ಮಹಾರಾಷ್ಟ್ರ: ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ ಉದ್ವಿಗ್ನ ಪರಿಸ್ಥಿತಿ ತಲುಪಿ ಕಲ್ಲು ತೂರಾಟ ಉಂಟಾದ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಕಿರಾಡಪುರದಲ್ಲಿ ರಾಮಮಂದಿರದ ಹೊರಗಡೆ ಬುಧವಾರ ರಾತ್ರಿ (ಮಾ.29 ರಂದು) ನಡೆದಿರುವುದು ವರದಿಯಾಗಿದೆ.
ರಾಮಮಂದಿರದ ಹೊರಗಡೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಉಂಟಾಗಿದೆ. ಈ ಜಗಳದ ಸ್ಥಳಕ್ಕೆ ಹೆಚ್ಚಿನ ಜನ ಬಂದಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದೆ. ಗುಂಪುಗಳ ನಡುವೆ ಕಲ್ಲು ತೂರಾಟ ಉಂಟಾಗಿದೆ. ಕೆಲ ಖಾಸಗಿ ಹಾಗೂ ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆದು, ಆ ಬಳಿಕ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಪಾಕ್ ಸರ್ಕಾರದ ಟ್ವಿಟರ್ ಖಾತೆಗೆ ಮತ್ತೆ ತಡೆ
ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಕಾರಣ ಪೊಲೀಸರು ಗುಂಪನ್ನು ಚದುರಿಸಲು ಅಶ್ರುವಾಯು ಶೆಲ್ಗಳನ್ನು ಹಾರಿಸಿದ್ದಾರೆ. ಅಗ್ನಿಶಾಮಕ ದಳದ ಮೂರು ವಾಹನಗಳು ಕೂಡ ಸ್ಥಳಕ್ಕೆ ಧಾವಿಸಿ ಸುಟ್ಟು ಕರಕಲಾದ ವಾಹನಗಳ ಬೆಂಕಿಯನ್ನು ನಂದಿಸಿದ್ದಾರೆ.
Related Articles
ಸದ್ಯ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅಹಿತಕರ ಘಟನೆಗಳು ನಡೆಯದಂತೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ದೇವಸ್ಥಾನದ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದಾರೆ ಎನ್ನುವ ಸುದ್ದಿ ಮೊದಲು ಹಬ್ಬಿತ್ತು. ಈ ಬಗ್ಗೆ ಸ್ವತಃ ಔರಂಗಾಬಾದ್ ಸಂಸದ ಇಮ್ತಿಯಾಜ್ ಜಲೀಲ್ ಅವರು ದೇವಸ್ಥಾನಕ್ಕೆ ಭೇಟಿ ನೀಡಿ, ದೇವಸ್ಥಾನದ ಮೇಲೆ ಯಾವುದೇ ದಾಳಿ ನಡೆದಿಲ್ಲ ಸುಳ್ಳು ಸುದ್ದಿಯನ್ನು ನಂಬಬೇಡಿ. ಶಾಂತಿಯನ್ನು ಕಾಪಾಡಿ ಎಂದಿದ್ದಾರೆ.