Advertisement

ಕನ್ನಡದ ಕಂಪು ಪಸರಿಸುತ್ತಿರುವ ವೆಂಕಟೇಶ ಮರೇಗುದ್ದಿ

12:05 PM Nov 01, 2019 | Suhan S |

ಹುಬ್ಬಳ್ಳಿ: ಕನ್ನಡ ಕೇವಲ ರಾಜ್ಯೋತ್ಸವಕ್ಕೆ ಸೀಮಿತವಾಗಿ ಉಳಿದಂತಾಗಿದೆ. ಇಂಥ ಸಂದರ್ಭದಲ್ಲಿ ಕನ್ನಡ ಭಾಷೆ ಬಗ್ಗೆ ಅತೀತ ಅಭಿಮಾನ ಇಟ್ಟುಕೊಂಡು, ಕಳೆದ 4 ದಶಕಗಳಿಂದ ಕನ್ನಡದ ಕಂಪು ಪಸರಿಸುತ್ತಿದ್ದಾರೆ ಹುಬ್ಬಳ್ಳಿಯ ವೆಂಕಟೇಶ ಮರೇಗುದ್ದಿ.

Advertisement

ಚಿನ್ನಾಭರಣದ ಮಾರಾಟ ಉದ್ಯೋಗ ಮಾಡಿಕೊಂಡಿರುವ ಅವರು, ಕರ್ನಾಟಕ ರಾಷ್ಟ್ರವೀರ ಪುಲಕೇಶಿ ಕನ್ನಡ ಬಳಗ ಆರಂಭಿಸಿ ಹಲವು ವರ್ಷಗಳಿಂದ ಮನೆ ಮನೆಯಲ್ಲಿ “ಕನ್ನಡ ಕಂಪು’ ಕಾರ್ಯಕ್ರಮ ಮೂಲಕ ಕನ್ನಡಿಗರಿಗೆ ಕನ್ನಡದ ಹಿರಿಮೆ ತಿಳಿಸುವ, ಜಾಗೃತಿ ಮೂಡಿಸುವ ಸತ್ಕಾರ್ಯದಲ್ಲಿ ತೊಡಗಿದ್ದಾರೆ. ತಮ್ಮ ಮನೆಯಿಂದಲೇ ಉಪ್ಪಿಟ್ಟು, ಚಹಾ ಮಾಡಿಕೊಂಡು ಹೋಗಿ ಅಲ್ಲಿ 1 ಗಂಟೆ ಕನ್ನಡ ಸಾಹಿತ್ಯ, ಸಂಸ್ಕೃತಿ ಬಗ್ಗೆ ಕನ್ನಡ ಪಂಡಿತರಿಂದ ಉಪನ್ಯಾಸ ಆಯೋಜಿಸುತ್ತಾರೆ. ಈವರೆಗೆ 206 ಮನೆಗಳಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ವಿಶೇಷ.

ಲಕ್ಷ ಪತ್ರ ಅಭಿಯಾನ: ದೂರದರ್ಶನದಲ್ಲಿ ಕನ್ನಡ ಕಾರ್ಯಕ್ರಮಗಳು ಪ್ರಸಾರಗೊಳ್ಳಬೇಕೆಂದು ಆಗ್ರಹಿಸಿ ಸ್ವಂತ ಖರ್ಚಿನಲ್ಲಿ 1 ಲಕ್ಷ ಪತ್ರ ಅಭಿಯಾನ ನಡೆಸಿದ ವೆಂಕಟೇಶ ಅವರು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕೆಂದು 1ಲಕ್ಷ ಪತ್ರ, ಕಳಸಾ-ಬಂಡೂರಿ ನಾಲಾ ಜೋಡಣೆಗೆ ಆಗ್ರಹಿಸಿ 1 ಲಕ್ಷ ಪತ್ರ ಬರೆದು ಕೇಂದ್ರ ಸರಕಾರಕ್ಕೆ ರವಾನಿಸಿದ್ದಾರೆ.

