ವೆನಿಸ್: ಏರುತ್ತಿರುವ ತಾಪಮಾನ, ಹವಾಮಾನ ಬದಲಾವಣೆಯಿಂದಾಗಿ ಸಮುದ್ರ ತೀರದ ನಗರಗಳು ಮುಳುಗಲಿವೆ ಎಂಬ ಎಚ್ಚರಿಕೆ ಗಂಟೆ ಮೊಳಗುತ್ತಲೇ ಇವೆ. ಇದಕ್ಕೆ ಸಾಕ್ಷಿ ಎಂಬಂತೆ ಜಗತ್ತಿನ ಅತಿ ಪ್ರಾಚೀನ ವ್ಯಾಪಾರ ಕೇಂದ್ರ, ಪ್ರಸಿದ್ಧ ನಗರಿ ವೆನಿಸ್‌ನಲ್ಲಿ ಕಳೆದ 50 ವರ್ಷಗಳಲ್ಲೇ ಮೊದಲ ಬಾರಿಗೆ ಭಾರೀ ಸಮುದ್ರದಲೆಗಳಿಂದ ನೀರು ಆವರಿಸಿದೆ.
ನೀರಿನ ಅಲೆಗಳು 1.87 ಮೀ. ಅಡಿ ಎತ್ತರಕ್ಕೆ ಬಂದಿದ್ದು ಇದ್ಕೆ ಕಾರಣವಾಗಿದೆ. ಇದರಿಂದಾಗಿ ತಗ್ಗುಪ್ರದೇಶಗಳು ಮುಳುಗಿದ್ದರೆ, ಕೆಲವು ಪ್ರದೇಶಗಳಲ್ಲಿ ಮನುಷ್ಯನ ಅರ್ಧಭಾಗ ಮುಳುಗುವಷ್ಟು ನೀರು ನಿಂತಿದೆ.
1966ರಲ್ಲಿ ಹೀಗೆಯೇ ಆಗಿದ್ದು ಆಗ 1.94 ಮೀ. ನಷ್ಟು ನೀರು ಬಂದಿತ್ತು. 1923ರಿಂದ ಇಲ್ಲಿನ ಸಮುದ್ರದ ಮಟ್ಟದ ಬಗ್ಗೆ ದಾಖಲೆಗಳನ್ನು ಇಡಲಾಗುತ್ತಿದೆ.
ಮಂಗಳವಾರ ಇಲ್ಲಿ ನೀರು ಹೆಚ್ಚು ಆವರಿಸಿತ್ತು. ನಾವು ಸರಕಾರಕ್ಕೆ ಮೊರೆ ಇಟ್ಟಿದ್ದು, ಇದು ಹವಾಮಾನ ಬದಲಾವಣೆಯ ಪರಿಣಾಮ ಎಂದು ಮೇಯರ್ ಲುಯ್‌ಗಿ ಬ್ರುಗ್ನಾರೋ ಹೇಳಿದ್ದಾರೆ. ಸದ್ಯ ವೆನಿಸ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. 1200 ವರ್ಷ ಹಳೆಯದಾದ ಸೈಂಟ್ ಮಾರ್ಕ್ಸ್ ಬಸಿಲಿಕಾ ಮುಳುಗಿದೆ. ತಗ್ಗುಪ್ರದೇಶದಲ್ಲಿರುವ ಈ ಬಸಿಲಿಕಾ ಕಳೆದ 20 ವರ್ಷಗಳಲ್ಲಿ ಮುಳುಗುತ್ತಿರುವುದು ನಾಲ್ಕನೇ ಬಾರಿ.
1984ರಲ್ಲಿ ಸಮುದ್ರದ ನೀರು ನಗರ ಪ್ರವೇಶಿಸುವುದನ್ನು ತಡೆಯಲು ತಡೆಗೋಡೆ ಯೋಜನೆ ರೂಪಿಸಲಾಗಿತ್ತು. ಕೋಟ್ಯಂತರ ರೂ. ವೆಚ್ಚದ ಈ ಯೋಜನೆ ಭ್ರಷ್ಟಾಚಾರ ಕಾರಣದಿಂದ ಮುಂದುವರಿದಿರಲಿಲ್ಲ.