ತಿ.ನರಸೀಪುರ: ರೈತರ ಸಾಲಮನ್ನಾ ಸಂಬಂಧ ಹೆಸರು, ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಪಹಣಿಗಳಲ್ಲಿ ವ್ಯತ್ಯಾಸ ಕಂಡು ಬಂದಿರುವ ಹಿನ್ನೆಲೆಯಲ್ಲಿ ಪಟ್ಟಣದ ಎಂಡಿಸಿಸಿ ಬ್ಯಾಂಕ್‌ನಲ್ಲಿ ತಹಶೀಲ್ದಾರ್ ಪರಿಶೀಲನೆ ನಡೆಸಿದರು.
ರಾಜ್ಯ ಸರ್ಕಾರ ಜಾರಿಗೊಳಿಸಿರುವ ರೈತರ ಸಾಲಮನ್ನಾ ಯೋಜನೆಯಡಿ ತಾಲೂಕಿನಲ್ಲಿ 8,424 ರೈತರು ಒಳಪಡಲಿದ್ದಾರೆ. ಈ ಪೈಕಿ 6 ಸಾವಿರ ರೈತರ ಸಾಲ ಮನ್ನಾ ಆಗಿದ್ದು, 2 ಸಾವಿರಕ್ಕೂ ಹೆಚ್ಚು ರೈತರ ಸಾಲ ಮನ್ನಾ ಆಗುವಲ್ಲಿ ತೊಂದರೆಯಾಗಿದೆ.
ರೈತರ ಹೆಸರು, ಆಧಾರ್‌ಕಾರ್ಡ್, ಪಡಿತರ ಚೀಟಿಯಲ್ಲಿ ಸರಿಯಾಗಿದ್ದು, ಪಹಣಿಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಪಹಣಿಯಲ್ಲಿನ ರೈತರ ಹೆಸರು ಹಾಗೂ ಆಧಾರ್ ಕಾರ್ಡ್, ಪಡಿತರ ಚೀಟಿಯಲ್ಲಿರುವ ರೈತ ಒಬ್ಬರೇ ಎಂದು ದೃಢೀಕರಿಸುವ ಉದ್ದೇಶದಿಂದ ಕಂದಾಯಾಧಿಕಾರಿಗಳು ಬ್ಯಾಂಕ್‌ನಲ್ಲಿ ರೈತರ ಅರ್ಜಿಗಳನ್ನು ಪರಿಶೀಲಿಸಿ ಹೆಬ್ಬೆಟ್ಟು ನೀಡುವ ಮೂಲಕ ದೃಢೀಕರಿಸಿದರು.
ತಹಶೀಲ್ದಾರ್ ಎಚ್.ಎಸ್.ಪರಮೇಶ್ ಮಾತನಾಡಿ, ಹೆಸರಿನ ವ್ಯತ್ಯಾಸ ಆಗಿರುವುದರಿಂದ ಕೆಲ ರೈತರು ಸಾಲಮನ್ನಾ ಅವಕಾಶದಿಂದ ವಂಚಿತರಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಂತಹ ರೈತರನ್ನು ಗುರುತಿಸಿ ದೃಢೀಕರಿಸಲಾಗುತ್ತಿದೆ ಎಂದು ತಿಳಿಸಿದರು.
ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ರಾಜಪ್ಪ ಮಾತನಾಡಿ, ತಾಲೂಕಿನಲ್ಲಿ ಸಹಕಾರ ಬ್ಯಾಂಕ್‌ಗಳ ಮೂಲಕ 8,424 ರೈತರು ಸಾಲ ಪಡೆದಿದ್ದರು. ಅದರಲ್ಲಿ 6 ಸಾವಿರ ರೈತರ ದಾಖಲೆಗಳ ಸಮರ್ಪಕವಾಗಿದ್ದರಿಂದ ಸಾಲಮನ್ನಾ ಆಗಿದೆ. ಕೆಲವು ರೈತರ ದಾಖಲೆಗಳಲ್ಲಿರುವ ಹೆಸರು ವ್ಯತ್ಯಾಸವಿದ್ದ ಕಾರಣ ಕಂದಾಯಾಧಿಕಾರಿಗಳು ಬ್ಯಾಂಕಿಗೆ ಬಂದು ಪರಿಶೀಲಿಸಿ ದೃಢೀಕರಿಸಿದ ಬಳಿಕ ಸಾಲ ಮನ್ನಾ ಆಗಲಿದೆ ಎಂದು ತಿಳಿಸಿದರು.
ಈ ವೇಳೆ ವ್ಯವಸ್ಥಾಪಕ ಹುಚ್ಚನಾಯಕ, ಬ್ಯಾಂಕ್ ಅಧಿಕಾರಿ ಮೇಘನಾ, ಮುಖ್ಯಕಾರ್ಯ ನಿರ್ವಾಹಣಾಧಿಕಾರಿಗಳಾದ ಕಾವೇರಿಪುರ ಕೆ.ಪಿ. ಗೋಂದರಾಜು, ಕುರುಬೂರು ಬಸವಣ್ಣ, ಗರ್ಗೆಶ್ವರಿ, ಸಾದಿಕ್ ಹುಸೇನ್, ದೊಡ್ಡೇಬಾಗಿಲು ಮಹಾದೇವಸ್ವಾಮಿ, ಕಸಬಾ ಪಿಎಸಿಸಿ ಅಧ್ಯಕ್ಷ ಮಲ್ಲಣ್ಣ, ಮಹದೇವಸ್ವಾಮಿ ಇತರರಿದ್ದರು.