ಹೊನ್ನಾಳಿ: ಪಟ್ಟಣ ಪಂಚಾಯತ್ ವತಿಯಿಂದ ವಿವಿಧ ಬಾಬುಗಳ ಬಹಿರಂಗ ಹರಾಜು ಪ್ರಕ್ರಿಯೆ ಇಲ್ಲಿನ ಪಂಪ್ ಹೌಸ್ ಬಳಿ ನಡೆಯಿತು. ಸಭೆಯಲ್ಲಿ ಪಪಂ ಸದಸ್ಯ ಹೊಸಕೇರಿ ಸುರೇಶ್ ಮಾತನಾಡಿ, ರಾಜ್ಯದಲ್ಲಿ ಭೀಕರ ಬರದಿಂದ ಜನರು ತತ್ತರಿಸಿ ಹೋಗಿದ್ದಾರೆ. ಹೊನ್ನಾಳಿ ತಾಲೂಕು ಕೂಡ ಬರಪೀಡಿತ ಎಂದು ಘೋಷಿತವಾಗಿದೆ.
ಈ ಹಿನ್ನೆಲೆಯಲ್ಲಿ ಪಪಂ ವಿಧಿಸುವ ವಿವಿಧ ಶುಲ್ಕಗಳು ಜನರಿಗೆ ಹೊರೆಯಾಗುತ್ತವೆ. ಆದ್ದರಿಂದ, ಈ ವರ್ಷ ಬಹಿರಂಗ ಹರಾಜನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. ಪಪಂ ಸದಸ್ಯ ಪ್ರಶಾಂತ್ ಮಾತನಾಡಿ, 500 ಮತ್ತು 1 ಸಾವಿರ ರೂ.ಗಳ ನೋಟ್ ರದ್ದುಪಡಿಸಿರುವುದರಿಂದ ಈ ಹಿಂದೆ ಹರಾಜು ಪಡೆದುಕೊಂಡಿರುವವರಿಗೆ ನಷ್ಟವಾಗಿದೆ.
ಆದ್ದರಿಂದ, ಈ ಹರಾಜು ಪ್ರಕ್ರಿಯೆಯನ್ನು ಮುಂದೂಡಬೇಕು. ಬರಗಾಲದ ಹಿನ್ನೆಲೆಯಲ್ಲಿ ಜನರು ಸಂಕಷ್ಟದಲ್ಲಿರುವ ಕಾರಣ ಈ ವರ್ಷ ಸುಂಕ ವಸೂಲಿ ಮಾಡದಿರುವ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪಪಂ ಸದಸ್ಯ ಎಚ್.ಬಿ. ಅಣ್ಣಪ್ಪ ಮಾತನಾಡಿ, ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಲು ಸಾಧ್ಯವಿಲ್ಲ.
ಪಪಂ ಆದಾಯ ಮೂಲ ಕಳೆದುಕೊಂಡರೆ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗುತ್ತದೆ. ನಷ್ಟ ಅನುಭವಿಸಿರುವ ಹರಾಜುದಾರರಿಗೆ ಮುಂದಿನ ದಿನಗಳಲ್ಲಿ ಅನುಕೂಲ ಮಾಡಿಕೊಡಲಾಗುತ್ತದೆ. ಎಲ್ಲರೂ ಹರಾಜು ಪ್ರಕ್ರಿಯೆಗೆ ಸಹಕರಿಸಬೇಕು ಎಂದು ವಿನಂತಿಸಿದರು.
ಮುಖ್ಯಾಧಿಕಾರಿ ಎಸ್. ಆರ್. ವೀರಭದ್ರಯ್ಯ ಮಾತನಾಡಿ, ಸರಕಾರದ ನಿರ್ದೇಶನಗಳ ಪ್ರಕಾರ ನಾವು ನಡೆದುಕೊಳ್ಳಬೇಕಿದೆ. ಆದ್ದರಿಂದ, ಸುಂಕ ವಸೂಲಿ ಹರಾಜು ಪ್ರಕ್ರಿಯೆ ನಡೆಸುವುದು ಅನಿವಾರ್ಯವಾಗಿದೆ. ಸಾರ್ವಜನಿಕರು, ಪಪಂ ಸದಸ್ಯರು, ಬಿಡ್‌ದಾರರು ಸೇರಿದಂತೆ ಎಲ್ಲರೂ ತಮ್ಮೊಂದಿಗೆ ಸಹಕರಿಸಬೇಕು ಎಂದರು.
ಪಪಂ ಅಧಿಧಿಕಾರಿಗಳು ಹರಾಜು ಪ್ರಕ್ರಿಯೆ ಆರಂಭಿಸುತ್ತಿದ್ದಂತೆ ಪಪಂ ಸದಸ್ಯರಾದ ಹೊಸಕೇರಿ ಸುರೇಶ್ ಮತ್ತು ಪ್ರಶಾಂತ್ ಸಭೆಯಿಂದ ಹೊರನಡೆದರು. ಅವರು ತೆರಳಿದ ನಂತರ ಹರಾಜು ಪ್ರಕ್ರಿಯೆ ನಡೆಯಿತು. ಪಪಂ ಅಧ್ಯಕ್ಷೆ ಶ್ರೀದೇವಿ ಧರ್ಮಪ್ಪ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಎಚ್.ಡಿ. ವಿಜೇಂದ್ರಪ್ಪ, ಗಿರೀಶ್, ಮಲ್ಲೇಶ್, ಸುಶೀಲಮ್ಮ ದುರುಗಪ್ಪ, ಕರ ವಸೂಲಿಗಾರ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.