Advertisement

ಚಿತ್ರಕಲೆಯಲ್ಲಿ ಮಿಂಚುತ್ತಿರುವ ಬಹುಮುಖ ಪ್ರತಿಭೆ ಶೈಲೇಶ್‌

04:04 PM Jul 18, 2021 | Team Udayavani |

ಕಲಿಯುವ ಆಸಕ್ತಿಯೊಂದಿಗೆ ಮಾಡುವ ಪ್ರತಿಯೊಂದು ಕೆಲಸದಲ್ಲಿ ಶ್ರದ್ಧೆ ಇದ್ದರೆ ಗೆಲುವು ಖಂಡಿತ. ಇದೇ ರೀತಿಯ ಮಾರ್ಗವನ್ನು ಅನುಸರಿಸಿಕೊಂಡು ಗುರುವಿಲ್ಲದೆಯೇ ಕಲೆ ಕಲಿತು ಸಮಾಜದಲ್ಲಿ ತಮ್ಮನ್ನು ಎಲ್ಲರೂ ಗುರುತಿಸಿಕೊಳ್ಳುವಂತೆ ಮಾಡಿ, ಜೀವನದಲ್ಲಿ ತಮ್ಮ ಸ್ವಂತ ಪ್ರಯತ್ನದಿಂದ ಮೇಲೆ ಬಂದ ಹಲವು ಯುವ ಪ್ರತಿಭೆಗಳು ನಮ್ಮಲ್ಲಿ ಇದ್ದಾರೆ. ಅಂಥವರ ಸಾಲಿಗೆ ಸೇರುವ ಯುವಪ್ರತಿಭೆ ಶೈಲೇಶ್‌ ಬೈಕಂಪಾಡಿ.

Advertisement

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬೈಕಂಪಾಡಿಯ ಉಮೇಶ್‌ ಅಂಚನ್‌ ಮತ್ತು ಶಶಿಕಲಾ ದಂಪತಿಯ ಪ್ರಥಮ ಪುತ್ರನಾದ ಇವರು ತನ್ನ ಪ್ರಾಥಮಿಕ ಮತ್ತು ಹೈಸ್ಕೂಲ್‌ ಶಿಕ್ಷಣವನ್ನು ಮೀನಕಳಿಯಾ ಶಾಲೆ ಬೈಕಂಪಾಡಿಯಲ್ಲಿ ಪೂರ್ತಿಗೊಳಿಸಿ, ಪದವಿಪೂರ್ವ, ಪದವಿ, ಹಾಗೆ ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಗೋಕರ್ಣನಾಥೇಶ್ವರ ಕಾಲೇಜು ಮಂಗಳೂರಿನಲ್ಲಿ ಪಡೆದರು.

ಚಿಕ್ಕ ವಯಸ್ಸಿನಿಂದಲೇ ಚಿತ್ರಕಲೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದ ಇವರು ಸ್ವತಃ ತಾವೇ ಚಿತ್ರವನ್ನು ಮಾಡಲು ಪ್ರಾರಂಭಿಸಿದರು. “ಆರಂಭದ ದಿನಗಳಲ್ಲಿ ಚಿತ್ರಗಳನ್ನು ಯಾರು ಇಷ್ಟಪಡುತ್ತಿರಲಿಲ್ಲ ಅದನ್ನೇ ಸವಾಲನ್ನಾಗಿ ಸ್ವೀಕರಿಸಿ, ಹೆಚ್ಚಿನ ಆಸಕ್ತಿಯನ್ನು ತೋರಿದೆ. ಯೂಟ್ಯೂಬ್‌ನ ಮೂಲಕ ಕೆಲವೊಂದು ಮಾಹಿತಿಯನ್ನು ಪಡೆದೆ, ಅದರ ಜತೆಗೆ ತಂದೆ ತಾಯಿಯ ಉತ್ತಮ ಪ್ರೋತ್ಸಾಹ ಸಿಕ್ಕ ಕಾರಣ ಅದೇ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ’ ಎನ್ನುತ್ತಾರೆ ಶೈಲೇಶ್‌.

ಉತ್ತಮ ಚಿತ್ರಗಾರರಾದ ಇವರು ಪೆನ್ಸಿಲ್‌ ಸ್ಕೆಚ್‌, ವಾಟರ್‌ ಕಲರ್‌, ಫೇಸ್‌ ಪೈಟಿಂಗ್‌, ವಾಲ್‌ ಪೈಟಿಂಗ್‌, 3ಡಿ ಆರ್ಟ್‌, ಹೀಗೆ ಇನ್ನಿತರ ಹಲವು ಪೈಟಿಂಗ್‌ನಲ್ಲಿ ಪರಿಣತಿಯನ್ನು ಹೊಂದಿರುವ ಇವರು ಹಲವಾರು ಕಡೆಗಳಲ್ಲಿ ತನ್ನ ಕೈಚಳಕವನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisement

ಇವರ ಕೈಚಳಕದಿಂದ ಮೂಡಿ ಬಂದ ತುಳುನಾಡ ದೈವಗಳ ಚಿತ್ರಗಳು ಎಲ್ಲೆಡೆಯೂ ಮನೆ ಮಾತಾಗಿದೆ. ಅಷ್ಟೇ ಅಲ್ಲದೆ ಕಾರ್ಯಕ್ರಮ ನಿರೂಪಣೆ, ತಬಲ, ಯಕ್ಷಗಾನ, ನಾಟಕಗಳನ್ನು ಮಾಡುತ್ತಿದ್ದು ಹಲವು ತಂಡಗಳ ಜತೆ ಸೇರಿ ನಾಟಕ, ಯಕ್ಷಗಾನ, ಪ್ರದರ್ಶನ ನೀಡಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ಶೈಲೇಶ್‌ ಭಜನ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾರೆ.

ಕಲೆಯ ಬೆಲೆ ಅರಿತವನೇ ನಿಜವಾದ ಕಲಾವಿದನಾಗಲೂ ಸಾಧ್ಯ ಎನ್ನುವ ಇವರಿಗೆ ಉತ್ತಮ ಚಿತ್ರಗಾರನಾಗಿ ಮಕ್ಕಳಿಗೆ ತರಬೇತಿ ನೀಡುವಾಸೆ ಹಾಗೇ ವಿದೇಶಕ್ಕೆ ಹೋಗುವ ಕನಸು. ಇವರ ಕಲೆಯನ್ನು ಮೆಚ್ಚಿ ಹಲವಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ ಹಾಗೆಯೇ ಸಂಘ- ಸಂಸ್ಥೆಗಳೂ ಇವರನ್ನು ಸಮ್ಮಾನಿಸಿವೆ.

ಶೈಲಶ್ರೀ ಬಾಯಾರ್‌

ವಿವೇಕಾನಂದ ಕಾಲೇಜು ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next