ಚಾಲುಕ್ಯರು, ಹೊಯ್ಸಳರು ಹೇಗೆ ನೆನಪಿನಲ್ಲಿ ಉಳಿಯುವಂಥ ದೇಗುಲಗಳನ್ನು ಕೆತ್ತಿ ಹೋಗಿದ್ದಾರೋ, ಹಾಗೆಯೇ ಮಾಂಡಲೀಕರು ಮತ್ತು ಪಾಳೇಗಾರರು ಕೂಡ ಕರುನಾಡಿನ ವಾಸ್ತುಶಿಲ್ಪವನ್ನು ಶ್ರೀಮಂತಿಕೆಯ ಅಟ್ಟಕ್ಕೇರಿಸುವಲ್ಲಿ ಶ್ರಮಿಸಿದ್ದಾರೆ. ಚಿಕ್ಕಬಳ್ಳಾಪುರದ ಪಟ್ರೇನಹಳ್ಳಿಯ ವೇಣುಗೋಪಾಲ ಸ್ವಾಮಿ ದೇಗುಲ, ಅಂಥ ವಾಸ್ತುವಿಸ್ಮಯಕ್ಕೆ ಪ್ರಮುಖ ಸಾಕ್ಷಿ.
ಇದು ವಿಜಯನಗರ ಶೈಲಿಯಲ್ಲಿ ನಿರ್ಮಾಣವಾದ ದೇವರ ಗುಡಿ. ಇಲ್ಲಿನ ವಾಸ್ತುಶಿಲ್ಪದ ರಚನೆಯನ್ನು ಗಮನಿಸಿದರೆ, ಹತ್ತಿರದ ಲೇಪಾಕ್ಷಿ ದೇವಾಲಯ ನಿರ್ಮಾಣವಾದ ಕಾಲದಲ್ಲಿ ಇದನ್ನು ನಿರ್ಮಿಸಿರಬಹುದು ಎಂಬ ಊಹೆ ಬಲಗೊಳ್ಳುತ್ತದೆ. ದೇವಾಲಯವು ಗರ್ಭಗುಡಿ, ಅಂತರಾಳ, ನವರಂಗ, ಮುಖಮಂಟಪ ಹಾಗೂ ಪ್ರವೇಶದ್ವಾರ ಹೊಂದಿದ್ದು, ಗರ್ಭಗುಡಿಯಲ್ಲಿ ಸುಂದರವಾದ ವೇಣುಗೋಪಾಲನ ಮೂರ್ತಿ ಇದೆ.
ಮೂರ್ತಿಯ ಅಕ್ಕಪಕ್ಕದಲ್ಲಿ ರುಕ್ಮಿಣಿ ಹಾಗೂ ಸತ್ಯಭಾಮ ಇದ್ದಾರೆ. ವೇಣುಗೋಪಾಲನ ಮೂರ್ತಿ ಶಂಖ ಚಕ್ರಧಾರಿಯಾಗಿದ್ದು, ಕೊಳಲನ್ನು ನುಡಿಸುವಂತೆ ಇದೆ. ಕೆಳಭಾಗದಲ್ಲಿ ಗೋವುಗಳು ಕೊಳಲಿನ ಮಾಧುರ್ಯಕ್ಕೆ ಮನಸೋತು ಆಲಿಸುತ್ತಿರುವ ದೃಶ್ಯ ರೋಮಾಂಚನ. ನವರಂಗದಲ್ಲಿ ನಾಲ್ಕು ಉಬ್ಬು ಶಿಲ್ಪದ ಕೆತ್ತನೆ ಹೊಂದಿರುವ ಕಂಬಗಳಿದ್ದು, ಹಲವು ಪೌರಾಣಿಕ ಉಬ್ಬು ಶಿಲ್ಪಗಳ ಕೆತ್ತನೆ ಇದೆ.