ಹಬ್ಬ, ಉತ್ಸವ ಸಂದರ್ಭದಲ್ಲಿ ಕನ್ನಡದ ಶುಭಾಶಯ ಪತ್ರ ನೀಡುವ ಇವರು, ಕನ್ನಡದ ಅಂಕಿಗಳ ಗೋಡೆ ಗಡಿಯಾರ ಉಡುಗೊರೆಯಾಗಿ ನೀಡುತ್ತಾರೆ. ಮದುವೆಗಳಲ್ಲಿ ಕನ್ನಡ ಪುಸ್ತಕಗಳನ್ನೇ ಉಡುಗೊರೆಯಾಗಿ ನೀಡುವ ಇವರು, ತಮ್ಮ ಪುತ್ರನ ಮದುವೆಯಲ್ಲಿ “ಕನ್ನಡದ ಯುಗ ಪುರುಷರು’ ಕಿರು ಹೊತ್ತಿಗೆಯನ್ನು ಎಲ್ಲರಿಗೂ ವಿತರಿಸಿದ್ದರು. ಅಲ್ಲದೇ ತಮ್ಮ ಪುತ್ರ ಹಾಗೂ ಸೊಸೆಗೆ ಮುಂದೆ ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸುವುದಾಗಿ ಅಗ್ನಿಸಾಕ್ಷಿಯಾಗಿ ಪ್ರಮಾಣ ಮಾಡಿಸಿದ್ದು ವಿಶೇಷ. ಇವರ ಕನ್ನಡ ಪ್ರೀತಿ ಕಂಡು ಇವರನ್ನು “ಹುಚ್ಚ’ ಎಂದು ಕರೆದವರೂ ಇದ್ದಾರೆ. ಮರೇಗುದ್ದಿ ಅವರ ಮನೆ ಕನ್ನಡಾಲಯ. ಮನೆಗೆ “ಸರ್ವಜ್ಞ’ ಎಂದು ಹೆಸರಿಟ್ಟಿದ್ದು, ಪ್ರತಿಯೊಂದು ಕೋಣೆಗೂ ಒಬ್ಬ ವಚನಕಾರರ ನಾಮಕರಣ ಮಾಡಿದ್ದಾರೆ.

ಮನೆಯ ಗೋಡೆಗಳ ಮೇಲೆ ಕನ್ನಡ ಸಾಹಿತ್ಯ ಸಿರಿವಂತಗೊಳಿಸಿದ ಮಹನಿಯರ ಛಾಯಾಚಿತ್ರಗಳಿವೆ. ಮನೆಯಲ್ಲಿ ಸಾವಿರಾರು ಕನ್ನಡ ಪುಸ್ತಕಗಳಿವೆ. ಡಾ|ರಾಜಕುಮಾರ ಅಭಿಮಾನಿಯಾಗಿರುವ ಇವರು ರಾಜಕುಮಾರ ಅವರ ಕುರಿತು ರಚನೆಯಾದ 45 ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಕಳೆದ 30 ವರ್ಷಗಳಿಂದ ಕಾದಂಬರಿಕಾರ ಅ.ನ. ಕೃಷ್ಣರಾಯರ ಜಯಂತಿ ನಿಮಿತ್ತ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. “ಕನ್ನಡಮ್ಮನೆ ನಮ್ಮನೆ ದೇವರು’ ಕೃತಿ ರಚಿಸಿರುವ ಇವರು ಶೀಘ್ರದಲ್ಲೇ ಕನ್ನಡಮ್ಮನ ಮಡಿಲಿಗೆ ಮತ್ತೂಂದು ಪುಸ್ತಕ ಸಮರ್ಪಿಸಲು ಸಜ್ಜಾಗಿದ್ದಾರೆ.

Advertisement

ಬಿಗ್‌ಬಜಾರ್‌ಗೆ ಕನ್ನಡ ನಾಮಫಲಕ ಹಾಕಿಸುವಲ್ಲಿ ಯಶಸ್ವಿ :  ಕರ್ನಾಟಕದಲ್ಲಿ ಕನ್ನಡದಲ್ಲೇ ಅಂಗಡಿಗಳ ನಾಮಫಲಕ ಬರೆಸಬೇಕು ಎಂದು ಅಪೇಕ್ಷಿಸುವ ವೆಂಕಟೇಶ ಮರೇಗುದ್ದಿ ಅವರು ಗೋಕುಲ ರಸ್ತೆಯ ಬಿಗ್‌ಬಜಾರ್‌ಗೆ ಕನ್ನಡ ನಾಮಫಲಕ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

-ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next