚುಕ್ಕೆ ಇಡುವಂಥ ಒಂದು ಘಟನೆ ನಡೆದಿತ್ತು. ಆಫ್ರಿಕಾ ದೇಶಗಳ ಒಕ್ಕೂಟಕ್ಕೆ ಇಥಿಯೋಪಿಯಾದ ರಾಜಧಾನಿ ಆ್ಯಡಿಸ್ ಅಬಾಬಾದಲ್ಲಿ ಒಂದು ಬೃಹತ್ ಕಟ್ಟಡವೊಂದನ್ನು ಕಟ್ಟಿಕೊಡಲು ಚೀನಾ ನಿರ್ಧರಿಸಿತ್ತು. 2006ರಲ್ಲಿ ಕೆಲಸ ಶುರುವಾಗಿ 2012ರಲ್ಲಿ ಕೆಲಸ ಮಗಿದು, ಕೇಂದ್ರದ ಉದ್ಘಾಟನೆಯೂ ಆಯಿತು. ಇದರಿಂದಾಗಿ ಆಫ್ರಿಕಾ ದೇಶಗಳಲ್ಲಿ ಚೀನಾ ಬಗ್ಗೆ ಭಾರಿ ಒಲವು ವ್ಯಕ್ತವಾಯಿತು. ಚೀನಾ ಮತ್ತು ಆಫ್ರಿಕಾ ದೇಶಗಳ ಮಧ್ಯೆ ಸಂಬಂಧ ಸುಧಾರಣೆಯಾಗಿ ವ್ಯಾಪಾರ ವಹಿವಾಟು ಹೆಚ್ಚಾಯಿತು. ಆದರೆ 2018ರಲ್ಲಿ ಲೆ ಮೊಂಡೆ ಎಂಬ ಪತ್ರಿಕೆ ಒಂದು ಬಾಂಬ್ ಎಸೆದಿತ್ತು. ಈ ಕೇಂದ್ರದಲ್ಲಿನ ಎಲ್ಲ ಮಾಹಿತಿಯೂ ಶಾಂಘೈಗೆ ರವಾನೆ ಆಗುತ್ತಿವೆ. ಇದರ ಸರ್ವರ್‌ಗಳು ಶಾಂಘೈಗೆ ಡೇಟಾ ರವಾನಿಸುತ್ತಿದ್ದು, ಪ್ರಮುಖ ಮೀಟಿಂಗ್ ರೂಮ್‌ಗಳಲ್ಲಿ ಕ್ಯಾಮೆರಾ ಹಾಗೂ ಮೈಕ್ರೋಫೋನ್‌ಗಳನ್ನು ಅಳವಡಿಸಿ ಅದರ ರೆಕಾರ್ಡಿಂಗ್‌ಗಳು ನೇರವಾಗಿ ಚೀನಾಗೆ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಲೆ ಮೊಂಡೆ ಬರೆದಿತ್ತು. ಕಚೇರಿ ಬಾಗಿಲು ಹಾಕಿದ ನಂತರ ಇಲ್ಲಿನ ಸರ್ವರ್‌ಗಳು ಭಾರಿ ಪ್ರಮಾಣದ ಡೇಟಾ ರವಾನಿಸುತ್ತಿವೆ. ಇದಕ್ಕೆ ತಂತ್ರಜ್ಞಾನ ಒದಗಿಸಿದ್ದೇ ಹುವಾವೆ ಕಂಪನಿ ಎಂಬ ವರದಿ ಭಾರಿ ಆಘಾತ ಸೃಷ್ಟಿಸಿತ್ತು. ಇದು ಹುವಾವೆ ಕಂಪನಿಯ ಬಗ್ಗೆ ಅಮೆರಿಕಕ್ಕೆ ಹುಟ್ಟಿದ ಅನುಮಾನ ಗಟ್ಟಿಯಾಗಲು ಕಾರಣವಾಯ್ತು.