ಕಂಬಗಳ ಮೇಲಿನ ಕಮಲ ಶೈಲಿಯ ಭೋದಿಗೆಗಳು, ವಿಜಯನಗರ ಶಿಲ್ಪಶೈಲಿಗೆ ಅತ್ಯಂತ ಸಮೀಪದ ಹೋಲಿಕೆಯಿದೆ. ಮುಖಮಂಟಪದಲ್ಲಿನ ನಾಲ್ಕು ಕಂಬಗಳು ಸಂಯುಕ್ತ ಶೈಲಿಯಲ್ಲಿವೆ. ಮಂಟಪದಲ್ಲಿ ಸುಮಾರು 20 ಕಂಬಗಳಿದ್ದು, ಸುಂದರ ಪ್ರಾಣಿ-ಪಕ್ಷಿಗಳ, ದೇವತೆಗಳ ಉಬ್ಬು ಶಿಲ್ಪ ಕೆತ್ತನೆ ಇದೆ.
ಇಲ್ಲಿರುವ ಭುವನೇಶ್ವರಿ ಶಿಲ್ಪ ಸರಳವಾಗಿದ್ದರೂ ಅದರಲ್ಲಿನ ಕೆಳಭಾಗದ ಪಟ್ಟಿಗಳಲ್ಲಿ ರಾಮ ಮತ್ತು ಕೃಷ್ಣನ ಲೀಲೆಗಳಿಗೆ ಸಂಬಂಧಿಸಿದ ಸುಂದರ ಮೂರ್ತಿಗಳನ್ನು 12 ಭಾಗಗಳಲ್ಲಿ ಕೆತ್ತಲಾಗಿದೆ. ರಾಮ- ಸೀತಾ ಕಲ್ಯಾಣ, ಕೃಷ್ಣನ ಲೀಲೆಗಳ ಕಥೆಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ಪ್ರವೇಶದ್ವಾರದ ಆಕರ್ಷಣೆಯೂ ಅಷ್ಟೇ ಚೆಂದ. ಇದರ ಇಕ್ಕೆಲಗಳಲ್ಲಿ ಶಿಲಾಬಾಲಿಕೆಯರ ಚಿತ್ರಣವಿದೆ.
ಇದು ಸಮೀಪದ ನಂದಿ ಹಾಗೂ ರಂಗಸ್ಥಳದ ಮೂಲ ಪ್ರವೇಶ ದ್ವಾರವನ್ನು ಹೋಲುವುದರಿಂದ, ಈ ದೇಗುಲದ ನಿರ್ಮಾಣ ಕಾಲವು ಇದಕ್ಕೆ ಹೊಂದಿಕೊಂಡಿರಬಹುದು. ದೇವಾಲಯದ ಪ್ರಾಂಗಣ ವಿಶಾಲವಾಗಿದ್ದು, ನಂದಿಯಂತೆ ಮಂಟಪಗಳನ್ನು ನಿರ್ಮಿಸಲಾಗಿದ್ದು, ಅದು ಅಪೂರ್ಣವಾಗಿದೆ. ಪಟ್ರೇನಹಳ್ಳಿಯ ದೇವಸ್ಥಾನ ವಾಸ್ತುಶಿಲ್ಪಕ್ಕೆ ವಿಶಿಷ್ಟ ಮಾದರಿಯೇ ಆದರೂ, ಪ್ರವಾಸಿಗರಿಂದ ದೂರ ಉಳಿದಿರುವುದು ಅಚ್ಚರಿಯೇ ಸರಿ.
ದರುಶನಕೆ ದಾರಿ…: ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟ ದಾರಿಯಲ್ಲಿ ಸುಮಾರು 3 ಕಿ.ಮೀ. ದೂರದಲ್ಲಿರುವ ಈ ದೇವಾಲಯ, ಹೆದ್ದಾರಿ ಬದಿಯಲ್ಲಿಯೇ ಇದ್ದು, ಸುಲಭವಾಗಿ ತಲುಪಬಹುದು.
* ಶ್ರೀನಿವಾಸ ಮೂರ್ತಿ ಎನ್.ಎಸ್.