Advertisement

ಅಮೆರಿಕ ಟೆನಿಸಿಗರಿಗೆ ಕರಾಳ ದಿನ

12:17 PM Jan 16, 2018 | Team Udayavani |

ಮೆಲ್ಬರ್ನ್: ವರ್ಷಾರಂಭದ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿ ಅಚ್ಚರಿ ಹಾಗೂ ಆಘಾತಕಾರಿ ಆರಂಭ ಪಡೆದಿದೆ. ಅಮೆರಿಕದ ಆಟಗಾರರು ಸಾಲು ಸಾಲು ಸೋಲುಂಡು ಹೊರಬಿದ್ದಿದ್ದಾರೆ!

Advertisement

ಕಳೆದ ವರ್ಷದ ಫೈನಲಿಸ್ಟ್‌ ವೀನಸ್‌ ವಿಲಿಯಮ್ಸ್‌ ಮತ್ತು ಯುಎಸ್‌ ಓಪನ್‌ ಚಾಂಪಿಯನ್‌ ಸ್ಲೋನ್‌ ಸ್ಟೀಫ‌ನ್ಸ್‌ ಮೊದಲ ಸುತ್ತಿನಲ್ಲೇ ಸೋತು ಕೂಟದಿಂದ ನಿರ್ಗಮಿಸಿ ಅಮೆರಿಕದ ಅಭಿಮಾನಿಗಳನ್ನು ನಿರಾಸೆಯಲ್ಲಿ ಕೆಡವಿದ್ದಾರೆ. ಮೊದಲೇ ಹಾಲಿ ಚಾಂಪಿಯನ್‌ ಸೆರೆನಾ ವಿಲಿಯಮ್ಸ್‌ ಗೈರಲ್ಲಿ ಕಳೆಗುಂದಿದ ವನಿತಾ ಸಿಂಗಲ್ಸ್‌ ಸಮರವೀಗ ಈ ಇಬ್ಬರು ಸ್ಟಾರ್‌ ಆಟಗಾರ್ತಿಯರ ಸೋಲಿನಿಂದ ತನ್ನ ಆಕರ್ಷಣೆಯನ್ನು ಇನ್ನಷ್ಟು ಕಳೆದುಕೊಂಡಿದೆ.

ಪುರುಷರ ಸಿಂಗಲ್ಸ್‌ನಲ್ಲಿ ರಫೆಲ್‌ ನಡಾಲ್‌, ಗ್ರಿಗರ್‌ ಡಿಮಿಟ್ರೋವ್‌, ನಿಕ್‌ ಕಿರ್ಗಿಯೋಸ್‌, ಕೈಲ್‌ ಎಡ್ಮಂಡ್‌ ಮೊದಲ ಸುತ್ತನ್ನು ಯಶಸ್ವಿಯಾಗಿ ದಾಟಿದ್ದಾರೆ. 11ನೇ ಶ್ರೇಯಾಂಕದ ದಕ್ಷಿಣ ಆಫ್ರಿಕಾದ ಆಟಗಾರ ಕೆವಿನ್‌ ಆ್ಯಂಡರ್ಸನ್‌ ಸೋತವರಲ್ಲಿ ಪ್ರಮುಖರು.

ಅಮೆರಿಕಕ್ಕೆ ಸೋಲಿನ ದಿನ 
ಸೋಮವಾರದ ವನಿತಾ ಸಿಂಗಲ್ಸ್‌ ಮೊದಲ ಸುತ್ತಿನ ಕದನದಲ್ಲಿ ಸ್ವಿಜರ್‌ಲ್ಯಾಂಡಿನ 20ರ ಹರೆಯದ ಆಟಗಾರ್ತಿ ಬೆಲಿಂಡಾ ಬೆನ್ಸಿಕ್‌ 6-3, 7-5ರಿಂದ ವೀನಸ್‌ ವಿಲಿಯಮ್ಸ್‌ಗೆ ಸೋಲುಣಿ ಸಿದರು. ಇದು ಬೆನ್ಸಿಕ್‌ ವಿರುದ್ಧ ಆಡಿದ 5 ಪಂದ್ಯಗಳಲ್ಲಿ ವೀನಸ್‌ ಎದುರಿಸಿದ ಮೊದಲ ಸೋಲಿನ ಆಘಾತ. ಕಳೆದ ವರ್ಷ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ ತನಕ ದಾಪುಗಾಲಿಕ್ಕಿದ ವೀನಸ್‌, ಅಲ್ಲಿ ತಂಗಿ ಸೆರೆನಾ ವಿರುದ್ಧ ಸೋತು ಪ್ರಶಸ್ತಿ ವಂಚಿತರಾಗಿದ್ದರು. 

