Advertisement

Snake Bite: ವಿಷಕಾರಿ ಹಾವು ಕಡಿತ: ಎಚ್ಚರಿಕೆಯಿಂದಿರಿ! ಸಮಾಧಾನವಾಗಿರಿ!

04:12 PM Aug 30, 2023 | Team Udayavani |

ನಮ್ಮ ದೇಶವು ಹಲವು ಪ್ರಭೇದಗಳ ಹಾವುಗಳ ಆವಾಸಸ್ಥಾನವಾಗಿದೆ. ಇವುಗಳಲ್ಲಿ ಕೆಲವು ಅತ್ಯಂತ ವಿಷಕಾರಿಯಾಗಿದ್ದು, ಮನುಷ್ಯನಿಗೆ ಪ್ರಾಣಾಂತಿಕವಾಗಿವೆ. ವಿಷಕಾರಿ ಹಾವುಗಳ ಕಡಿತ ಭಾರತದಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಒಂದು ಗಂಭೀರ ಸವಾಲಾಗಿದ್ದು, ಪ್ರತೀ ವರ್ಷ ಇದರಿಂದಾಗಿ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ. ಇತ್ತೀಚೆಗಿನ ಒಂದು ಅಧ್ಯಯನದ ಪ್ರಕಾರ, ಪ್ರತೀ ವರ್ಷ ವಿಷಕಾರಿ ಹಾವುಗಳ ಕಡಿತದಿಂದಾಗಿ ಸರಿಸುಮಾರು 58 ಸಾವಿರ ಮಂದಿ ಸಾವನ್ನಪ್ಪುತ್ತಾರೆ.

Advertisement

ಹಾವುಗಳ ಕಡಿತದಿಂದಾಗಿ ಆರೋಗ್ಯ ಸಮಸ್ಯೆ, ಪ್ರಾಣಾಪಾಯ ಉಂಟಾಗುವುದು ಗ್ರಾಮೀಣ ಪ್ರದೇಶಗಳು ಮತ್ತು ಕೃಷಿ ಪ್ರದೇಶಗಳಲ್ಲಿಯೇ ಹೆಚ್ಚು. ಹಾವುಗಳ ಆವಾಸ ಸ್ಥಾನಕ್ಕೆ ಈ ಪ್ರದೇಶಗಳು ಸಮೀಪದಲ್ಲಿರುವುದೇ ಇದಕ್ಕೆ ಕಾರಣ. ರೈತರು ಮತ್ತು ಕೃಷಿ ಕಾರ್ಮಿಕರು ಗದ್ದೆ, ತೋಟಗಳಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಅಥವಾ ಕೃಷಿ ಉಪಕರಣಗಳಿಂದ ಕೆಲಸ ಮಾಡುತ್ತಿರುವಾಗ ಹಾವುಗಳ ಜತೆಗೆ ನೇರ ಸಂಪರ್ಕಕ್ಕೆ ಬರುವ ಕಾರಣ ಕೃಷಿ ಚಟುವಟಿಕೆಗಳ ಸಂದರ್ಭದಲ್ಲಿಯೇ ವಿಷಕಾರಿ ಹಾವುಗಳ ಕಡಿತ ಉಂಟಾಗುವುದು ಹೆಚ್ಚು.

ಹಾವುಗಳ ಕಡಿತಕ್ಕೆ ತುತ್ತಾಗುವ ಕೃಷಿ ಚಟುವಟಿಕೆಗಳು ಹೆಚ್ಚಿರುವುದರ ಜತೆಗೆ ಗ್ರಾಮೀಣ ಕರ್ನಾಟಕವು ಹಲವು ಪ್ರಭೇದಗಳ ಹಾವುಗಳನ್ನು ಹೊಂದಿರುವ ಕಾರಣ ಈ ಭಾಗದಲ್ಲಿ ವಿಷಕಾರಿ ಹಾವುಗಳ ಕಡಿತ ಪ್ರಕರಣಗಳು ವರದಿಯಾಗುವುದು ಅಧಿಕ. ಹಾವು ಕಡಿತದ ಪ್ರಕರಣಗಳು ಮಳೆಗಾಲದ ಅವಧಿ (ಜೂನ್‌ನಿಂದ ಸೆಪ್ಟಂಬರ್‌)ಯಲ್ಲಿ ವರದಿಯಾಗುವುದು ಹೆಚ್ಚು.

