ವೆಲ್ಲಂಕಣಿ ತಮಿಳುನಾಡಿನ ನಾಗಪಟ್ಣಮ್ ಜಿಲ್ಲೆಯ ವ್ಯಾಪ್ತಿಯೊಳಗೆ ಬರುವ, ಜಿಲ್ಲಾ ಕೇಂದ್ರದಿಂದ ದಕ್ಷಿಣಕ್ಕೆ ಸುಮಾರು 10 ಕಿ. ಮೀ. ದೂರಕ್ಕಿರುವ ಸಣ್ಣದೊಂದು ಹಳ್ಳಿ. ಇಲ್ಲಿ ಯೇಸು ಕ್ರಿಸ್ತರ ತಾಯಿ ಮೇರಿಗೆ ಸಮರ್ಪಿಸಲ್ಪಟ್ಟ ಬೃಹತ್ ಚರ್ಚ್ ಇದ್ದು ಇಂದು ಬೃಹತ್ ಪುಣ್ಯ ಕ್ಷೇತ್ರವಾಗಿ ಬೆಳೆದು ನಿಂತಿವೆ. ಮಾತೆ ಮೇರಿಯಲ್ಲಿ ದೃಢವಿಶ್ವಾಸದಿಂದ ಏನನ್ನು ಕೇಳಿದರೂ ಅದು ಸಿಗುತ್ತದೆ, ಔಷಧಿಯಲ್ಲವೆಂದು ಭಾವಿಸಲಾದ ಕಾಯಿಲೆಯೂ ವಿಸ್ಮ ಯಕರವಾಗಿ ವಾಸಿಯಾಗುತ್ತದೆ ಎಂಬುದು ಇಲ್ಲಿ ಬರುವ ಭಕ್ತಾದಿಗಳ ನಂಬಿಕೆಯಾಗಿದ್ದು, ಹಾಗಾಗಿ ಈ ಕ್ಷೇತ್ರ “ವೆಲ್ಲಂಕಣಿ ಆರೋಗ್ಯ ಮಾತಾ’ ಎಂದೇ ಖ್ಯಾತಿವೆತ್ತಿದೆ. ವರ್ಷಂಪ್ರತಿ ಈ ಕ್ಷೇತ್ರಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತ ಬರುತ್ತಿದ್ದು ಪ್ರಸಕ್ತ ಇಲ್ಲಿಗೆ ಬರುವವರ ಸಂಖ್ಯೆ ವರ್ಷಕ್ಕೆ ಇಪ್ಪತ್ತು ಮಿಲಿಯಕ್ಕೂ ಹೆಚ್ಚು ಎಂದು ಅಂದಾಜಿಸಲಾಗಿದೆ.
ಇಂದು ಸೆ. 8 ಕ್ಕೆ ಮೇರಿಯ ಹುಟ್ಟುಹಬ್ಬ. ಈ ಹಬ್ಬವನ್ನು ವಿಶ್ವದಾದ್ಯಂತ ಕ್ಯಾಥೋಲಿಕ್ ಕ್ರೆಸ್ತರು ತುಂಬಾ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ವೆಲ್ಲಂಕಣಿಯಲ್ಲಂತೂ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹಬ್ಬಕ್ಕೆ ಪೂರ್ವಭಾವಿಯಾಗಿ ಆಗಸ್ಟ್ 29 ರಿಂದ ದಿನನಿತ್ಯ ಇಲ್ಲಿ ಪೂಜೆ-ಪುರಸ್ಕಾರ ಸೇರಿದಂತೆ ಕೆಲವಾರು ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳುತ್ತದೆ. ಈ ಒಟ್ಟು ಹನ್ನೊಂದು ದಿನಗಳ ಕಾಲ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕೆ ದೇಶ, ದೇಶದ ನಾನಾ ಮೂಲೆಗಳಿಂದ ಇಲ್ಲಿಗೆ ಬರುವ ಒಟ್ಟು ಭಕ್ತಾದಿಗಳ ಸಂಖ್ಯೆ ಮೂವತ್ತು ಲಕ್ಷಕ್ಕೂ ಹೆಚ್ಚು !