13ನೇ ಶ್ರೇಯಾಂಕದ ಸ್ಲೋನ್‌ ಸ್ಟೀಫ‌ನ್ಸ್‌ ಅವರನ್ನು ಚೀನದ ಜಾಂಗ್‌ ಶುಯಿ ಭಾರೀ ಹೋರಾಟದ ಬಳಿಕ 2-6, 7-6 (2), 6-2 ಅಂತರದಿಂದ ಮಣಿಸಿದರು. ಸ್ಟೀಫ‌ನ್ಸ್‌ ಪಾದದ ನೋವಿನಿಂದ ಕಳೆದ ವರ್ಷ ಮೆಲ್ಬರ್ನ್ ಕೂಟ ದಿಂದ ದೂರ ಉಳಿದಿದ್ದರು. ಬಳಿಕ ಮ್ಯಾಡಿಸನ್‌ ಕೇಯ್ಸ ಅವರನ್ನು ಮಣಿಸಿ ಯುಎಸ್‌ ಓಪನ್‌ ಚಾಂಪಿಯನ್‌ ಆಗಿ ಮೆರೆದರೂ ಅನಂತರ 8 ಪಂದ್ಯಗಳಲ್ಲಿ ಸೋತು ತೀವ್ರ ನಿರಾಸೆ ಮೂಡಿಸಿದ್ದಾರೆ.

Advertisement

“ಸ್ಲೋನ್‌ ಸ್ಟೀಫ‌ನ್ಸ್‌ ಯುಎಸ್‌ ಓಪನ್‌ ಚಾಂಪಿ ಯನ್‌. ಅತ್ಯುತ್ತಮ ಆಟವನ್ನೇ ಆಡಿದ್ದಾರೆ. ನಿಜಕ್ಕೂ ಗ್ರೇಟ್‌ ಪ್ಲೇಯರ್‌. ಆಕೆಯನ್ನು ಸೋಲಿ ಸಲು ನಾನೆಷ್ಟು ಕಷ್ಟಪಟ್ಟೆ ಎಂಬುದು ನನಗಷ್ಟೇ ಗೊತ್ತು…’ ಎಂದು ಪ್ರತಿಕ್ರಿಯಿಸಿದ್ದಾರೆ ಜಾಂಗ್‌ ಶುಯಿ.  ಕೇವಲ ವೀನಸ್‌ ವಿಲಿಯಮ್ಸ್‌, ಸ್ಲೋನ್‌ ಸ್ಟೀಫ‌ನ್ಸ್‌ ಮಾತ್ರವಲ್ಲ, ಅಮೆರಿಕದ 7 ಆಟಗಾರರು ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ್ದಾರೆ. 10ನೇ ಶ್ರೇಯಾಂಕದ ಕೊಕೊ ವಾಂಡೆವೇಗ್‌, ಈ ವರ್ಷದ ನೂತನ ಆಟಗಾರ್ತಿ ಸಿಸಿ ಬೆಲ್ಲಿಸ್‌, ಸೋಫಿಯಾ ಕೆನಿನ್‌, ಅಲಿಸನ್‌ ರಿಸ್ಕೆ, ಕೂಡ ಈ ಸಾಲಿನಲ್ಲಿದ್ದಾರೆ. ವಾಂಡೇವೇಗ್‌ ಅವರನ್ನು ಹಂಗೇರಿಯ ಟೈಮಿ ಬಬೋಸ್‌ 7-6 (7-4), 6-2 ಅಂತರದಿಂದ ಮಣಿಸಿದರು.

ಪುರುಷರ ಸಿಂಗಲ್ಸ್‌ನಲ್ಲಿ ಅಮೆರಿಕದ ಬಿಗ್‌ ಸರ್ವರ್‌ ಖ್ಯಾತಿಯ ಜಾನ್‌ ಇಸ್ನರ್‌ ಕೂಡ ಹೊರಬಿದ್ದಿದ್ದಾರೆ. ಜಾನ್‌ ಇಸ್ನರ್‌ ಅವರನ್ನು ಆಸ್ಟ್ರೇಲಿಯದ ಮ್ಯಾಥ್ಯೂ ಎಬೆನ್‌ 6-4, 3-6, 6-3, 6-3ರಿಂದ ಹಿಮ್ಮೆಟ್ಟಿಸಿದರು.

ವನಿತಾ ಸಿಂಗಲ್ಸ್‌ ವಿಜೇತರು
ವನಿತಾ ಸಿಂಗಲ್ಸ್‌ನ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಜೆಲೆನಾ ಒಸ್ಟಾಪೆಂಕೊ, ಕ್ಯಾರೋಲಿನ್‌ ವೋಜ್ನಿಯಾಕಿ, ಮೋನಿಕಾ ಪಿಗ್‌, ಕಯಾ ಕನೆಪಿ, ಎಲೆನಾ ಸ್ವಿಟೋಲಿನಾ ಮೊದಲಾದ ತಾರಾ ಆಟಗಾರ್ತಿಯರು ಗೆಲುವಿನ ಸಂಭ್ರಮ ಆಚರಿಸಿದ್ದಾರೆ. ಫ್ರೆಂಚ್‌ ಓಪನ್‌ ಚಾಂಪಿಯನ್‌ ಜೆಲೆನಾ ಒಸ್ಟಾಪೆಂಕೊ 37ರ ಹರೆಯದ ಫ್ರಾನ್ಸೆಸ್ಕಾ ಶಿವೋನ್‌ ವಿರುದ್ಧ 6-1, 6-4ರಿಂದ ಗೆದ್ದು ಬಂದರು. ಶಿವೋನ್‌ 2010ರ ಫ್ರೆಂಚ್‌ ಚಾಂಪಿಯನ್‌ ಆಗಿದ್ದರು. 