ಬಹುತೇಕ ಹಾವು ಕಡಿತಗಳು ಮಾರಣಾಂತಿಕವಲ್ಲ ಮತ್ತು ಸರಿಯಾದ ವೈದ್ಯಕೀಯ ಆರೈಕೆಯಿಂದ ಚಿಕಿತ್ಸೆ ನೀಡಬಹುದು. ಆದರೆ ಈ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಅರಿವಿನ ಕೊರತೆ ಮತ್ತು ಸರಿಯಾದ ವೈದ್ಯಕೀಯ ಚಿಕಿತ್ಸೆ ಲಭ್ಯವಿಲ್ಲದ ಕಾರಣ ಪ್ರಾಣಾಪಾಯಗಳು ಸಂಭವಿಸುತ್ತವೆ. ವೈವಿಧ್ಯ ಪರಿಸರವನ್ನು ಹೊಂದಿರುವ ನಮ್ಮ ದೇಶದಲ್ಲಿ ಹಲವು ಪ್ರಭೇದಗಳ ವಿಷಕಾರಿ ಹಾವುಗಳು ಕಂಡುಬರುತ್ತವೆ. ನಾಗರಹಾವು, ಮಂಡಲ ಹಾವು, ಗರಗಸ ಮಂಡಲ, ಕಟ್ಟು ಹಾವು, ಕೊಳಕು ಮಂಡಲ ಇವುಗಳಲ್ಲಿ ಕೆಲವು.

ಯಾವ ಜಾತಿಯ ಹಾವು ಕಡಿದಿದೆ ಮತ್ತು ಎಷ್ಟು ವಿಷ ದೇಹವನ್ನು ಸೇರಿದೆ ಎಂಬುದನ್ನು ಆಧರಿಸಿ ಹಾವು ಕಡಿತದಿಂದ ಉಂಟಾಗುವ ಅನಾರೋಗ್ಯ ಲಕ್ಷಣಗಳು ಬದಲಾಗುತ್ತವೆ. ಸಾಮಾನ್ಯವಾಗಿ ಹಾವು ಕಡಿತಕ್ಕೆ ಒಳಗಾದವರು ತತ್‌ಕ್ಷಣದ ನೋವಿಗೆ ತುತ್ತಾಗುತ್ತಾರೆ ಮತ್ತು ಹಾವು ಕಡಿದ ದೇಹದ ಭಾಗದಲ್ಲಿ ಬಾವು ಕಾಣಿಸಿಕೊಳ್ಳುತ್ತದೆ.

Advertisement

ನೋವಿನ ತೀವ್ರತೆಯು ಕ್ಷಿಪ್ರವಾಗಿ ಹೆಚ್ಚಬಹುದಾಗಿದೆ ಮತ್ತು ದೇಹದ ಇತರ ಭಾಗಗಳಿಗೂ ವ್ಯಾಪಿಸಬಹುದಾಗಿದೆ. ರಕ್ತಕಲೆ, ಕೆಂಪಾಗುವುದು ಮತ್ತು ಗುಳ್ಳೆಗಳು ಕೂಡ ಕಾಣಿಸಿಕೊಳ್ಳಬಹುದು. ಹಾವಿನ ವಿಷ ದೇಹದ ಪ್ರಮುಖ ಅಂಗಗಳಿಗೆ ವ್ಯಾಪಿಸಿದರೆ ಅಥವಾ ದೇಹದ ರಕ್ತ ಹೆಪ್ಪುಗಟ್ಟುವ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಿದರೆ ಸಂಕೀರ್ಣ ಸಮಸ್ಯೆಗಳು ತಲೆದೋರುತ್ತವೆ. ದೇಹ ವ್ಯವಸ್ಥೆಗೆ ಸಂಬಂಧಿಸಿದ ಲಕ್ಷಣಗಳೆಂದರೆ ತಲೆ ತಿರುಗುವುದು, ಹೊಟ್ಟೆ ತೊಳೆಸುವುದು, ವಾಂತಿ, ಬೆವರುವುದು ಮತ್ತು ಉಸಿರಾಟ ಕಷ್ಟವಾಗುವುದು. ಗರಗಸ ಮಂಡಲದಂತಹ ಕೆಲವು ವಿಷದ ಹಾವುಗಳ ಕಡಿತದಿಂದಾಗಿ ತೀವ್ರ ತರಹದ ರಕ್ತಸ್ರಾವ, ಮೂತ್ರಪಿಂಡಗಳಿಗೆ ಹಾನಿ ಉಂಟಾಗಬಹುದಾಗಿದ್ದು, ಇವು ಪ್ರಾಣಾಂತಿಕ ಸಮಸ್ಯೆಗಳಾಗಿರುತ್ತವೆ.