ಇದರಾಚೆಗೆ ಹುವಾವೆಯ ಇತಿಹಾಸಕ್ಕೆ ಇನ್ನೊಂದು ಕರಾಳ ಮುಖವೂ ಇದೆ. ಸಿಲಿಕಾನ್ ಸಿಟಿಯಲ್ಲಿ ಕಳೆದ ಒಂದು ದಶಕದಲ್ಲಿ ಹಕ್ಕುಸ್ವಾಮ್ಯ ಇರುವ ತಂತ್ರಜ್ಞಾನಗಳನ್ನು ಕದ್ದೊಯ್ಯುವ ಒಂದು ಭಾರಿ ಜಾಲವನ್ನೇ ಚೀನಾ ಸೃಷ್ಟಿಸಿದೆ. ಈಗ ನಾವು ಕೈಯಲ್ಲಿ ಹಿಡಿದುಕೊಂಡಿರುವ ಎಲ್ಲ ಚೀನಾ ಮೂಲದ ಮೊಬೈಲ್‌ಗಳಲ್ಲೂ ಈ ಕಳ್ಳ ದಾರಿಯಿಂದ ಸಿಕ್ಕ ತಂತ್ರಜ್ಞಾನಗಳೇ ಹೊಸ ಹೊಳಪು ಪಡೆದು ಬಂದಿರುವಂಥವು. ಅಮೆರಿಕದ ಸಿಲಿಕಾನ್ ಸಿಟಿಯಲ್ಲಿ ತಂತ್ರಜ್ಞಾನ ಕುರಿತು ನಡೆಯುವ ಹೊಸ ಹೊಸ ಸಂಶೋಧನೆಗಳನ್ನು ಕಳ್ಳತನ ಮಾಡಿದ ಆರೋಪದಲ್ಲಿ ಹಲವರು ಸಿಕ್ಕಿಬಿದ್ದಿದ್ದಾರೆ. ಇದು ಅಮೆರಿಕದ ಕೋಪಕ್ಕೆ ಮೂಲ ಕಾರಣ. ಇದೊಂದು ರೀತಿಯಲ್ಲಿ ಪಾಕಿಸ್ತಾನ ಒಂದಷ್ಟು ಉಗ್ರರನ್ನು ತರಬೇತಿ ಕೊಟ್ಟು ಗಡಿ ನುಸುಳಿ ಭಾರತದೊಳಕ್ಕೆ ಬಿಟ್ಟು ಸ್ಫೋಟ ಮಾಡಿಸುವಂತೆಯೇ, ಚೀನಾ ಸ್ಪೈಗಳನ್ನು ಕಳುಹಿಸಿ ಸಿಲಿಕಾನ್ ಸಿಟಿಯಲ್ಲಿ ಹಕ್ಕುಸ್ವಾಮ್ಯ ಇರುವ ತಂತ್ರಜ್ಞಾನಗಳ ದಾಖಲೆಗಳನ್ನು ಕಳ್ಳತನ ಮಾಡುವುದು ಮತ್ತು ಅದನ್ನೇ ಸ್ವಲ್ಪ ಬದಲಾವಣೆ ಮಾಡಿ ದುಡ್ಡು ಮಾಡಿಕೊಳ್ಳುವುದು ನಡೆಯುತ್ತಿವೆ. ಈ ಕೆಲಸ ನಡೆಯುತ್ತಿರುವುದು ಹೊಸದೇನೂ ಅಲ್ಲ. ಅದರಲ್ಲೂ ಹುವಾವೆ ಬಗ್ಗೆ ಅಮೆರಿಕ ಸಿಟ್ಟಾಗಲು ಮೂಲ ಕಾರಣವೆಂದರೆ ಚೀನಾಗೆ ಹೀಗೆ ಕಳ್ಳ ದಾರಿಯಲ್ಲಿ ಹೋಗುವ ಎಲ್ಲ ತಂತ್ರಜ್ಞಾನಗಳೂ ಸರ್ಕಾರದ ಕೃಪಾಕಟಾಕ್ಷದಿಂದ ಹುವಾವೆಗೇ ಸಿಗುತ್ತದೆ.
