ಕೋಲಾರ: ತಾಲೂಕಿನ ವೆಂಕಟಾಪುರ ಗ್ರಾಮದ 600 ವರ್ಷ ಪುರಾತನ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆ, ಅಲಂಕಾರ, ಅನ್ನದಾನ ನಡೆಸಲಾಗಿದ್ದು, ಮಾಜಿ ಸಚಿವ ವರ್ತೂರು ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮತ್ತಿತರರು ಸ್ವಾಮಿ ದರ್ಶನ ಪಡೆದರು.
ಲಕ್ಷ್ಮೀವೆಂಕಟೇಶ್ವರಸ್ವಾಮಿ ದೇವಾಲಯ ದಿಂದಲೇ ಈ ಗ್ರಾಮಕ್ಕೆ ವೆಂಕಟಾಪುರ ಎಂದು ಹೆಸರು ಬಂದಿದೆ ಎನ್ನಲಾಗಿದ್ದು, ಶಿಥಿಲವಾಗಿದ್ದ ದೇವಾಲಯವನ್ನು ಕಳೆದ 10 ವರ್ಷಗಳ ಹಿಂದೆ ಕೋಲಾರದ ದೊಡ್ಡಗೌಡರು ಸೇರಿ ಗ್ರಾಮಸ್ಥರು ಜೀರ್ಣೋದ್ಧಾರ ಮಾಡಿದ್ದರು. ದೇವಾಲಯವನ್ನು ಅತ್ಯಂತ ಸುಂದರವಾಗಿ ನವೀಕರಿಸಲಾಗಿದ್ದು, ಪೂಜಾ ಕಾರ್ಯಗಳನ್ನು ಅರ್ಚಕರಾದ ಮೋಹನ್ ಕುಮಾರ್ ನೆರವೇರಿಸಿದರು.
ದೇವರ ದರ್ಶನದಿಂದ ಮನಸ್ಸಿಗೆ ನೆಮ್ಮದಿ: ಪೂಜೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್, ವೈಕುಂಠ ಏಕಾದಶಿಯಂದು ಶ್ರೀನಿವಾಸನ ದರ್ಶನದಿಂದ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆ ಇದೆ. ಜಿಲ್ಲೆಯ ಜನತೆಗೆ ಸಂಕಷ್ಟಗಳು ದೂರವಾಗಲಿ ಎಂದು ಪ್ರಾರ್ಥಿಸಿದ್ದಾಗಿ ತಿಳಿಸಿದರು. ದೇವರ ದರ್ಶನದಿಂದ ಮನಸ್ಸಿಗೂ ನೆಮ್ಮದಿ ಸಿಗುತ್ತದೆ, ಈ ಸ್ವಾಮಿಯ ಆಶೀರ್ವಾದದಿಂದ ಮುಂದಿನ ಬಾರಿ ಶಾಸಕನಾಗಿ ಗೆದ್ದು ಬಂದು ಜನರ ಸೇವೆ ಮತ್ತೆ ಮಾಡುವ ಅವಕಾಶ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಸ್ವಾಮಿ ದರ್ಶನ ಪಡೆದರಲ್ಲದೇ, ವೆಂಕಟಾಪುರದ ಶ್ರೀನಿವಾಸನ ಮಹಿಮೆ ಅಪಾರವಾಗಿದ್ದು, ಕೋವಿಡ್ ನಾಶವಾಗಿ ಜನತೆಗೆ ಉತ್ತಮ ಆರೋಗ್ಯ ಸಿಗಲಿ ಎಂದು ಪ್ರಾರ್ಥಿಸಿದರು. ಪೂಜಾ ಕಾರ್ಯದಲ್ಲಿ ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಮಾಜಿ ಸದಸ್ಯೆ ರೂಪಶ್ರೀ, ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಮುಖಂಡ ಗೋಪಾಲಗೌಡ, ಅರಾಭಿಕೊತ್ತನೂರು ಗ್ರಾಪಂ ಅಧ್ಯಕ್ಷ ರಾಜಣ್ಣ, ಸದಸ್ಯ ನಂಜುಂಡಗೌಡ, ಮುಖಂಡರಾದ ಮುಳ್ಳಹಳ್ಳಿ ಮಂಜುನಾಥ್, ಮುನಿರಾಜ್ ಮತ್ತಿತರರು ಸ್ವಾಮಿ ದರ್ಶನ ಪಡೆದರು.