ಎಲ್ಲ ಹಾವುಗಳ ಕಡಿತಗಳು ಕೂಡ ವಿಷಕಾರಿಯಲ್ಲ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು. ಆದರೆ ಹಾವಿನ ಕಡಿತ ವಿಷಕಾರಿಯಲ್ಲ ಎಂಬುದು ಖಚಿತವಾಗುವವರೆಗೂ ಎಚ್ಚರಿಕೆಯಿಂದ ಇರುವುದು ಹಾಗೂ ಕಡಿತವಾದ ತತ್‌ಕ್ಷಣ ವೈದ್ಯಕೀಯ ಆರೈಕೆ ಪಡೆಯುವುದು ಯಾವಾಗಲೂ ಸುರಕ್ಷಿತ. ವೈದ್ಯಕೀಯ ಚಿಕಿತ್ಸೆ ಪಡೆಯುವುದು ವಿಳಂಬವಾದರೆ ಸಂಕೀಣ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಅಧಿಕ ಮತ್ತು ಪರಿಣಾಮ ಗಂಭೀರವಾಗಿರುತ್ತದೆ.

ಹಾವು ಕಡಿತಕ್ಕೆ ಒಳಗಾದರೆ ಏನು ಮಾಡಬಾರದು? ­

ಹಾವನ್ನು ಹಿಡಿಯಲು ಅಥವಾ ಕೊಲ್ಲಲು ಪ್ರಯತ್ನಿಸಬೇಡಿ. ಇದರಿಂದ ಮತ್ತೆ ಹಾವಿನ ಕಡಿತಕ್ಕೆ ಒಳಗಾಗಬಹುದು. ಇದಕ್ಕೆ ಬದಲಾಗಿ ಹಾವಿನ ಗುಣಲಕ್ಷಣಗಳನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿ ಅಥವಾ ಸುರಕ್ಷಿತವಾಗಿ ಅದರ ಫೊಟೊ ತೆಗೆಯಲು ಸಾಧ್ಯವಾದರೆ ತೆಗೆಯಿರಿ. ­

ಬಟ್ಟೆ ಅಥವಾ ಇನ್ಯಾವುದೇ ರೀತಿಯಿಂದ ಕಟ್ಟು ಕಟ್ಟಬೇಡಿ.

ಚಾಕು/ಹರಿತವಾದ ಆಯುಧದಿಂದ ಗಾಯದ ಭಾಗವನ್ನು ಸೀಳಬೇಡಿ. ­

ವಿಷವನ್ನು ಬಾಯಿಯಿಂದ ಹೀರಿ ತೆಗೆಯಲು ಪ್ರಯತ್ನಿಸಬೇಡಿ. ­

ಸಾಂಪ್ರದಾಯಿಕ/ನಾಟಿ ಚಿಕಿತ್ಸೆಗೆ ಮುಂದಾಗಬೇಡಿ. ­

ಮಂಜುಗಡ್ಡೆ ಇರಿಸಬೇಡಿ.

ನೋವು ನಿವಾರಕವಾಗಿ ಆಲ್ಕೊಹಾಲ್‌ ಹಾಕಬಾರದು.

­ ಕೆಫಿನ್‌ಯುಕ್ತ ಪಾನೀಯಗಳನ್ನು ಕುಡಿಯಬಾರದು.

ಹಾವು ಕಡಿತಕ್ಕೆ ತುತ್ತಾದರೆ ಏನು ಮಾಡಬೇಕು?

ಗಾಬರಿಗೊಳ್ಳದೆ ಸಮಾಧಾನದಿಂದ ಇರಬೇಕು ಮತ್ತು ಹಾವು ಕಡಿತಕ್ಕೀಡಾದ ಕಾಲು/ಕೈ/ದೇಹಭಾಗವನ್ನು ನಿಶ್ಚಲವಾಗಿ ಇರಿಸುವ ಮೂಲಕ ವಿಷ ಹರಡುವುದು ನಿಧಾನವಾಗುವಂತೆ ಮಾಡಬೇಕು. ­