ವ್ಯಾಪಾರ ಒಪ್ಪಂದದ ತಿಕ್ಕಾಟ ಎರಡೂ ದೇಶಗಳ ಮಧ್ಯೆ ತಾರಕಕ್ಕೇರಿದಾಗಲೇ 2018 ಡಿಸೆಂಬರ್‌ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆ ನಡೆಸಿದ್ದರು. ವ್ಯಾಪಾರ ಯುದ್ಧಕ್ಕೆ ಶೀಘ್ರ ತಿಲಾಂಜಲಿ ಹಾಡೋಣ ಎಂದು ಔತಣಕೂಟದಲ್ಲಿ ಕುಳಿತು ಇಬ್ಬರೂ ಮಾತನಾಡಿ ಕೈ ತೊಳೆಯುವ ಹೊತ್ತಿಗೆ ಕೆನಡಾದಲ್ಲಿ ಹುವಾವೆ ಸಿಎಫ್ಒ ಮೆಂಗ್ ವಾಂಗೌjನನ್ನು ಬಂಧಿಸಲಾಗಿತ್ತು. ಅವನ ವಿರುದ್ಧ ಇದ್ದ ಪ್ರಕರಣ ಮತ್ತದೇ ಹಕ್ಕುಸ್ವಾಮ್ಯ ಕಳ್ಳತನದ್ದು.
ಅಮೆರಿಕದ ಪ್ರಮುಖ ಟೆಲಿಕಾಂ ಕಂಪನಿ ಟಿಮೊಬೈಲ್ ತನ್ನ ಸ್ಮಾರ್ಟ್‌ಫೋನ್ ತಯಾರಿಕೆ ಕೇಂದ್ರಗಳಲ್ಲಿ ಹೊಸದೊಂದು ರೋಬೋ ಪರಿಚಯಿಸಿತ್ತು. ಟ್ಯಾಪಿ ಎಂಬ ಈ ರೋಬೋ ಮನುಷ್ಯರ ಕೈಯನ್ನೇ ಹೋಲುತ್ತದೆ. ಇದು ಆಗಷ್ಟೇ ಫ್ಯಾಕ್ಟರಿಯಿಂದ ಹೊರಬಂದ ಸ್ಮಾರ್ಟ್‌ಫೋನ್ ಅನ್ನು ಮನುಷ್ಯರು ಬಳಸಿ ದಂತೆಯೇ ತಟ್ಟಿ ಬಳಸುತ್ತದೆ. ಆಗ ಸ್ಮಾರ್ಟ್‌ಫೋನ್‌ನಲ್ಲಿ ಯಾವುದೇ ಸ್ಕ್ರೀನ್ ಸಮಸ್ಯೆ ಇದ್ದರೂ ದಾಖಲಾಗುತ್ತದೆ. ಇದು ಅತ್ಯಂತ ಅತ್ಯಾಧುನಿಕ ಸಾಧನ. ಟಿ ಮೊಬೈಲ್ ಬಿಟ್ಟರೆ ಉಳಿದ ಯಾವ ಕಂಪನಿಯೂ ಈವರೆಗೆ ಇಂಥದ್ದೊಂದು ಸಾಧನವನ್ನು ಇಷ್ಟು ಯಶಸ್ವಿಯಾಗಿ ರೂಪಿಸಿರಲಿಲ್ಲ. ಹುವಾವೆಗೆ ಟ್ಯಾಪಿ ಮೇಲೆ ಕಣ್ಣುಬಿದ್ದಿತ್ತು. ಖರೀದಿಸಬೇಕು ಎಂದು ಬಯಸಿತ್ತಾದರೂ ಟಿ ಮೊಬೈಲ್ ಒಪ್ಪಲಿಲ್ಲ. ಆದರೆ ಇದರ ತಂತ್ರಜ್ಞಾನ ಕಳ್ಳತನ ಮಾಡಲು ವೆಂಡರುಗಳನ್ನು ಬಳಸಿಕೊಂಡಿತು. ತನಗೆ ಆಪ್ತರಾದ ವೆಂಡರುಗಳನ್ನು ಟಿ ಮೊಬೈಲ್‌ಗೆ ಕಳುಹಿಸಿದ ಅದರ ಸೀಕ್ರೇಟ್‌ಗಳನ್ನು ಕಂಡುಕೊಂಡಿತ್ತು. ಇದರ ವಿರುದ್ಧ ಅಮೆರಿಕದ ಕೋರ್ಟ್ ಗಳಲ್ಲಿ ಪ್ರಕರಣ ದಾಖಲಾಗಿದ್ದು, ಹುವಾವೆ ತನ್ನ ಸಮರ್ಥನೆಯನ್ನೂ ಮಾಡಿಕೊಳ್ಳಲಾರದೆ ಸೋತಿತು.
