Advertisement

ಲಂಬ ಗಾರ್ಡನಿಂಗ್‌ ಮನೆಗೊಂದು ವಿಶೇಷ ಮೆರುಗು

11:28 PM Jul 05, 2019 | Team Udayavani |

ಮನೆ ಸುಂದರವಾಗಿರಬೇಕು, ಮನೆ ಮುಂದಿರುವ ಗಾರ್ಡನ್‌ ಕಣ್ಸೆಳೆಯುವಂತಿರಬೇಕು. ಆಗ ಮಾತ್ರ ಮನೆಗೊಂದು ಕಳೆ, ಮನಸ್ಸಿಗೆ ಮುದ. ಮನೆಯ ಸೌಂದರ್ಯ ಹೆಚ್ಚಿಸುವಲ್ಲಿ ಗಾರ್ಡನ್‌ಗಿಂತ ಸುಲಭವಾದ ಆಯ್ಕೆ ಬೇರೊಂದಿಲ್ಲ. ಹಚ್ಚ ಹಸುರು, ಹಲವು ಬಣ್ಣಗಳಿಂದ ಕೂಡಿದ ಹೂವುಗಳು ಮನೆಗೆ ಆಕರ್ಷಕ ರೂಪ ನೀಡುತ್ತವೆ.

Advertisement

ಗಾರ್ಡನ್‌ ಎಂದರೆ ಕೇವಲ ಮನೆ ಮುಂದೆ, ಹಿಂದೆ, ಬದಿಗಳಲ್ಲಿ ಇರುವ ಹೂದೋಟವಲ್ಲ. ಬದಲಾಗಿ ಮನೆಯ ಒಳಗೆ, ಗೋಡೆಗಳ ಮೇಲೆ, ಟೆರೇಸ್‌ನಲ್ಲಿ ಮಾತ್ರವಲ್ಲ ಕಂಬಗಳಿಗೂ ವಿಸ್ತರಿಸಿದೆ. ಗಾರ್ಡನಿಂಗ್‌ ಇಂದು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರುವುದರಿಂದ ಇದರಲ್ಲೂ, ಹೊಸ ಹೊಸ ವಿಧಾನಗಳು ಬರುತ್ತಿವೆ. ವುಡ್‌ಲ್ಯಾಂಡ್‌ ಗಾರ್ಡನ್‌, ವಾಟರ್‌ ಗಾರ್ಡನ್‌, ಫ್ಲವರ್‌ ಗಾರ್ಡನ್‌, ರಾಕ್‌ ಗಾರ್ಡನ್‌ಗಳಿವೆ. ಆಕಾರದ ಆಧಾರದ ಮೇಲೂ ಹಲವು ಬಗೆ ಇದ್ದು ಲಂಬಾಕಾರದ ಗಾರ್ಡನ್‌, ಅಡ್ಡ ಗಾರ್ಡನ್‌ಗಳೂ ಇವೆ.

ಲಂಬಕಾರದ ಗಾರ್ಡನ್‌ ಅಥವಾ ಹಸುರು ಗೋಡೆ
ಲಂಬಕಾರದ ಗಾರ್ಡನ್‌ ಎಂದರೆ ಉದ್ದವಾಗಿ ಗಾರ್ಡನಿಂಗ್‌ ಮಾಡುವುದು. ಇದರ ನಿರ್ವಹಣೆ ಬಹು ಸುಲಭ. ಹೆಚ್ಚಾಗಿ ಪಾಟ್‌ಗಳನ್ನೇ ಇದರಲ್ಲಿ ಬಳಸುವುದರಿಂದ ಅದನ್ನು ಸುಲಭವಾಗಿ ಎತ್ತಿಡಬಹುದು, ಬದಲಾಯಿಸಬಹುದು, ಅಗತ್ಯ ಬಂದಾಗ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಬಹುದು. ಪಾಟ್‌ಗಳಿಗೆ ಬೇಕಾದ ಬಣ್ಣ ನೀಡುವುದರ ಮೂಲಕ ಅದರ ಅಂದವನ್ನು ಇನ್ನಷ್ಟು ಹೆಚ್ಚಿಸಬಹುದು. ಇದಕ್ಕೆ ಕಡಿಮೆ ಜಾಗ ಸಾಕು ಮಾತ್ರವಲ್ಲ ವೆಚ್ಚವೂ ದುಬಾರಿಯೇನಲ್ಲ. ಇದನ್ನು ಹೆಚ್ಚಾಗಿ ಗೋಡೆಯನ್ನು ಬಳಸಿಯೇ ಮಾಡಲಾಗುತ್ತದೆ.