ಪೋರ್ಟೊರಿಕೋದ ಮೋನಿಕಾ ಪಿಗ್‌ 4-6, 7-6 (8-6), 6-4ರಿಂದ ಆಸ್ಟ್ರೇಲಿಯದ ಸಮಂತಾ ಸ್ಟೋಸರ್‌ ಸದ್ದಡಗಿಸಿದರು. ಜರ್ಮನಿಯ ಜೂಲಿಯಾ ಜಾಜ್‌ ಅಮೆರಿದದ ಸೋಫಿಯಾ ಕೆನಿನ್‌ಗೆ 6-4, 6-4 ಅಂತರದಿಂದ ಆಘಾತವಿಕ್ಕಿದರು. ಕಯಾ ಕನೆಪಿ 6-2, 6-2ರಿಂದ ಡೊಮಿನಿಕಾ ಸಿಬುಲ್ಕೋವಾ ವಿರುದ್ಧ ಜಯ ಸಾಧಿಸಿದರು. ಎಲೆನಾ ಸ್ವಿಟೋಲಿನಾ ಸರ್ಬಿಯಾದ ಐವಾನಾ ಜೊರೋವಿಕ್‌ ವಿರುದ್ಧ 6-3, 6-2ರ ಜಯ ಒಲಿಸಿಕೊಂಡರು.

ದ್ವಿತೀಯ ಸುತ್ತಿಗೆ ನಡಾಲ್‌
ಅಗ್ರ ಶ್ರೇಯಾಂಕದ ರಫೆಲ್‌ ನಡಾಲ್‌ 81ನೇ ರ್‍ಯಾಂಕಿಂಗ್‌ ಆಟಗಾರ, ಡೊಮಿನಿಕಾದ ವಿಕ್ಟರ್‌ ಎಸ್ಟ್ರೆಲ್ಲ ಬರ್ಗೋಸ್‌ ಅವರನ್ನು 94 ನಿಮಿಷಗಳ ಕಾದಾಟದ ಬಳಿಕ 6-1, 6-1, 6-1 ಅಂತರದಿಂದ ಮಣಿಸಿ ಆಸ್ಟ್ರೇಲಿಯನ್‌ ಓಪನ್‌ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ. ಬಲ್ಗೇರಿಯಾದ ಗ್ರಿಗರ್‌ ಡಿಮಿಟ್ರೋವ್‌ ಆಸ್ಟ್ರಿಯಾದ ಡೆನ್ನಿಸ್‌ ನೊವಾಕ್‌ ಅವರನ್ನು 6-3, 6-2, 6-1ರಿಂದ; ಫ್ರಾನ್ಸ್‌ನ ಜೋ ವಿಲ್‌ಫ್ರೆಡ್‌ ಸೋಂಗ ಅಮೆರಿಕದ ಕೆವಿನ್‌ ಕಿಂಗ್‌ ಅವರನ್ನು 6-4, 6-4, 6-1ರಿಂದ; ಆಸ್ಟ್ರೇಲಿಯದ ನಿಕ್‌ ಕಿರ್ಗಿಯೋಸ್‌ ಬ್ರಝಿಲ್‌ನ ರೊಜೇರಿಯೊ ಡುಟ್ರ ಸಿಲ್ವ ಅವರನ್ನು 6-1, 6-2, 6-4ರಿಂದ; ಜಪಾನಿನ ಯಿಚಿ ಸುಗಿಟ ಅಮರಿಕದ ಜಾಕ್‌ ಸಾಕ್‌ ಅವರನ್ನು 6-1, 7-6 (7-4), 5-7, 6-3ರಿಂದ; ಜಪಾನಿನ ಮತ್ತೂಬ್ಬ ಆಟಗಾರ ಯೊಶಿಹಿಟೊ ನಿಶಿಯೋಕ ಜರ್ಮನಿಯ ಫಿಲಿಪ್‌ ಕೋಹ್ಲ ಶ್ರೀಬರ್‌ ಅವರನ್ನು 6-3, 2-6, 6-0, 1-6, 6-2 ಅಂತರದಿಂದ ಸೋಲಿಸಿ ಮೊದಲ ಸುತ್ತು ದಾಟಿದ್ದಾರೆ.

ಯೂಕಿ ಭಾಂಬ್ರಿ ಪರಾಭವ
ಪುರುಷರ ಸಿಂಗಲ್ಸ್‌ನಲ್ಲಿ ಕಣಕ್ಕಿಳಿದ ಭಾರತದ ಏಕೈಕ ಆಟಗಾರ ಯೂಕಿ ಭಾಂಬ್ರಿ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿ ದ್ದಾರೆ. ಅವರನ್ನು ಸೈಪ್ರಸ್‌ನ ಮಾರ್ಕೋಸ್‌ ಬಗ್ಧಾಟಿಸ್‌ 7-6 (7-4), 6-4, 6-3 ಅಂತರದಿಂದ ಪರಾಭವಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next