ಸುಳ್ಯ: ಬಹು ನಿರೀಕ್ಷೆಯ ಸುಳ್ಯ ನಗರಕ್ಕೆ ಕುಡಿಯುವ ನೀರು ಸರಬರಾಜು ಯೋಜನೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ಅದಕ್ಕಾಗಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ 17 ಕೋಟಿ ರೂ. ಮಂಜೂರಾಗಿದ್ದು, ಡಿ. 9ರಂದು ಕಾಮಗಾರಿಗೆ ಚಾಲನೆ ದೊರೆಯಲಿದೆ.
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಲವು ವರ್ಷಗಳಿಂದ ಜೀವಂತವಾಗಿದೆ. ಪ್ರಸ್ತುತ ಕೊಳವೆಬಾವಿ, ನದಿಯಿಂದ ಜಾಕ್ ವೆಲ್ ಮೂಲಕ ಶುದ್ಧೀಕರಿಸಿ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ ಬಹುತೇಕ ಸಂದರ್ಭದಲ್ಲಿ ನೀರು ಪೂರೈಕೆ ಸಮರ್ಪಕವಾಗಿಲ್ಲ ಎಂಬ ದೂರುಗಳು ಕೇಳಿಬರುತ್ತಿತ್ತು. ಇಲ್ಲಿನ ನೀರಿನ ಸಮಸ್ಯೆ ದೊಡ್ಡಮಟ್ಟದಲ್ಲಿ ಸುದ್ದಿಯೂ ಆಗಿತ್ತು.
ಅನುದಾನ ಮಂಜೂರು
ಇದೀಗ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಬಹು ವರ್ಷಗಳ ಬೇಡಿಕೆ ಈಡೇರುವ ಹಂತದಲ್ಲಿದೆ. ಸುಳ್ಯ ನಗರಕ್ಕೆ ಬೇಸಗೆ ಕಾಲದಲ್ಲಿ ನೀರಿನ ಅಭಾವ ಇರುವುದರಿಂದ ಹಾಗೂ ನೀರಾವರಿ ಉದ್ದೇಶದಿಂದ ಸುಳ್ಯ ಸಮೀಪ ಹರಿಯುತ್ತಿರುವ ಪಯಸ್ವಿನಿ ಹೊಳೆಗೆ ಕಲ್ಲುಮುಟ್ಲು ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲು ಸಣ್ಣ ನೀರಾವರಿ ಇಲಾಖೆಯಿಂದ 17 ಕೋಟಿ ರೂ. ಅನುದಾನ ಮಂಜೂರುಗೊಂಡು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಜಯಶೀಲ ನಾರಾಯಣ ಶೆಟ್ಟಿ ಎಂಬವರು ಕಾಮಗಾರಿ ನಿರ್ವಹಿಸಲಿದ್ದಾರೆ. ಮುಂದಿನ 11 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಆದೇಶದಲ್ಲಿ ಸೂಚಿಸಲಾಗಿದೆ. 9.34 ಮಿಲಿಯನ್ ಕ್ಯೂಬಿಕ್ ಅಡಿ ನೀರಿನ ಸಂಗ್ರಹ ಡ್ಯಾಂನಲ್ಲಿ ಇರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂದುಕೊಂಡಂತೆ ಕಾಮಗಾರಿ ನಡೆದರೆ ಮುಂದಿನ ವರ್ಷದಿಂದ ಸುಳ್ಯ ನಗರಕ್ಕೆ ಸಮರ್ಪಕ ಕುಡಿಯುವ ನೀರಿನ ಸರಬರಾಜು ಆಗಲಿದೆ.
ಇಂದು ಚಾಲನೆ
ಕಲ್ಲಮುಟ್ಲುವಿನಲ್ಲಿ ಮಂಜೂರಾದ 17 ಕೋಟಿ ರೂ. ವೆಚ್ಚದ ಕಿಂಡಿ ಅಣೆಕಟ್ಟು ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಡಿ. 9ರಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಬೆಳಗ್ಗೆ ಶಂಕುಸ್ಥಾಪನೆ ನೆರವೇರಿಸುವರು. ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಅಧ್ಯಕ್ಷತೆ ವಹಿಸುವರು. ಗಣ್ಯರು ಉಪಸ್ಥಿತರಿರುವರು.