ಹಾವು ಕಡಿತಕ್ಕೀಡಾದ ಸ್ಥಳದ ಸಮೀಪ ರಕ್ತ ಪರಿಚಲನೆಗೆ ತಡೆಯಾಗಬಲ್ಲ ಬಿಗಿಯಾದ ಉಡುಪು, ಆಭರಣ ಇದ್ದರೆ ತೆಗೆಯಬೇಕು. ­

ತತ್‌ಕ್ಷಣ ವೈದ್ಯಕೀಯ ಸಹಾಯ ಪಡೆಯಬೇಕು; ಹಾವು ಕಡಿತದ ಪ್ರಕರಣಗಳನ್ನು ನಿರ್ವಹಿಸುವ ಸೌಲಭ್ಯಗಳಿರುವ ಆಸ್ಪತ್ರೆ, ಕ್ಲಿನಿಕ್‌ ಆದರೆ ಉತ್ತಮ. ­

ತತ್‌ಕ್ಷಣ ಆಸ್ಪತ್ರೆಗೆ ಹೋಗುವುದು ಸಾಧ್ಯವಾಗದೆ ಇದ್ದರೆ ಪ್ರಥಮ ಚಿಕಿತ್ಸೆಯನ್ನು ನೀಡಬೇಕು. ­

ಹಾವು ಕಡಿದ ದೇಹಭಾಗ ಹೃದಯಕ್ಕಿಂತ ಕೆಳಗೆ ಇರುವಂತೆ ಕುಳಿತುಕೊಳ್ಳಬೇಕು ಅಥವಾ ಮಲಗಬೇಕು. ದೈಹಿಕ ಚಲನೆಯನ್ನು ಆದಷ್ಟು ಕಡಿಮೆ ಮಾಡಬೇಕು. ­

ಹಾವು ಕಡಿದ ಗಾಯವನ್ನು ಬಿಸಿ ನೀರಿನಲ್ಲಿ ಸಾಬೂನು ಉಪಯೋಗಿಸಿ ತೊಳೆಯಬೇಕು.

ಹಾವು ಕಡಿತ ಉಂಟಾದ ಸಂದರ್ಭದಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೇಗನೆ ಚಿಕಿತ್ಸೆ ಒದಗಿಸುವುದು ಹಲವು ಕಾರಣಗಳಿಂದ ಮುಖ್ಯವಾದುದು. ಮೊದಲನೆಯದಾಗಿ, ವೈದ್ಯಕೀಯ ಸಿಬಂದಿ ಯಾವ ಜಾತಿಯ ಹಾವು ಕಡಿದಿದೆ ಎಂಬುದನ್ನು ಸರಿಯಾಗಿ ಗುರುತಿಸಿ ಸೂಕ್ತವಾದ ಚಿಕಿತ್ಸೆಯನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಹಾವಿನ ವಿಷಕ್ಕೆ ನಿರ್ದಿಷ್ಟ ಪ್ರತಿವಿಷ ಪ್ರಯೋಗವು ಅವಶ್ಯವಾಗಬಹುದು ಮತ್ತು ವಿಷದ ದುಷ್ಪರಿಣಾಮಗಳನ್ನು ಎದುರಿಸಲು ಇದನ್ನು ಎಷ್ಟು ಸಾಧ್ಯವೋ ಅಷ್ಟು ಬೇಗನೆ ಪ್ರಯೋಗಿಸಬೇಕಾಗಿರುತ್ತದೆ.

ಎರಡನೆಯದಾಗಿ, ರೋಗಿಯ ಪ್ರಮುಖ ಅಂಗಾಂಗಗಳ ಕಾರ್ಯನಿರ್ವಹಣೆಯ ಮೇಲೆ ವೈದ್ಯಕೀಯ ಸಿಬಂದಿ ನಿಗಾ ಇರಿಸಬಹುದಾಗಿದೆ ಮತ್ತು ಪೂರಕ ಆರೈಕೆಯನ್ನು ಒದಗಿಸಲು ಸಾಧ್ಯವಾಗುತ್ತದೆಯಲ್ಲದೆ ತಲೆದೋರಬಹುದಾದ ಯಾವುದೇ ಸಮಸ್ಯೆಗಳನ್ನು ಚಿಕಿತ್ಸೆಗೆ ಒಳಪಡಿಸಬಹುದಾಗಿದೆ. ಹಾವು ಕಡಿತಕ್ಕೆ ಸಂಬಂಧಿಸಿ ಉಂಟಾಗಬಹುದಾದ ಸಂಭಾವ್ಯ ಅಲರ್ಜಿ ಪರಿಣಾಮಗಳನ್ನು, ಸೋಂಕುಗಳನ್ನು ಮತ್ತು ಇತರ ತೊಂದರೆಗಳನ್ನು ನಿಭಾಯಿಸಲು ವೈದ್ಯಕೀಯ ಸಿಬಂದಿ ಅಗತ್ಯ ಸಂಪನ್ಮೂಲ ಮತ್ತು ಪರಿಣತಿಯನ್ನು ಹೊಂದಿರುತ್ತಾರೆ.

