ಬೆಂಗಳೂರು: ”ಜ್ಞಾನವ್ಯಾಪಿ ಮಸೀದಿಯೊಳಗಿನ ದೇವತಾರ್ಚನೆ ಸಂಬಂಧ ಹಿಂದುಗಳು ಸಲ್ಲಿಸಿದ್ದ ದಾವೆ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿರುವುದು ಅತ್ಯಂತ ಸ್ವಾಗತಾರ್ಹ” ಎಂದು ಇಂಧನ, ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ ಸುನಿಲ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
”ಶೃಂಗಾರಗೌರಿ, ಗಣಪತಿ ಮತ್ತು ಲಕ್ಷ್ಮಿ ಪೂಜೆಗೆ ಅವಕಾಶ ಕೋರಿ ಹಿಂದು ಮಹಿಳೆಯರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಸಿದ್ದರು. ಇದನ್ನು ಪುರಸ್ಕರಿಸುವ ಮೂಲಕ ನ್ಯಾಯಾಲಯ ಆಸ್ತಿಕ ಮನಸುಗಳ ಭಾವನೆಗೆ ಮಾನ್ಯತೆ ನೀಡಿದಂತಾಗಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದು ಯಾರ ಸೋಲೂ ಅಲ್ಲ
”ಯಾರ ಗೆಲುವೂ ಅಲ್ಲ. ಆದರೆ ಬಹುಕಾಲದಿಂದ ಹಿಂದು ಸಮಾಜ ನಡೆಸಿಕೊಂಡು ಬಂದಿದ್ದ ಹೋರಾಟಕ್ಕೆ ಈಗ ಜಯ ಸಿಕ್ಕಂತಾಗಿದೆ. ಇತಿಹಾಸ ತಿರುಚುವಿಕೆ, ಸುಳ್ಳು ಪ್ರಚಾರದ ವಿರುದ್ಧ ದೊಡ್ಡ ಗೆಲುವು ಲಭಿಸಿದಂತಾಗಿದೆ” ಎಂದು ವ್ಯಾಖ್ಯಾನಿಸಿದ್ದಾರೆ.
”ಹಾಲಿನಲ್ಲಿ ಸಕ್ಕರೆ ಬೆರೆಯುವ ರೀತಿಯಲ್ಲಿ ಹಿಂದೂಗಳ ಭಾವನೆಗಳನ್ನು ಪ್ರತಿಯೊಬ್ಬರು ಗೌರವಿಸಬೇಕು. ಸರ್ವಧರ್ಮ ಸಮಾನತೆ ನಮ್ಮ ಸಂಸ್ಕ್ರತಿಯ ಭಾಗ. ಆದರೆ ನಮ್ಮ ಭಾವನೆಗಳಿಗೂ ಇತರರು ಬೆಲೆ ನೀಡಬೇಕು. ಆಗ ದೇಶ ಸುಭಿಕ್ಷವಾಗಿರಲು ಸಾಧ್ಯವಿದೆ.ಸಾಮರಸ್ಯ, ಭಾವೈಕ್ಯ ಎಂಬುದು ಪ್ರತಿಯೊಬ್ಬ ಭಾರತೀಯರ ರಕ್ತದ ಕಣಕಣದಲ್ಲೂ ಇದೆ. ಅದನ್ನು ಜಾಗೃತಗೊಳಿಸೋಣ” ಎಂದು ಹೇಳಿದ್ದಾರೆ.