ವೆಲ್ಲಂಕಣಿಯನ್ನು ಇಂದು ಪೂರ್ವದ ಲೂರ್ಡ್ಸ್ ಎಂದೂ ಕರೆಯುತ್ತಾರೆ. ಫ್ರಾನ್ಸ್‌ನ ಲೂರ್ಡ್ಸ್ ಎಂಬಲ್ಲಿ ಮೇರಿ ಮಾತೆ ಬರ್ನಡೆಟ್ ಎಂಬಾಕೆಗೆ ಹಲವು ಸಲ ದರ್ಶನ ನೀಡಿದರೆಂಬ ಕಾರಣಕ್ಕೆ ಈ ಸ್ಥಳ ಇಂದು ವಿಶ್ವಖ್ಯಾತ ಪುಣ್ಯಕ್ಷೇತ್ರವಾಗಿ ಬೆಳೆದು ನಿಂತಿದೆ. ಈ ಸ್ಥಳ ಪವಾಡಗಳಿಗೆ ಹೆಸರಾಗಿದೆ. ಇಲ್ಲಿನ ಗವಿಯೊಂದರಿಂದ ಹೊರ ಬರುವ ಚಿಲುಮೆಯ ನೀರನ್ನು ಸೇವಿಸಿದರೆ, ಇಲ್ಲವೇ ಈ ನೀರಲ್ಲಿ ಸ್ನಾನ ಮಾಡಿದರೆ ವಾಸಿ ಪಡಿಸಲಾಗದಂಥ ಎಂಥ ಕಾಯಿಲೆಗಳೂ ಆ ಕ್ಷಣದಲ್ಲೇ ಗುಣವಾಗುತ್ತದೆ ಎಂಬ ದೃಢವಿಶ್ವಾಸ ಇಲ್ಲಿಗೆ ಬರುವ ಭಕ್ತರದ್ದಾಗಿದೆ. ಇಂದು ವರ್ಷಂಪ್ರತಿ ಮಿಲಿ ಯಾಂತರ ಮಂದಿ ಯಾತ್ರಿಕರು ಈ ಕ್ಷೇತ್ರಕ್ಕೆ ತೀರ್ಥಯಾತ್ರೆ ಕೈಗೊಳ್ಳುತ್ತಾರೆ. ಲೂರ್ಡ್ಸ್‌ನಲ್ಲಿ ನಡೆಯುವಂತಹದ್ದೇ ಅದ್ಭುತಗಳು ವೆಲ್ಲಂಕಣಿಯಲ್ಲೂ ನಡೆಯುತ್ತವೆ ಎಂಬ ನಂಬಿಕೆ ಇಲ್ಲಿಗೆ ಬರುವ ಭಕ್ತಾದಿಗಳದ್ದು.
16 ನೆಯ ಶತಮಾನದಲ್ಲಿ ಮೇರಿ ಮಾತೆ ಬಾಲ ಯೇಸುವಿನೊಂದಿಗೆ ಅಂಗವಿಕಲ ಬಾಲಕನೋರ್ವನಿಗೆ ದರ್ಶನ ನೀಡಿ ಆತನ ಮೂಲಕ ಇಲ್ಲಿ ದೇವಾಲಯವೊಂದನ್ನು ನಿರ್ಮಿಸುವಂತೆ ಸ್ಥಳೀಯ ಶ್ರೀಮಂತ ವ್ಯಕ್ತಿಯೋರ್ವನಿಗೆ ಸಂದೇಶ ನೀಡಿದಳು. ಹಾಗೆ ಇಲ್ಲಿ ಸಣ್ಣದೊಂದು ದೇವಾಲಯ ನಿರ್ಮಾಣವಾಯಿತು.
ಇಂದು ಆಚರಿಸುವ ಮಾತೆ ಮೇರಿಯ ಹುಟ್ಟುಹಬ್ಬ. ಇದಕ್ಕೆ ಪೂರ್ವಭಾವಿಯಾಗಿ ಆಗಸ್ಟ್ 29 ರಂದು ಮಾತೆ ಮೇರಿಯ ಚಿತ್ರವುಳ್ಳ ಧ್ವಜವನ್ನು ಆರೋಹಣ ಮಾಡುವುದರೊಂದಿಗೆ ಹಬ್ಬದ ಸಂಭ್ರಮ ಇಲ್ಲಿ ಆರಂಭಗೊಳ್ಳುತ್ತದೆ.
-ಸುನಿಲ್ ಕುಲಾಸೊ