Advertisement
ಬೆಂಗಳೂರು ಹೊರತು ಪಡಿಸಿ ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರು, ಮೈಸೂರು, ತುಮಕೂರು ಹಾಸನ, ಕಾರವಾರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವೆಂಡಿಂಗ್ ಜೋನ್ ಮತ್ತು ಫುಡ್‌ಸ್ಟ್ರೀಟ್ ತೆರೆಯಲಾಗಿದೆ. ಅದೇ ಮಾದರಿ ಸಿಲಿಕಾನ್ ಸಿಟಿಯಲ್ಲಿ “ವೆಂಡಿಂಗ್ ಜೋನ್ ಮತ್ತು ನೋ ವೆಂಡಿಂಗ್ ಜೋನ್’ಗಳು ತಲೆ ಎತ್ತಲಿವೆ. ಪಟ್ಟಣ ವ್ಯಾಪಾರ ಸಮಿತಿ ಸದಸ್ಯರು ಈಗಾಗಲೇ ಬಿಬಿಎಂಪಿ ವಲಯ ಎಂಜಿನಿಯರ್ ಜತೆಗೂಡಿ ವೆಂಡಿಂಗ್ ಜೋನ್ ತೆರೆಯುವ ಸಂಬಂಧ ಸ್ಥಳ ಪರಿಶೀಲಿಸಿದ್ದಾರೆ.
Related Articles
Advertisement
ಪಟ್ಟಣ ಸಮಿತಿಯ ಚುನಾಯಿತ ಸದಸ್ಯರು ಸ್ಥಳ ಸರ್ವೇ ನಡೆಸಿದ ಬಳಿಕ ಆ ಪ್ರದೇಶಗಳ ಸಾಧಕ-ಬಾಧಕ, ಸಂಚಾರ ದಟ್ಟಣೆ, ಸ್ಥಳೀಯ ನಿವಾಸಿಗಳ ಹಿತ ಸೇರಿದಂತೆ ಮತ್ತಿತರರ ವಿಚಾರಗಳ ಬಗ್ಗೆ ಸಮಿತಿಯಲ್ಲಿ ಸುದೀರ್ಘ ಚರ್ಚೆ ನಡೆಯಲಿದೆ. ಬಳಿಕ ಸಂಚಾರ ಪೊಲೀಸರು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ನಿರ್ಧಾರಕ್ಕೂ ಮನ್ನಣೆ ನೀಡಿ, ವೆಂಡಿಂಗ್ ಜೋನ್ ತೆರೆಯುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪಟ್ಟಣ ವ್ಯಾಪಾರ ಸಮಿತಿ ತಿಳಿಸಿದೆ.
ಮಾರಾಟ ಮತ್ತು ಮಾರಾಟ ರಹಿತ ವಲಯ ವರ್ಗೀಕರಣ:
ಮಾರಾಟ ಮತ್ತು ಮಾರಾಟ ರಹಿತ ವಲಯ ವರ್ಗೀಕರಣಕ್ಕೆ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಂಪೂರ್ಣ ಪ್ರಕ್ರಿಯೆಗಳನ್ನು ನಿಬಂಧನೆ ಪ್ರಕಾರ ಮಾಡಬೇಕಾಗುತ್ತದೆ. ಈಗ ಮುಖ್ಯ ರಸ್ತೆಗಳಿಂದ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಲಾಗುತ್ತಿದೆ. ಸ್ವಲ್ಪ ಸಮಯ ಅದೇ ರಸ್ತೆಯಲ್ಲಿ ಸಾಗಿದರೆ ಮತ್ತೆ ಮಾರಾಟಗಾರರು ಮರಳಿರುತ್ತಾರೆ. ನೀವು ವ್ಯಾಪಾರ ಮಾಡಲೆಂದೇ ಪ್ರತ್ಯೇಕ ವಲಯ ಸ್ಥಾಪಿಸಬೇಕಾಗಿದೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ. ಸ್ಥಳಗಳು ಮಾರಾಟಗಾರರಿಗೆ ಸೂಕ್ತವಾಗಿವೆಯೇ ಎಂಬುವುದು ಸೇರಿದಂತೆ ವ್ಯಾಪಾರಿಗಳಿಗೆ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ವೆಂಡಿಂಗ್ ಜೋನ್ ತೆರೆಯಬೇಕಾಗುತ್ತದೆ. ಜತೆಗೆ ವಾಹನ ದಟ್ಟಣೆ ಕಡಿಮೆಯಿರುವ ಕಡೆಗಳಲ್ಲಿ ಸ್ಥಳೀಯ ನಿವಾಸಿಗಳು ಸಂಘ ಸಂಸ್ಥೆಗಳು ಅಪಸ್ವರ ಎತ್ತುವ ಸಾಧ್ಯತೆ ಇದೆ. ಹಾಗೆಯೇ ವಾಹನ ದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ವ್ಯಾಪಾರ ವಲಯ ತೆರೆಯಲು ಆಗುವುದಿಲ್ಲ ಎಂದು ತಿಳಿಸುತ್ತಾರೆ.
ಕೇಂದ್ರ ನಗರಾಭಿವೃದ್ಧಿ ಇಲಾಖೆ ಮತ್ತು ರಾಜ್ಯ ವ್ಯಾಪ್ತಿಯಲ್ಲಿ ಕೌಶಲ್ಯ ಅಭಿವೃದ್ಧಿ ಇಲಾಖೆ ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಅನು ದಾನ ನೀಡಲಿದೆ. ಜತೆಗೆ ಶೇ.25 ಅನು ದಾನ ವೆಂಡಿಂಗ್ ಜೋನ್ ವಲಯ ನಿರ್ಮಾಣಕ್ಕಾಗಿಯೇ ಮೀಸರಿಲಿದೆ. ಆದರೆ ಅದನ್ನು ಪಾಲಿಕೆ ಅಧಿಕಾರಿಗಳು ಬಳಸಿಕೊಳ್ಳುತ್ತಿಲ್ಲ. ಹಲವು ಜಿಲ್ಲೆಗಳಲ್ಲಿ ಫುಡ್‌ಸ್ಟ್ರೀಟ್ ಮತ್ತು ವೆಂಡಿಂಗ್ ಜೋನ್ ತೆರೆಯಲಾಗಿದೆ. ಆ ಕೆಲಸ ರಾಜಧಾನಿಯಲ್ಲೂ ಆಗಬೇಕಾಗಿದೆ.-ಸಿ.ಈ.ರಂಗಸ್ವಾಮಿ, ಪಟ್ಟಣ ವ್ಯಾಪಾರ ಸಮಿತಿ ಸದಸ್ಯ
-ದೇವೇಶ ಸೂರಗುಪ್ಪ