ಬೆಂಗಳೂರು : ಮಹತ್ವದ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಕಪ್ಪು ಹಣವನ್ನು ಬಿಳಿಯಾಗಿಸುವ ಭಾರೀ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಪ್ರಮುಖ ಆರೋಪಿ ಪ್ರವೀಣ್ ಕುಮಾರ್ ಎಂಬಾತನನ್ನು ಶನಿವಾರ ತಡರಾತ್ರಿ ಬಂಧಿಸಿದ್ದಾರೆ. ಬಂಧಿತ ಪ್ರವೀಣ್ ಕುಮಾರ್ ಕಾಂಗ್ರೆಸ್ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಅವರ ಅಳಿಯ ಎಂದು ತಿಳಿದು ಬಂದಿದೆ.
4 ದಿನಗಳ ಹಿಂದೆ 5 ಕೋಟಿ ರೂಪಾಯಿ ಹಣವನ್ನು ಜಪ್ತಿ ಮಾಡಿದ್ದ ಪೊಲೀಸರು ಜಾಡು ಹಿಡಿದು ಇನ್ನಷ್ಟು ಕಾರ್ಯಾಚರಣೆಗೆ ಮುಂದಾದಾಗ ಪ್ರವೀಣ್ ಕುಮಾರ್ ಸಹಿತ 14 ಮಂದಿ ಬಲೆಗೆ ಬಿದ್ದಿದ್ದಾರೆ.
ನಾಗರಬಾವಿಯ ಬೆಸ್ಕಾಂ ಲೇಔಟ್‍ನಲ್ಲಿ ದಂಧೆಯಲ್ಲಿ ತೊಡಗಿದ್ದ ತಂಡವನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ಈ ವೇಳೆ 9 ಕೋಟಿ 10 ಲಕ್ಷ ರೂಪಾಯಿ ಮೌಲ್ಯದ ಅಪನಗದೀಕರಣಗೊಂಡ 500 ಮತ್ತು 1000 ರೂಪಾಯಿ ನೊಟುಗಳನ್ನ ಜಪ್ತಿ ಮಾಡಿದ್ದಾರೆ. ಬರೋಬ್ಬರಿ 25 ಕೋಟಿ ರೂ. ಹಳೆಯ ನೋಟಿನ ಜೊತೆ ಇನ್ನೊಂದು ಗ್ಯಾಂಗ್ ಪರಾರಿಯಾಗಿದೆ ಎಂದು ವರದಿಯಾಗಿದೆ.
ನಾಗರಬಾವಿಯ ಉದ್ಯಮಿ ಉಮೇಶ್ ಕಪ್ಪು ಹಣವನ್ನು ಬಿಳಿಯಾಗಿಸಲು ಮುಂದಾಗಿ ಪ್ರವೀಣ್ ಕುಮಾರ್ ಜೊತೆ ಡೀಲ್ ಕುದುರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಮಂಜುನಾಥ್ ಬಿಎಂಟಿಸಿ ಉದ್ಯೋಗಿಯಾಗಿದ್ದು, ಉಳಿದ 13 ಜನರು ರಿಯಲ್ ಎಸ್ಟೇಟ್ ಉದ್ಯಮಿಗಳೆನ್ನಲಾಗಿದೆ.
ನನಗೂ ಆತನಿಗೂ ಸಂಬಂಧವಿಲ್ಲ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೀರಣ್ಣ ಮತ್ತಿಕಟ್ಟಿ ಈ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ನನಗೂ ಆತನಿಗೂ ಕಳೆದ 6 ತಿಂಗಳಿನಿಂದ ಯಾವುದೇ ಸಂಪರ್ಕವಿಲ್ಲ. ನಾನು ಹೇಗೆ ಎನ್ನುವುದು ಜನರಿಗೆ ಗೊತ್ತಿದೆ ಎಂದರು.