ಹಾಗಂತ ಟಿ ಮೊಬೈಲ್ ಮಾತ್ರವಲ್ಲ, ಈ ಹಿಂದೆ ಸಿಸ್ಕೋ, ನಾರ್ಟೆಲ್ ಮತ್ತು ಮೊಟೊರೊಲಾ ಕಂಪನಿಗಳೆಲ್ಲವೂ ಚೀನಾ ವಿರುದ್ಧ ಆಕ್ಷೇಪ ಎತ್ತಿದ್ದವು. ತಮ್ಮ ತಂತ್ರಜ್ಞಾನಗಳನ್ನು ಚೀನಾ ಕಳುತ್ತಿದೆ ಎಂದು ಆರೋಪಿಸಿದ್ದವು. ಆದರೆ ಅವೆಲ್ಲವೂ ದೊಡ್ಡ ಹಾಗೂ ಗಂಭೀರ ಪ್ರಕರಣಗಳಾಗಿ ಗಮನ ಸೆಳೆಯಲೇ ಇಲ್ಲ. ಚೀನಾದಲ್ಲಿ ಪ್ರತಿ ಕಂಪನಿಯೂ ಕಮ್ಯೂನಿಸ್ಟ್ ಪಾರ್ಟಿಯ ಸಮಿತಿಯೊಂದನ್ನು ಹೊಂದಿರಬೇಕು. ಈ ಸಮಿತಿ ಯಾವ ಕೆಲಸ ಮಾಡುತ್ತದೆ ಎಂಬ ಬಗ್ಗೆ ಒಬ್ಬೊಬ್ಬರೂ ಒಂದೊಂದು ವಿವರಣೆ ಕೊಡುತ್ತಾರೆ. ಆದರೆ ಇಡೀ ಕಂಪನಿ ಸರ್ಕಾರದ ದೃಷ್ಟಿಕೋನಕ್ಕೆ ಅನುಗುಣವಾಗಿ ಕೆಲಸ ಮಾಡಬೇಕು ಎಂಬುದೇ ಮುಖ್ಯ ಉದ್ದೇಶ ಎಂಬುದನ್ನು ಎಲ್ಲ ಸಿಇಒಗಳೂ ಒಪ್ಪುತ್ತವೆ. ಅಂದ ಹಾಗೆ ಹುವಾವೆಯಲ್ಲೂ ಕಮ್ಯೂನಿಸ್ಟ್ ಪಾರ್ಟಿ ಸಮಿತಿ ಇದೆ. ಹುವಾವೆಯಲ್ಲಿ ಸುಮಾರು 25 ವರ್ಷಗಳಿಂದಲೂ ನಿರ್ದೇಶಕ, ಮುಖ್ಯ ಇಂಜಿನಿಯರ್ ಆಗಿ ಕೆಲಸ ಮಾಡಿರುವ ಝೌ ದೈಖೀಯೇ ಹುವಾವೆಯಲ್ಲಿ ಕಮ್ಯೂನಿಸ್ಟ್ ಪಾರ್ಟಿ ಸಮಿತಿಯ ಕಾರ್ಯ ದರ್ಶಿಯಾಗಿದ್ದಾರೆ. ಇವರು ಕಮ್ಯೂನಿಸ್ಟ್ ಪಾರ್ಟಿಯಲ್ಲೂ ಸಕ್ರಿಯವಾಗಿದ್ದಾರೆ ಎಂದೇ ಹೇಳಲಾಗುತ್ತಿದೆ.
