ರಾಷ್ಟ್ರದ ವಿವಿಧೆಡೆಯಷ್ಟೇ ಅಲ್ಲ ರಾಷ್ಟ್ರಾಂತರದಲ್ಲೂ ಹಾಡಿದ ಅಪೂರ್ವ ಗಾಯಕ ಕುಂದಾಪುರ ಶ್ರೀ ಪೇಟೆ ವೆಂಕಟರಮಣ ದೇವಸ್ಥಾನದ ತಾಂತ್ರಿಕ ವಿ| ವಾಗೀಶ ಭಟ್ ಅವರು ಡಿ.29ರಂದು ಗೋಧೂಳಿ ಸಮಯದಲ್ಲಿ ಅದೇ ದೇವಾಲಯದ ಭಜನ ಚಾವಡಿಯಲ್ಲಿ ಪೇಟೆ ವೆಂಕಟರಮಣ ದೇವರ ಸ್ತುತಿ ಮಾಡುತ್ತಿದ್ದರೆ ಭಕ್ತರು ಗಾನಾಲಿಂಗನದಲ್ಲಿದ್ದರು. ಪಡಿª, ಭಾಗ್ಯಶ್ರೀ, ಭೀಮ್‌ಪಲಾಸ್, ಮಧುವಂತಿ, ಮುಲ್ತಾನಿ, ಖಮಾಜ್ ರಾಗಗಳನ್ನು ಬಳಸಿದ ರಾಗಮಾಲಿಕೆಯಲ್ಲಿ “ಪಂಚಗಂಗಾವಳಿಯ ತೀರದಿ ನೆಲೆಸಿ ಪಂಚಖಾದ್ಯವ ಮೆಲುವ ಪಂಚಾಕ್ಷರದ ದೇವ ವೆಂಕಟರಮಣ’ ಎಂಬರ್ಥ ಬರುವ ಸ್ವರಚಿತ ಹಾಡನ್ನು ಕೊಂಕಣಿ ಭಾಷೆಯಲ್ಲಿ ಪ್ರಸ್ತುತಪಡಿಸಿದರು.
ಅಂದ ಹಾಗೆ ವಿ| ವಾಗೀಶ ಭಟ್ಟರು ಶ್ಯಾಮಲಾ ಜಿ. ಭಾವೆ ಅವರ ಬಳಿ ಬ್ಯಾಂಕ್ ಉದ್ಯೋಗಿಯಾಗಿದ್ದಾಗ ಸಂಗೀತ ಕಲಿತವರು. ದಕ್ಷಿಣ ಭಾರತದ ಮೊದಲ ಹಿಂದೂಸ್ಥಾನಿ ಸಂಗೀತ ವಿದ್ಯಾಲಯ ಎಂದು ನೆಗಳೆ¤ ಪಡೆದ ಭಾವೆ ಅವರ ಸರಸ್ವತಿ ಸಂಗೀತ ವಿದ್ಯಾಲಯದ ಕಾರ್ಯದರ್ಶಿ. ಅಮೆರಿಕ, ಕೆನಡಾ, ಇಂಗ್ಲೆಂಡ್, ದುಬಾೖ, ಶಾರ್ಜಾ, ಜಪಾನ್, ಯುರೋಪಿನ 8 ರಾಷ್ಟ್ರಗಳಲ್ಲಿ ಕೂಡಾ ಹಿಂದೂಸ್ಥಾನಿ ಗಾನಸುಧೆಯ ಧಾರೆ ಹರಿಸಿದವರು. ಹಿಮಾಚಲ ಪ್ರದೇಶದ ಮಂಡಿ ಎಂಬಲ್ಲಿ ನಡೆಯುವ ಶಿವರಾತ್ರಿ ಉತ್ಸವದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಸರಕಾರದಿಂದ ಕಳುಹಿಸಲ್ಪಟ್ಟ ಏಕೈಕ ಹಿಂದೂಸ್ಥಾನಿ ಗಾಯಕ. ಅನೇಕ ಧ್ವನಿಸುರುಳಿಗಳಿಗೆ ಸ್ವರವಾದವರು, ಶ್ಯಾಮಲಾ ಭಾವೆ ಅವರ ಅನೇಕ ಕ್ಯಾಸೆಟ್‌ಗಳಿಗೆ ಕೊರಳಾದವರು. ಜತೆಜತೆಗೆ ಭಾವೆ ಅವರ ಕಛೇರಿಗಳಲ್ಲಿ ತಬಲಾ ಹಾಗೂ ಸಿತಾರ್‌ನಲ್ಲೂ ಕೂಡುಧ್ವನಿಯಾದವರು. ಹಾರ್ಮೋನಿಯಂನಲ್ಲಿ ಪ್ರವೀಣರು. ಇಂತಿಪ್ಪ ವಿ| ವಾಗೀಶ ಭಟ್ಟರು ಪೇಟೆ ವೆಂಕಟರಮಣ ದೇವಾಲಯದಲ್ಲಿ ದೇವಾಲಯ ಸ್ಥಾಪನೆಯ ಮೂಲಕತೃì ಸುಬ್ಬ ಪೈ ಅವರ ನೆನಪಿನಲ್ಲಿ ಪ್ರತಿವರ್ಷ ನಡೆಯುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ಯಾಮಲಾ ಭಾವೆಯಂತಹ ಕಲಾವಿದರಿಂದ ಸಂಗೀತ ಸೇವೆ ಮಾಡಿಸಿದ ಪ್ರಮುಖ ಅಧ್ವರ್ಯು. ಈ ವರ್ಷ ವಾಗೀಶ ಭಟ್ಟರ 60ನೆ ವಸಂತಾಚರಣೆ ಪ್ರಯುಕ್ತ ಅವರೇ ಹಿಂದೂಸ್ಥಾನಿ ಗಾಯನ ನಡೆಸಿದರು.