ಪ್ರಯೋಜನಗಳು
• ಮನೆಯ ಸೌಂದರ್ಯ ಹೆಚ್ಚಿಸುತ್ತದೆ ಮಾತ್ರವಲ್ಲ ಮನೆಗೆ ಬಿಸಿಲು, ಮಳೆಯಿಂದ ರಕ್ಷಣೆಯನ್ನೂ ಒದಗಿಸುತ್ತದೆ. ಸೂರ್ಯನ ಕಿರಣ, ಮಳೆಯ ನೀರು ನೇರವಾಗಿ ಗೋಡೆಗೆ ಬಿದ್ದು ಹಾಳಾಗುವುದನ್ನು ತಪ್ಪಿಸುತ್ತದೆ.

• ಮನೆಯ ಒಳಾಂಗಣ, ಹೊರಾಂಗಣ ದಲ್ಲಿರುವ ಖಾಲಿ ಜಾಗವನ್ನು ತುಂಬಿಸಲು ಇದು ಸೂಕ್ತ.

Advertisement

• ಬೇಸಗೆಯಲ್ಲೂ ಮನೆಯೊಳಗೆ ತಂಪು ವಾತಾವರಣ ಸೃಷ್ಟಿಸುತ್ತದೆ.

• ಗೋಡೆಗಳ ಅಲಂಕಾರಕ್ಕೆ ಬೇರೆ ವಸ್ತುಗಳ ಅಗತ್ಯವಿರುವುದಿಲ್ಲ.

ಮಾಡುವುದು ಹೇಗೆ?
ಲಂಬಾಕಾರದ ಗಾರ್ಡನಿಂಗ್‌ಗೆ ಹೆಚ್ಚಾಗಿ ಪಾಟ್, ಟ್ರೇಯನ್ನು
ಬಳಸಬಹುದು. ನೀರಿನ ಅಭಾವವಿರುವವರಿಗೆ ಇದು ಸೂಕ್ತವಾದ ಆಯ್ಕೆ. ಯಾಕೆಂದರೆ ಈ ಗಾರ್ಡನಿಂಗ್‌ಗೆ ಹೆಚ್ಚು ನೀರು ಬೇಕಾಗಿಲ್ಲ. ಆದರೆ ಸಸ್ಯಗಳ ಆಯ್ಕೆ ಮಾಡುವಾಗ ಎಚ್ಚರಿಕೆ ಅಗತ್ಯ. ಈ ರೀತಿಯ ಗಾರ್ಡನಿಂಗ್‌ಗಾಗಿಯೇ ಪ್ರತ್ಯೇಕ ಗಿಡಗಳಿದ್ದು ಅವನ್ನೇ ಆಯ್ಕೆ ಮಾಡುವುದು ಉತ್ತಮ.

ಒಳಾಂಗಣಕ್ಕೆ
ಮನೆಯ ಒಳಗಡೆ ಲಂಬಾಕಾರದ ಗಾರ್ಡನ್‌ ಹೆಚ್ಚು ಸೂಕ್ತ. ಮನೆಯಲ್ಲಿ ಖಾಲಿ ಜಾಗಗಳಲ್ಲಿ ಈ ಗಾರ್ಡನಿಂಗ್‌ ಮಾಡಬಹುದು. ಮುಖ್ಯವಾಗಿ ಲೀವಿಂಗ್‌ ರೂಮ್‌, ಸ್ಟಡಿ ರೂಮ್‌, ಬಾಲ್ಕನಿ, ಸಿಟೌಟ್‌ಗಳಿಗೆ ಇದು ಹೆಚ್ಚು ಮೆರುಗು ನೀಡುತ್ತದೆ.

ಹೊರಾಂಗಣಕ್ಕೆ
ಮನೆಯ ಹೊರಗೆ ಅಂದರೆ ಗೋಡೆಗಳ ಮೇಲೆ, ಕಾಂಪೌಂಡ್‌ ಗೋಡೆ, ಗೇಟ್, ಕಂಬಗಳ ಮೇಲೆ ಈ ಗಾರ್ಡನ್‌ ಮಾಡಿಕೊಳ್ಳಬಹುದು. ಮನೆಯ ಹೊರಗೆ ನೇರವಾಗಿ ಸೂರ್ಯನ ಬೆಳಕು ಬೀಳುವುದರಿಂದ ಗಿಡಗಳು ಮತ್ತಷ್ಟು ನಳನಳಿಸುತ್ತವೆ.

•ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next