ಹುವಾವೆಗೂ ಚೀನಾ ಸರ್ಕಾರಕ್ಕೂ ನೇರ ಸಂಬಂಧವಿಲ್ಲ ಎಂದು ರೆನ್ ಎಂಥ ಸಮರ್ಥನೆ ಮಾಡಿದರೂ, ಕಳೆದ ವರ್ಷ ನಡೆದ ಒಂದು ಘಟನೆ ವಾಸ್ತವದ ಚಿತ್ರಣವನ್ನು ನೀಡುತ್ತದೆ. ನಮ್ಮಲ್ಲಿ ಓಲಾ ಹಾಗೂ ಊಬರ್‌ನಂತೆಯೇ ಚೀನಾದಲ್ಲಿ ದೀದಿ ಎಂಬ ಕ್ಯಾಬ್ ಸೇವೆ ಒದಗಿಸುವ ಸಂಸ್ಥೆಯಿದೆ. ದೀದಿ ಕೋಟ್ಯಂತರ ಗ್ರಾಹಕರ ಡೇಟಾ ಹೊಂದಿತ್ತು. ಇವೆಲ್ಲವನ್ನೂ ಹೇಗಿದೆಯೋ ಹಾಗೆಯೇ ಸರ್ಕಾರಕ್ಕೆ ನೀಡಬೇಕು ಎಂಬುದು ಚೀನಾ ಸರ್ಕಾರದ ಆದೇಶವಾಗಿತ್ತು. ಆದರೆ ಡೇಟಾ ನೀಡಲು ಸಾಧ್ಯವಿಲ್ಲ. ಇದು ಗೌಪ್ಯತೆ ಉಲ್ಲಂಘನೆ ಎಂದಿ ದೀದಿ ವಾದಿಸಿತು. ಆದರೆ ಇಬ್ಬರು ಪ್ರಮುಖ ಉದ್ಯೋಗಿಗಳು ಕಗ್ಗೊಲೆಯಾದಾಗ ದೀದಿ ಬಾಯಿ ಮುಚ್ಚಿಕೊಂಡು ಡೇಟಾ ರವಾನಿಸಬೇಕಾಯ್ತು.
ಸದ್ಯಕ್ಕೆ ಭಾರತದಲ್ಲಿ ಹಾನರ್ ಫೋನ್‌ಗಳ ಭವಿಷ್ಯ ಆತಂಕದಲ್ಲಿದೆ. ಅದರ ಬೆನ್ನಲ್ಲೇ ಇತರ ಚೀನಾ ಸ್ಮಾಟ್‌ಫೋನ್‌ಗಳ ಕೇಂದ್ರ ಕಚೇರಿಯಲ್ಲೂ ಕಡಿಮೆ ತೀವ್ರತೆಯ ಕಂಪನ ಶುರುವಾಗಿದೆ. ಒಂದೇ ಆಶಾಭಾವವೆಂದರೆ, ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಸ್ಮಾರ್ಟ್‌ಫೋನ್ ತಯಾರಿಕೆಯ ಘಟಕಗಳು ಹುಟ್ಟಿ ಕೊಳ್ಳುತ್ತಿವೆ. ಈ ಸಂಘರ್ಷದ ಮಧ್ಯೆಯೇ ಭಾರತ ಸ್ಮಾರ್ಟ್‌ಫೋನ್ ಹಾಗೂ ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ಸ್ವಾವಲಂಬಿಯಾಗುವ ಕನಸನ್ನೂ ಕಾಣಬಹುದು ಮತ್ತು ಅದಕ್ಕೆ ಸೂಕ್ತ ತಯಾರಿಯನ್ನೂ ಮಾಡಿಕೊಳ್ಳಬಹುದು. ಅಂಥದ್ದೊಂದು ಅವಕಾಶವನ್ನು ಅಮೆರಿಕ ನಮಗೆ ತಂದುಕೊಟ್ಟಿದೆ. ಅದನ್ನು ಬಳಸಿಕೊಳ್ಳುವುದು ನಮ್ಮ ಕೈಯಲ್ಲಿದೆ.
– ಕೃಷ್ಣ ಭಟ್