ಕುಷ್ಟಗಿ: ಗದಗ-ವಾಡಿ ರೈಲ್ವೆ ಮಾರ್ಗದ ಹಳಿ ಜೋಡಣಾ ಕಾಮಗಾರಿಗೆ ಕೈಗೆತ್ತಿಕೊಳ್ಳುವ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ವಲಯದ ಹಿರಿಯ ಅಭಿಯಂತರ ಮನ್ಸೂರ್ಅಲಿ ಅವರು ಬುಧವಾರ ಪಟ್ಟಣ ವ್ಯಾಪ್ತಿಯಲ್ಲಿ ಗುರುತಿಸಿದ ಭೂಸ್ವಾಧೀನದ ಸ್ಥಳ ಪರಿಶೀಲನೆ ನಡೆಸಿದರು.
ಪಟ್ಟಣ ವ್ಯಾಪ್ತಿಯಲ್ಲಿರುವ ಗದಗ-ವಾಡಿ ರೈಲ್ವೆ ಮಾರ್ಗದ ವಿನ್ಯಾಸದಲ್ಲಿ ಭೌಗೋಳಿಕ ಆಧಾರವಾಗಿ ಕೊಪ್ಪಳ ರಸ್ತೆ ಹಾಗೂ ರಾಯಚೂರು ರಸ್ತೆಯಲ್ಲಿ ಕೆಳ ಸೇತುವೆಗಳು, ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಿಸಲು ವಿನ್ಯಾಸಗೊಳಿಸಲಾಗಿದೆ. ಉದ್ದೇಶಿತ ಯೋಜನೆಯನ್ನು ಬದಲಿಸಲಾಗದು ಸ್ಥಳೀಯ ಶಾಸಕರು, ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಥಾಸ್ಥಿತಿಯಲ್ಲಿ ಮೇಲ್ಸೇತುವೆ, ಕೊಪ್ಪಳ ರಸ್ತೆ ಹಾಗೂ ರಾಯಚೂರು ರಸ್ತೆಗಳಲ್ಲಿ ಕೆಳ ಸೇತುವೆ ಬದಲಿಗೆ ಮೇಲ್ಸೇತುವೆ ನಿರ್ಮಿಸಲು
ಯೋಜನೆಯಲ್ಲಿ ಮಾರ್ಪಟು ಮಾಡಲು ಅವಕಾಶದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ವಿಚಾರವನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಗದಗ-ವಾಡಿ ರೈಲ್ವೆ ಮಾರ್ಗಕ್ಕೆ ಯಲಬುರ್ಗಾ ತಾಲೂಕಿನ ತಳಕಲ್ನಿಂದ ಕುಷ್ಟಗಿಯವರೆಗೂ 54 ಕಿ.ಮೀ. ಭೂಸ್ವಾಧೀನಗೊಂಡಿದ್ದು, ಕುಷ್ಟಗಿಯಿಂದ ಮುದೇನೂರು, ಕಿಡದೂರು, ಮ್ಯಾಗಳಪೇಟೆ ಲಿಂಗಸುಗೂರು ಭೂಸ್ವಾ ಧೀನ ಶೀಘ್ರವೇ ಕೈಗೆತ್ತಿಕ್ಕೊಳ್ಳಲಾಗುವುದು. ಕುಷ್ಟಗಿ ಪಟ್ಟಣದ ಸಂತ ಶಿಶುನಾಳ ಶರೀಫ್ ನಗರ, ಮಾರುತಿ ನಗರದ ಮಧ್ಯೆ 1.4 ಕಿ.ಮೀ. ಉದ್ದವಾಗಿ ಹಾಗೂ ರೈಲ್ವೆ ಮಾರ್ಗ ಮಧ್ಯದಿಂದ ಎಡಭಾಗ 85 ಮೀಟರ್, ಬಲ ಭಾಗ 50 ಮೀಟರ್ ವ್ಯಾಪ್ತಿಯಲ್ಲಿ ರೈಲ್ವೆ ಸ್ಟೇಷನ್ ಜಾಗೆ ಮೀಸಲಿರಿಸಲಾಗಿದೆ. ರೈಲ್ವೆ ಮಾರ್ಗವು, ಮಾರ್ಗ ಮಧ್ಯದಿಂದ ಎರಡು ಕಡೆ 20 ಮೀಟರ್ ನಂತೆ 40 ಮೀಟರ್ ಜಾಗೆಯಲ್ಲಿ ರೈಲ್ವೆ ಹಳಿಗಳ ಜೋಡಣೆ ಕಾರ್ಯ ನಡೆಯಲಿದೆ.
ಕುಷ್ಟಗಿ ಪಟ್ಟಣ ವ್ಯಾಪ್ತಿಯಲ್ಲಿ ಶೀಘ್ರವೇ ಕಾಮಗಾರಿ ಕೈಗೆತ್ತಿಗೊಳ್ಳಲಾಗುತ್ತಿದ್ದು, ಈಗಾಗಲೇ ಈ ಮಾರ್ಗದಲ್ಲಿ ಬರುವ ಕೃಷ್ಣೆ ಹಾಗೂ ಭೀಮಾ ನದಿಗೆ ಸೇತುವೆ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಕ್ಕಿದೆ ಎಂದು ಮನ್ಸೂರ್ ಅಲಿ ಮಾಹಿತಿ ನೀಡಿದರು.
ಇದೇ ವೇಳೆ ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಅವರು ವಿಷಯ ಪ್ರಸ್ತಾಪಿಸಿ, ಸಂತ ಶಿಶುನಾಳ ಶರೀಫ್ ನಗರದ ರೈಲ್ವೆ ಸ್ಟೇಷನ್ಗಾಗಿ 10 ಮನೆಗಳು, ಶಾಲೆ, ಅಂಗನವಾಡಿ ತೆರವುಗೊಳಿಸಲಾಗುತ್ತಿದೆ. ಈಗಾಗಲೇ ಮನೆಗಳ ವಾರಸುದಾರರಿಗೆ ಪರಿಹಾರವೂ ಸಿಕ್ಕಿದೆ. ಪುನರ್ವಸತಿಗಾಗಿ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಲಿದ್ದಾರೆಂದು ತಿಳಿಸಿದರು.
ಯೋಜನೆಯಲ್ಲಿ ಕೊಪ್ಪಳ, ರಾಯಚೂರು ರಸ್ತೆಗಳಲ್ಲಿ ಕೆಳ ಸೇತುವೆ, ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ನಿರ್ಮಿಸಲು ಯೋಜಿಸಲಾಗಿದ್ದು, ಎಲ್ಲವೂ ಏಕಪ್ರಕಾರವಾಗಿ ಮೇಲ್ಸೇತುವೆಯಾಗಿ ಮಾರ್ಪಟ್ಟರೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ವಲಯದ ಸಂಬಂಧಿಸಿದ ಮುಖ್ಯಸ್ಥರಿಗೂ ಪತ್ರ ಬರೆದು ಮನವಿ ಮಾಡಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಪುರಸಭೆ ಸದಸ್ಯ ವಸಂತ ಮೇಲಿನಮನಿ, ತಾಪಂ ಸದಸ್ಯ ಸುರೇಶ ಕುಂಟನಗೌಡ್ರು, ಫಕೀರಪ್ಪ ಚಳಗೇರಿ, ಸೋಮಶೇಖರ ವೈಜಾಪೂರ, ಬಾಪುಗೌಡ ಮಾಲಿಪಾಟೀಲ ಇದ್ದರು.