ಕೊನೆಯದಾಗಿ, ತತ್‌ಕ್ಷಣ ವೈದ್ಯಕೀಯ ನೆರವನ್ನು ಪಡೆಯುವುದರಿಂದ ಹಾವು ಕಡಿತದ ಬಗ್ಗೆ ಅಗತ್ಯ ದಾಖಲೀಕರಣ ಮತ್ತು ವರದಿ ತಯಾರಿಕೆ ಸಾಧ್ಯವಾಗುತ್ತದೆ. ಈ ಮಾಹಿತಿಗಳು ಸಂಶೋಧನೆ, ಸಾರ್ವಜನಿಕ ಆರೋಗ್ಯ ಕ್ರಮಗಳು ಮತ್ತು ಭವಿಷ್ಯದಲ್ಲಿ ಹಾವು ಕಡಿತ ನಿರ್ವಹಣ ಕಾರ್ಯತಂತ್ರಗಳನ್ನು ಸುಧಾರಿಸಲು ನೆರವಾಗುತ್ತವೆ.

ಹಾವು ಕಡಿತ ತಡೆಯುವುದು ಹೇಗೆ?

„ ನಿಮ್ಮ ಪರಿಸರದಲ್ಲಿ ಸಾಮಾನ್ಯವಾಗಿ ಕಂಡುಬರುವ ಹಾವುಗಳ ಬಗ್ಗೆ ನೀವು ತಿಳಿವಳಿಕೆಯನ್ನು ಬೆಳೆಸಿಕೊಳ್ಳಿ ಮತ್ತು ಇದನ್ನು ನಿಮ್ಮ ಸಮುದಾಯಕ್ಕೂ ಹಂಚಿ. „ ನಿಮ್ಮ ಪರಿಸರದ ಹೊರಾಂಗಣ ಮತ್ತು ಒಳಾಂಗಣವನ್ನು ಶುಚಿಯಾಗಿ ಮತ್ತು ಸ್ವಚ್ಛವಾಗಿ ಇರಿಸಿಕೊಳ್ಳಿ.

„ ಕಟ್ಟಿಗೆ, ಸಲಕರಣೆಗಳು ಮತ್ತು ಇತರ ವಸ್ತುಗಳನ್ನು ಗೋಡೆಗಳಿಂದ ದೂರ ಮತ್ತು ನೆಲದಿಂದ ಎತ್ತರದಲ್ಲಿ ಶೇಖರಿಸಿ ಇರಿಸಿಕೊಳ್ಳಿ. ನಿಮ್ಮ ಮನೆ ಅಥವಾ ಕಟ್ಟಡಗಳೊಳಗೆ ಹಾವುಗಳು ಪ್ರವೇಶಿಸುವುದನ್ನು ತಡೆಯುವುದಕ್ಕಾಗಿ ಗೋಡೆಗಳು, ಬಾಗಿಲುಗಳಲ್ಲಿ ರಂಧ್ರಗಳು, ಬಿರುಕುಗಳು ಇದ್ದರೆ ಮುಚ್ಚಿ.

„ ಹಾವು ಕಡಿತದಿಂದ ತಪ್ಪಿಸಿಕೊಳ್ಳಲು ಸಂರಕ್ಷಣಾತ್ಮಕ ಉಡುಗೆ ಧರಿಸಿ. ಉದ್ದನೆಯ ಪ್ಯಾಂಟುಗಳು, ಬೂಟುಗಳು ಮತ್ತು ದಪ್ಪನೆಯ ಸಾಕ್ಸ್‌ ತೊಡುವುದು ಸಹಕಾರಿ. ಎತ್ತರವಾಗಿ ಹುಲ್ಲು ಬೆಳೆದಿರುವ ಅಥವಾ ಗಿಡಗಂಟಿಗಳು ಇರುವ ಪ್ರದೇಶದಲ್ಲಿ ಬರಿಗಾಲಿನಲ್ಲಿ  ಓಡಾಡಬೇಡಿ.