ಕಛೇರಿಯ ಆರಂಭ ಪೂರ್ಯಾಧನಶ್ರೀ ರಾಗದಲ್ಲಿ ವಿಲಂಬಿತ ಏಕತಾಳದಲ್ಲಿ “ಹರಿಹರ ರಂಗ’ ಎಂಬ ಹಾಡಿನೊಂದಿಗೆ. ನಂತರ ಅದೇ ರಾಗದಲ್ಲಿ ತೀನ್‌ತಾಳ್‌ನಲ್ಲಿ “ಹರಿಯೇ ಮೈಕೋ ಸಬ್ ಸುಖ್ ದೇನಾ’ ಎಂಬ ಹಾಡಿಗೆ ಭಾವ ತುಂಬಿದರು. ಆ ಬಳಿಕ ಭೀಮ್‌ಪಲಾಸ್ ರಾಗದಲ್ಲಿ ಜಪ್ ತಾಳದಲ್ಲಿ “ಸೋಹಿ ರಸನಾ ಜೋ ಹರಿ ಗುಣ ಗಾಯೆ’ ಎಂದು “ಯಾವುದು ಹರಿಯ ಗುಣಗಾನ ಮಾಡುತ್ತದೋ ಅದುವೇ ನಾಲಿಗೆ ಎಂದರೆ’ ಎಂಬರ್ಥದ ಹಾಡಿಗೆ ಜೀವ ತುಂಬಿದರು. ನಂತರ ಭೀಮ್‌ಪಲಾಸ್ ರಾಗದಲ್ಲಿ ಧ್ರುತ್ತ ಏಕತಾಳದಲ್ಲಿ “ನಿರಖಮದನ್ ಮುರತ ಶ್ಯಾಮ್’ ಎಂಬ ಹಾಡನ್ನು ಪ್ರಸ್ತುತಪಡಿಸಿದರು. ಅದಾದ ನಂತರ ರಾಗಮಾಲಿಕೆಯಲ್ಲಿ ವೆಂಕಟರಮಣನ ಸ್ವರಚಿತ ಹಾಡನ್ನು ಸುಮಾರು 20 ನಿಮಿಷ ಪ್ರಸ್ತುತಪಡಿಸಿ ಸೇರಿದ್ದವರನ್ನು ಭಕ್ತಿಯ ಅಲೆಗಳಲ್ಲಿ ಮಿಂದೇಳಿಸಿದರು.
ಪಂಚಭಾಷಾ ಕಲಾವಿದರಾದ ವಾಗೀಶ ಭಟ್ಟರು ಹಿಂದಿ, ಕೊಂಕಣಿ ಬಳಿಕ ಕನ್ನಡದ ಹಾಡುಗಳಿಗೆ ಉಸಿರು ತುಂಬಿದರು. ಪುರಂದರದಾಸರ “ಬಂದನೋ ಗೋವಿಂದ’, ಚಾರುಕೇಶಿ ರಾಗದಲ್ಲಿ ಶ್ರೀಪಾದರಾಯರ “ಶ್ರೀರಾಮ ನಿನ್ನ ಪಾದವ ತೋರೋ’, ಪುರಂದರದಾಸರ “ಈತ ಮುಖ್ಯಪ್ರಾಣ’, ಭೈರವಿ ರಾಗದಲ್ಲಿ ವಿದ್ಯಾಪ್ರಸನ್ನತೀರ್ಥರ “ರಾಮ ಭಜನೆ ಮಾಡೋ ಮನುಜ’ ಹಾಡುಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ಹಾರ್ಮೋನಿಯಂನಲ್ಲಿ ಬೆಂಗಳೂರಿನ ವಿ| ನರಸಿಂಹ ಕುಲಕರ್ಣಿ, ತಬಲಾದಲ್ಲಿ ಬೆಂಗಳೂರಿನ ವಿ| ಶಶಿಭೂಷಣ ಗುರ್ಜರ್ ಸಾಥ್ ನೀಡಿದ್ದರು.
ಲಕ್ಷ್ಮೀ ಮಚ್ಚಿನ