„ ಚಾರಣ ಮಾಡುತ್ತಿರುವಾಗ, ಬೆಟ್ಟ ಏರುವಾಗ ಅಥವಾ ಹೊರಾಂಗಣದಲ್ಲಿ ಕೆಲಸ ಮಾಡುತ್ತಿರುವಾಗ ಹಾವುಗಳ ಆವಾಸಸ್ಥಾನದ ಬಗ್ಗೆ ಎಚ್ಚರಿಕೆಯಿಂದ ಇರಿ.

„ ರಾತ್ರಿಯ ಕಾಲದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಿ. ಹಾವುಗಳು ರಾತ್ರಿ ಕಾಲದಲ್ಲಿ ಹೆಚ್ಚು ಚಟುವಟಿಕೆಯಿಂದ ಇರುತ್ತವೆ, ಹೀಗಾಗಿ ಮುಸ್ಸಂಜೆ, ರಾತ್ರಿ ಹೆಚ್ಚು ಜಾಗರೂಕರಾಗಿರಿ. ನಡೆಯುವಾಗ ಟಾರ್ಚ್ಲೈಟ್‌ ಉಪಯೋಗಿಸಿ ಮತ್ತು ಹಾವುಗಳ ಇರುವಿಕೆಯ ಬಗ್ಗೆ ಮುಂಜಾಗರೂಕರಾಗಿರಿ. ಎತ್ತರವಾದ ಹುಲ್ಲು ಬೆಳೆದಿರುವ ಪ್ರದೇಶ ಅಥವಾ ಬೆಳಕು ಕಡಿಮೆ ಇರುವ ಜಾಗದಲ್ಲಿ ನಡೆದಾಡಬೇಡಿ.

„ ವೃತ್ತಿಪರ ವೈದ್ಯಕೀಯ ಸಿಬಂದಿಯ ಸಹಾಯ ಪಡೆಯಿರಿ: ಹಾವು ಎದುರಾದರೆ ಅಥವಾ ಹಾವಿನ ಕಡಿತ ಉಂಟಾದ ಸಂದೇಹ ಮೂಡಿದರೆ ನೀವಾಗಿಯೇ ಹಾವು ಹಿಡಿಯಲು ಅಥವಾ ಚಿಕಿತ್ಸೆಗೆ ಮುಂದಾಗಬೇಡಿ. ಬದಲಾಗಿ ಸ್ಥಳೀಯಾಡಳಿತ ಅಥವಾ ಹಾವು ಹಿಡಿಯುವ ವೃತ್ತಿಪರರನ್ನು ಸಂಪರ್ಕಿಸಿ;

ತತ್‌ಕ್ಷಣ ವೈದ್ಯಕೀಯ ಆರೈಕೆ ಪಡೆಯಿರಿ. ವಿಷ ಹಾವು ಕಡಿತದಂತಹ ಸಂದರ್ಭಗಳಲ್ಲಿ ಪ್ರತಿಬಂಧನೆಯೇ ಅತ್ಯಂತ ಉತ್ತಮ ಕಾರ್ಯವಿಧಾನವಾಗಿದೆ. ಹಾವು ಕಡಿತಕ್ಕೆ ಒಳಗಾದ ಸಂದರ್ಭದಲ್ಲಿ ತಿಳಿವಳಿಕೆಯುಳ್ಳವರಾಗಿ, ಮುಂಜಾಗರೂಕತೆಯಿಂದ ಇರಿ ಮತ್ತು ತತ್‌ ಕ್ಷಣ ವೈದ್ಯಕೀಯ ಸಹಾಯವನ್ನು ಪಡೆಯಿರಿ.

-ಡಾ| ನಿಖೀಲ್‌ ಪೌಲ್‌, ಅಸಿಸ್ಟೆಂಟ್‌ ಪ್ರೊಫೆಸರ್‌, ಎಮರ್ಜೆನ್ಸಿ ಮೆಡಿಸಿನ್‌ ವಿಭಾಗ ಕೆಎಂಸಿ ಆಸ್ಪತ್ರೆ, ಅತ್ತಾವರ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಎಮರ್ಜೆನ್ಸಿ ಮೆಡಿಸಿನ್‌ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

 

Advertisement

Udayavani is now on Telegram. Click here to join our channel and stay updated with the latest news.

Next